ಭಾರತ ಸರಕಾರ ಸಿಂಧೂ ನದಿ ನೀರನ್ನು ತಡೆದರೆ ಪಾಕಿಸ್ತಾನಕ್ಕೆ ಆಗುವ ಹಾನಿ ಏನು? ಇಲ್ಲಿವೆ 5 ಭೀಕರ ಭವಿಷ್ಯಗಳು

By Internet DeskFirst Published Sep 27, 2016, 5:12 AM IST
Highlights

ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿದರೆ ಪಾಕಿಸ್ತಾನಕ್ಕೆ ಮರ್ಮಾಘಾತ ಕೊಟ್ಟಂತಾಗುತ್ತದೆ. ಯಾವುದೇ ಮಿಲಿಟರಿ ದಾಳಿಗಿಂತ ಹೆಚ್ಚು ಘಾಸಿಯಾಗುತ್ತದೆ. ಪಾಕಿಸ್ತಾನದೊಳಗೆ ಆಂತರಿಕ ಬಿಕ್ಕಟ್ಟು ತಾರಕಕ್ಕೇರುತ್ತದೆ.

ನವದೆಹಲಿ: ಉರಿ ಸೆಕ್ಟರ್'ನಲ್ಲಿ ಸೇನಾ ನೆಲೆ ಮೇಲೆ ಪಾಕ್ ಪ್ರಚೋದಿತ ಉಗ್ರರು ದಾಳಿ ನಡೆಸಿದ ಘಟನೆ ಭಾರತಕ್ಕೆ ಭಯಂಕರ ಸಿಟ್ಟು ತರಿಸಿದೆ. ಪಾಕ್ ವಿರುದ್ಧ ನೇರ ಮಿಲಿಟರಿ ಕಾರ್ಯಾಚರಣೆ ನಡೆಸುವ ಮುನ್ನ ಬೇರೆ ಮಾರ್ಗಗಳ ಮೂಲಕ ಪಾಕಿಸ್ತಾನವನ್ನು ಬಗ್ಗುಬಡಿಯುವ ಸಾಧ್ಯತೆ ಬಗ್ಗೆ ಕೇಂದ್ರ ಸರಕಾರ ಗಂಭೀರ ಲೆಕ್ಕಾಚಾರದಲ್ಲಿ ತೊಡಗಿದೆ. ಈ ಮಾರ್ಗಗಳ ಪೈಕಿ ಸಿಂಧೂ ನದಿ ನೀರು ಒಪ್ಪಂದ (ಇಂಡಸ್ ವಾಟರ್ಸ್ ಟ್ರೀಟಿ) ಕೂಡ ಒಂದು. ಟಿಬೆಟ್'ನಲ್ಲಿ ಹುಟ್ಟಿ ಕಾಶ್ಮೀರ ಹಾಗೂ ಪಾಕ್ ಮೂಲಕ ಅರೆಬಿಯನ್ ಸಮುದ್ರ ಸೇರುವ ಸಿಂಧೂ ನದಿ ಬರೋಬ್ಬರಿ ಸುಮಾರು 3 ಸಾವಿರ ಕಿ.ಮೀ. ದೂರ ಹರಿಯುತ್ತದೆ. 1960ರಲ್ಲಿ ಭಾರತ ಮತ್ತು ಪಾಕ್ ನಡುವೆ ಈ ಒಪ್ಪಂದ ನಡೆದಿತ್ತು. ಅದರ ಪ್ರಕಾರ ಸಿಂಧೂ ನದಿ ನೀರಿನಲ್ಲಿ ಭಾರತದ ಪಾಲು 20% ಇರಬೇಕು; ಪಾಕ್ ಪಾಲು 80% ಇರಬೇಕೆಂದಿದೆ. ಬಹುಪಾಲು ಪಾಕಿಸ್ತಾನದ ಜೀವನದಿಯಾಗಿರುವ ಈ ಸಿಂಧೂ ನದಿಯನ್ನು ಕಾಶ್ಮೀರದಲ್ಲೇ ತಡೆಹಿಡಿಯುವುದು ನರೇಂದ್ರ ಮೋದಿಯವರ ಚಿಂತನೆ. ಹೀಗೆ ಮಾಡಿದರೆ ಪಾಕಿಸ್ತಾನಕ್ಕೆ ಆಗುವ ಅನಾಹುತಗಳೇನು? ಇಲ್ಲಿದೆ ಒಂದು ಲೆಕ್ಕಾಚಾರ...

1) ಕ್ಷಾಮ ಸ್ಥಿತಿ:
ಪಾಕಿಸ್ತಾನದ ಶೇ.90ರಷ್ಟು ಕೃಷಿ ಚಟುವಟಿಕೆಗೆ ಆಧಾರವಾಗಿರುವುದೇ ಸಿಂಧೂ ನದಿ. ಈ ನದಿ ನೀರು ಸಿಗದೇ ಹೋದರೆ ಭೀಕರ ಕ್ಷಾಮ ಆವರಿಸುತ್ತದೆ. ಪಾಕ್ ಬರ್ಬಾದ್ ಆಗುವ ಸ್ಥಿತಿ ಬರುತ್ತದೆ.

