ಯಾರಾಗ್ತಾರೆ ಬೆಂಗಳೂರಿನ 50ನೇ ಮೇಯರ್?

By Internet DeskFirst Published Sep 27, 2016, 5:55 AM IST
Highlights

ಬೆಂಗಳೂರು: ಬಿಬಿಎಂಪಿಯಲ್ಲಿ ಎರಡನೇ ಅವಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಕೆ ಖಚಿತವಾಗಿದ್ದು, ಬೆಂಗಳೂರಿನ 50ನೇ ಮೇಯರ್ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಮಂಗಳವಾರ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಮೇಯರ್ ಅಭ್ಯರ್ಥಿ ಹೆಸರು ಅಂತಿಮವಾಗೊಳ್ಳುವ ಸಾಧ್ಯತೆ ಇದೆ. ಇನ್ನೊಂದೆಡೆ ಬಿಜೆಪಿ ಕೂಡ ಮಂಗಳವಾರ ಸಭೆ ಕರೆದಿದ್ದು, ಅಕಾರ ಹಿಡಿಯಲು ಅಗತ್ಯವಾದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಿದೆ.

ಆರಂಭದಲ್ಲಿ ಮೇಯರ್ ಸ್ಥಾನಕ್ಕೆ ಪ್ರಕಾಶ್ ನಗರ ವಾರ್ಡ್‌ನ ಜಿ.ಪದ್ಮಾವತಿ ಹೆಸರು ಕೇಳಿಬಂದಿತ್ತು. ಚುನಾವಣೆ ಸಮೀಪಿಸುತ್ತಿದ್ದಂತೆ ಮೇಯರ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಶಾಂತಿನಗರ ಸೌಮ್ಯ ಶಿವಕುಮಾರ್, ಲಿಂಗರಾಜಪುರ ವಾರ್ಡ್ ಲಾವಣ್ಯ ಗಣೇಶ್‌ರೆಡ್ಡಿ ಇತರ ಆಕಾಂಕ್ಷಿಗಳು ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ.

Latest Videos

ಕಳೆದ ಒಂದು ವರ್ಷದಿಂದ ಪಾಲಿಕೆಯ ಆಡಳಿತ ಅಸ್ಥಿರಗೊಳಿಸಲು ಬಿಜೆಪಿ ನಡೆಸಿರುವ ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿಯೂ ಸಮರ್ಥರಿಗೆ ಮೇಯರ್ ಸ್ಥಾನ ನೀಡುವಂತೆ ಸಿಎಂ, ಹಿರಿಯ ನಾಯಕರಿಗೆ ಸೂಚಿಸಿದ್ದಾರೆ. ಅನನುಭವಿಗಳಿಗೆ ಮೇಯರ್ ಸ್ಥಾನ ನೀಡಿದರೆ ಬಿಜೆಪಿ ಸದಸ್ಯರ ಪ್ರತಿಭಟನೆ ಹಾಗೂ ಹೋರಾಟಗಳಿಗೆ ಉತ್ತರ ನೀಡುವುದು ಕಷ್ಟವಾಗಲಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆೆ ಎಂದು ತಿಳಿದುಬಂದಿದೆ. ಹಾಗಾಗಿ ಮೇಯರ್ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿದೆ.

ಮೈತ್ರಿ ಖಚಿತವಾಗುತ್ತಿದ್ದಂತೆ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಲಾಬಿ ಶುರುವಾಗಿದೆ. ಕಾಂಗ್ರೆಸ್‌ನ ಬಹುತೇಕ ಬಿಬಿಎಂಪಿ ಸದಸ್ಯರು ಜಿ.ಪದ್ಮಾವತಿ ಪರ ಲಾಬಿ ನಡೆಸುತ್ತಿದ್ದರೆ, ಜೆಡಿಎಸ್‌ನ ಪ್ರಮುಖರು ಸೌಮ್ಯ ಶಿವಕುಮಾರ್ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗಿದೆ. ಹಾಗಾಗಿ ಪೈಪೋಟಿ ತೀವ್ರವಾಗಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಬಹುತೇಕ ಖಚಿತವಾಗಿರುವುದರಿಂದ ಚುನಾವಣೆಯಲ್ಲಿ ಅನಾಯಾಸವಾಗಿ ಗೆಲುವು ಸಾಸುವ ಉತ್ಸಾಹದಲ್ಲಿ ಎರಡೂ ಪಕ್ಷಗಳಿವೆ. ಇಷ್ಟಾದರೂ ಕಾಂಗ್ರೆಸ್ ಪಕ್ಷೇತರರನ್ನು ವಿಶ್ವಾಸದಲ್ಲಿರಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದೆ.

ಮೇಯರ್ ಆಯ್ಕೆ ಸಭೆ:
ಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಮಂಗಳವಾರ ಮಧ್ಯಾಹ್ನ ಕೆಪಿಸಿಸಿ ಅಧ್ಯಕ್ಷರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು, ಬಿಬಿಎಂಪಿ ಸದಸ್ಯರ ಸಭೆ ನಡೆಯಲಿದೆ. ಸಭೆಯಲ್ಲಿ ಮೇಯರ್ ಸ್ಥಾನದ ಅಭ್ಯರ್ಥಿ ಜತೆಗೆ ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳನ್ನು ಅಖೈರುಗೊಳಿಸುವ ಸಂಭವವಿದೆ.

ಉಪ ಮೇಯರ್ ಸ್ಥಾನ ಯಾರಿಗೆ?
ಉಪ ಮೇಯರ್ ಸ್ಥಾನ ಜೆಡಿಎಸ್‌ನಲ್ಲಿ ಯಾರಿಗೆ ಒಲಿಯಲಿದೆ ಎಂಬ ಚರ್ಚೆ ಜೋರಾಗೇ ನಡೆದಿದೆ. ಆನಂದ್ ಅವರನ್ನು ಉಪ ಮೇಯರ್ ಅಭ್ಯರ್ಥಿಯನ್ನಾಗಿ ಮಾಡಲು ಜೆಡಿಎಸ್‌ನಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ. ಆದರೆ ಮೊದಲ ಅವಯಲ್ಲಿ ಜೆಡಿಎಸ್ ಪಕ್ಷದ ನಾಯಕರಾಗಿದ್ದವರಿಗೇ ಮತ್ತೆ ಉಪ ಮೇಯರ್ ಸ್ಥಾನ ನೀಡುವರೇ ಎಂಬ ಪ್ರಶ್ನೆಯೂ ಮೂಡಿದೆ. ನಾಗಪುರ ವಾರ್ಡ್‌ನ ಭದ್ರೇಗೌಡ, ಪಾದರಾಯನಪುರ ವಾರ್ಡ್‌ನ ಇಮ್ರಾನ್ ಪಾಷ ಕೂಡ ಉಪಮೇಯರ್ ಹುದ್ದೆಗೆ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣೆಗೆ ಸಕಲ ಸಿದ್ಧತೆ:
ಸೆ.28ರಂದು ನಡೆಯಲಿರುವ ಮೇಯರ್, ಉಪಮೇಯರ್ ಹಾಗೂ 12 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆಗೆ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚುನಾವಣೆ ದಿನದಂದು ಭದ್ರತೆಗಾಗಿ 150ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಇನ್ನು ನಾಮಪತ್ರ ಸಲ್ಲಿಕೆ ಕೊಠಡಿ, ಚುನಾವಣಾ ಕೊಠಡಿಯಲ್ಲಿ 10 ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸೇರಿ ಇತರ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.

(ಕನ್ನಡಪ್ರಭ ವಾರ್ತೆ)

click me!