ಅಂಬರೀಶ್ ಮತ್ತೆ ಸ್ಪರ್ಧೆ ಮಾಡ್ತಾರಾ? ಹಲವು ನಡೆಗೆ ಕಾರಣವಾಗಿದೆ ರೆಬಲ್ ಸ್ಟಾರ್ ನಡೆ

By Suvarna Web DeskFirst Published Mar 30, 2018, 8:06 AM IST
Highlights

1997ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಅಂಬರೀಶ್, ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಚುನಾವಣೆಯಲ್ಲೇ ಪರಾಭವಗೊಂಡಿದ್ದರು. ಬಳಿಕ

1998ರಲ್ಲಿ ಮಂಡ್ಯಕ್ಕೆ ಬಂದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಜನತಾದಳದಿಂದ ಜಯಭೇರಿ ಬಾರಿಸಿದರು

ಮಂಡ್ಯ(ಮಾ.30): ಮಾಜಿ ಸಚಿವ, ಮಾಜಿ ಸಂಸದ ‘ರೆಬೆಲ್ ಸ್ಟಾರ್’ ಅಂಬರೀಶ್ ಅವರು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧೆ ಮಾಡುತ್ತಾರಾ? ಕಣಕ್ಕಿಳಿಯುತ್ತೇನೆ ಎಂದರೂ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತಾ? ಅಂಬಿ ಸ್ಪರ್ಧಿಸದೇ ಹೋದರೆ, ಅವರ ಬದಲಿಗೆ ಯಾರು ಅಖಾಡಕ್ಕೆ ಇಳಿಯುತ್ತಾರೆ? ಚುನಾವಣೆ ಘೋಷಣೆಯಾಗಿದ್ದರೂ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರಕುತ್ತಿಲ್ಲ.

ಕ್ಷೇತ್ರಕ್ಕೆ ಅಪರೂಪದ ಅತಿಥಿಯಾಗಿರುವ ಅಂಬರೀಶ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಿಂದ ಮಂಡ್ಯ ಜಿಲ್ಲೆಗೆ ಬಂದು ಜನಾಶೀರ್ವಾದ ಯಾತ್ರೆ ನಡೆಸಿದಾಗ ಬೆಂಗಳೂರಿನಲ್ಲಿದ್ದರೂ ಬರಲಿಲ್ಲ. ಅವರ ಈ ನಡೆ ಅಚ್ಚರಿಗೆ ಕಾರಣವಾಗಿದೆ. 1997ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಅಂಬರೀಶ್, ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಚುನಾವಣೆಯಲ್ಲೇ ಪರಾಭವಗೊಂಡಿದ್ದರು. ಬಳಿಕ 1998ರಲ್ಲಿ ಮಂಡ್ಯಕ್ಕೆ ಬಂದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಜನತಾದಳದಿಂದ ಜಯಭೇರಿ ಬಾರಿಸಿದರು.

ನಂತರ ಕಾಂಗ್ರೆಸ್ ಸೇರಿ ಎರಡು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸಿದರು. ಕೇಂದ್ರ ಮಂತ್ರಿಯೂ ಆದರು.2008ರಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಜಿತರಾದರು.2009ರ ಲೋಕಸಭೆ ಚುನಾವಣೆಯಲ್ಲೂ ಹಿನ್ನಡೆ ಅನುಭವಿಸಿದರು. 2013ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ೪೫ ಸಾವಿರ ಮತಗಳಿಂದ ಜಯಭೇರಿ ಬಾರಿಸಿ ಸಚಿವರೂ ಆದರು. ಹಾಲಿ ಶಾಸಕರಾಗಿರುವ ಅವರು ಮಂಡ್ಯದಿಂದ ಮತ್ತೊಮ್ಮೆ ಸ್ಪರ್ಧೆ ಮಾಡುತ್ತಾರಾ ಎಂಬುದೇ ಗೊತ್ತಾಗುತ್ತಿಲ್ಲ. ‘ನನಗೆ ಟಿಕೆಟ್ ಕೊಡುವವರು ಸಿದ್ದರಾಮಯ್ಯ, ಪರಮೇಶ್ವರ್ ಅಲ್ಲ. ಸೋನಿಯಾ ಮೇಡಂ, ರಾಹುಲ್ ಗಾಂಧಿ ಈ ಕುರಿತು ನಿರ್ಧರಿಸುತ್ತಾರೆ.