2) ನಿರುದ್ಯೋಗ ಹೆಚ್ಚಳ:
ಪಾಕ್'ನ ಆರ್ಥಿಕತೆಗೆ ಕೃಷಿಯ ಕೊಡುಗೆ ಶೇ. 19. ಅಲ್ಲದೇ, ದೇಶದ ಒಟ್ಟು ಉದ್ಯೋಗಗಳ ಪೈಕಿ ಶೇ.42ಕ್ಕಿಂತ ಹೆಚ್ಚು ಪ್ರಮಾಣ ಕೃಷಿ ಕ್ಷೇತ್ರದಲ್ಲೇ ಇದೆ. ಕ್ಷಾಮ ಆವರಿಸಿದರೆ ಆರ್ಥಿಕತೆಯ ಮೇಲೆ ಹೊಡೆತ ಬೀಳುವುದಲ್ಲದೇ ನಿರುದ್ಯೋಗ ಪ್ರಮಾಣ ದುಪ್ಪಟುಗೊಳ್ಳುತ್ತದೆ.

3) ಬಡತನ ಪ್ರಮಾಣ ಏರಿಕೆ:
ಪಾಕಿಸ್ತಾನದ ಕೈಗಾರಿಕೆಗಳಿಗೆ ಸಾಕಷ್ಟು ಕಚ್ಛಾ ವಸ್ತುಗಳು ಪೂರೈಕೆಯಾಗುವುದು ಕೃಷಿ ಕ್ಷೇತ್ರದಿಂದಲೇ. ಬಡತನ ನಿಯಂತ್ರಣಕ್ಕೆ ಕೃಷಿ ಕ್ಷೇತ್ರ ಸಾಕಷ್ಟು ಪರಿಣಾಮಕಾರಿ ಕೆಲಸ ಮಾಡುತ್ತಿದೆ. ಇಷ್ಟಾಗಿಯೂ 60%ಕ್ಕಿಂತ ಹೆಚ್ಚು ಪಾಕಿಸ್ತಾನೀಯರು ಬಡವರಾಗಿದ್ದಾರೆ. ಸಿಂಧೂ ನದಿ ನೀರು ಒಪ್ಪಂದ ರದ್ದುಗೊಂಡರೆ ಪಾಕ್'ನಲ್ಲಿ ಬಡತನದ ಸಮಸ್ಯೆ ವಿಪರೀತಕ್ಕೇರುತ್ತದೆ.

4) ವಿದ್ಯುತ್ ಉತ್ಪಾದನೆ, ಕೈಗಾರಿಕೆಗಳಿಗೆ ಹೊಡೆತ:
ಪಾಕಿಸ್ತಾನದ ನೀರಾವರಿ, ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರಿಗೆ ಆಧಾರವಾಗಿರುವುದು ಸಿಂಧೂ ನದಿಯೇ. ಈ ನದಿ ನೀರು ನಿಂತುಹೋದರೆ ಆ ದೇಶದ ವಿದ್ಯುತ್ ಉತ್ಪಾದನೆಗೆ ಹೊಡೆತ ಬೀಳುತ್ತದೆ. ಜನರಿಗೆ ಕುಡಿಯಲು ನೀರಿಲ್ಲದೇ ಹಾಹಾಕಾರ ಮಾಡುವ ಸ್ಥಿತಿ ಬರುತ್ತದೆ. ಅಲ್ಲಿಯ ಕೈಗಾರಿಕೆಗಳ ನೀರಿನ ದಾಹ ತಾಳಿಕೊಳ್ಳಲಾರದಷ್ಟು ಮಟ್ಟಕ್ಕೆ ಹೋಗುತ್ತದೆ.

5) ಪಾಕ್'ಗೆ ಮರ್ಮಾಘಾತ:
ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿದರೆ ಪಾಕಿಸ್ತಾನಕ್ಕೆ ಮರ್ಮಾಘಾತ ಕೊಟ್ಟಂತಾಗುತ್ತದೆ. ಯಾವುದೇ ಮಿಲಿಟರಿ ದಾಳಿಗಿಂತ ಹೆಚ್ಚು ಘಾಸಿಯಾಗುತ್ತದೆ. ಪಾಕಿಸ್ತಾನದೊಳಗೆ ಆಂತರಿಕ ಬಿಕ್ಕಟ್ಟು ತಾರಕಕ್ಕೇರುತ್ತದೆ.

ಮೇಲೆ ತಿಳಿಸಿದ ಸಂಗತಿಗಳು ಭಾರತವೇನಾದರೂ ಜಲ ಒಪ್ಪಂದವನ್ನು ರದ್ದುಗೊಳಿಸಿದರೆ ಆಗುವ ಪರಿಣಾಮಗಳು. ಆದರೆ, ಭಾರತ ಇಂಥ ರಿಸ್ಕ್ ತೆಗೆದುಕೊಳ್ಳುವುದು ಕಷ್ಟಸಾಧ್ಯ. ಸಿಂಧೂ ನದಿ ನೀರಿ ಒಪ್ಪಂದದಲ್ಲಿರುವ ಅಂಶಗಳನ್ನೇ ಇಟ್ಟುಕೊಂಡು ನೀರನ್ನು ಹೆಚ್ಚು ಬಳಸಿಕೊಳ್ಳಲು ಭಾರತ ಸರಕಾರ ನಿರ್ಧರಿಸಿದೆ. ಪಾಕ್'ಗೆ ನೀರಿನ ಹರಿವನ್ನ ಸಾಧ್ಯವಾದಷ್ಟೂ ಮಟ್ಟಿಗೆ ಇಳಿಸುವುದು ಕೇಂದ್ರದ ಚಿಂತನೆ. ಇಷ್ಟು ಮಾಡಿದರೂ ಪಾಕಿಸ್ತಾನಕ್ಕೆ ಸಾಕಷ್ಟು ಹೊಡೆತ ಬಿದ್ದಂತಾಗುತ್ತದೆ.

click me!