ಒಂದು ವೇಳೆ ಹೈಕಮಾಂಡ್ ಟಿಕೆಟ್ ಕೊಟ್ಟರೆ ಕಣದಲ್ಲಿ ಇರುತ್ತೇನೆ. ಇಲ್ಲದೇ ಹೋದರೆ ಟಿಕೆಟ್ ಪಡೆವವರ ಗೆಲುವಿಗೆ ನಿಷ್ಠೆಯಿಂದ ದುಡಿಯುತ್ತೇನೆ’ ಎಂದು ಇತ್ತೀಚೆಗೆ ಅಂಬರೀಶ್ ಹೇಳಿದ್ದರು. ಹೀಗಾಗಿ ಅವರು ಗಂಭೀರವಾಗಿ ಟಿಕೆಟ್‌ಗೆ ಪ್ರಯತ್ನಿಸುತ್ತಿಲ್ಲ. ಅರ್ಜಿಯನ್ನೂ ಸಲ್ಲಿಸದೇ ನಿರ್ಲಿಪ್ತರಾಗಿದ್ದಾರೆ. ಇದೇ ವೇಳೆ ತಮ್ಮ ಬದಲು ಪತ್ನಿ ಅಥವಾ ಪುತ್ರನನ್ನು ಕಣಕ್ಕಿಳಿಸಲು ಸುತಾರಾಂ ಒಪ್ಪುತ್ತಿಲ್ಲ. ಅಂಬರೀಶ್ ಆರೋಗ್ಯ, ಜನರ ಒಲವು, ಗೆಲ್ಲುವ ಗುರಿಗಳ ಬಗ್ಗೆ ಕಾಂಗ್ರೆಸ್ಸಿಗರು ಲೆಕ್ಕಾಚಾರ ಹಾಕುತ್ತಿದ್ದು, ಎಲ್ಲ ಕೋನಗಳಿಂದಲೂ ಚಿಂತನೆ ಮಾಡಿ ಟಿಕೆಟ್ ಘೋಷಿಸುತ್ತಾರೆ ಎಂಬ ಮಾತುಗಳಿವೆ.ಒಂದು ವೇಳೆ, ಅಂಬರೀಶ್ ಸ್ಪರ್ಧೆಯಿಂದ ಹಿಂದೆ ಸರಿದಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಲು ಸಾಕಷ್ಟು ಆಕಾಂಕ್ಷಿಗಳು

ಇದ್ದಾರೆ. ಗಣಿಗ ರವಿ ಕುಮಾರ್ ಗೌಡ, ಮಾಜಿ ಸಚಿವ ಎಂ. ಎಸ್. ಆತ್ಮಾನಂದ, ಹಾಲಹಳ್ಳಿ ರಾಮಲಿಂಗಯ್ಯ ಸೇರಿದಂತೆ ಅನೇಕರು ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಜೆಡಿಎಸ್ ಟಿಕೆಟ್‌ಗೆ ಮಾಜಿ ಶಾಸಕ ಎಂ.ಶ್ರೀನಿವಾಸ್, ಡಾ| ಕೃಷ್ಣ , ಅಶೋಕ್ ಜಯರಾಂ, ಕೀಲಾರ ರಾಧಾಕೃಷ್ಣ , ಚಂದಗಾಲು ಶಿವಣ್ಣ ಮತ್ತಿತರರು ಪ್ರಯತ್ನಿಸುತ್ತಿದ್ದಾರೆ. ‘5 ರುಪಾಯಿ ಡಾಕ್ಟರ್’ ಡಾ| ಶಂಕರೇಗೌಡ ಕೂಡ ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ. ಕಾದು ನೋಡುವ ತಂತ್ರಕ್ಕೆ ಶರಣಾಗಿರುವ ಬಿಜೆಪಿ, ಕಾಂಗ್ರೆಸ್- ಜೆಡಿಎಸ್ ಟಿಕೆಟ್ ವಂಚಿತರತ್ತ ದೃಷ್ಟಿಹರಿಸಿದೆ.

ಜೆಡಿಎಸ್‌ನ ಎಂ. ಶ್ರೀನಿವಾಸ್ ಹೊರತುಪಡಿಸಿ 1984ರಿಂದಲೂ ಕ್ಷೇತ್ರದಿಂದ ಯಾರೊಬ್ಬರೂ ಸತತ ಎರಡನೇ ಅವಧಿಗೆ ಆಯ್ಕೆಯಾಗಿಲ್ಲ. ಎಸ್.ಡಿ. ಜಯರಾಂ, ಎಂ.ಎಸ್. ಆತ್ಮಾನಂದ ಅವರು ಬೇರೆ ಅವಧಿಗೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಭಾವತಿ ಜಯರಾಂ, ಅಂಬರೀಶ್ ಒಂದುಬಾರಿ ಶಾಸಕರಾಗಿದ್ದಾರೆ.

- ಕೆ.ಎನ್. ರವಿ

click me!