
ಚೆನ್ನೈ(ಅ.7): ಅನಾರೋಗ್ಯ ಪೀಡಿತರಾಗಿರುವ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಚಿಕಿತ್ಸೆ ಮುಂದುವರಿದಿರುವ ನಡುವೆಯೇ, ರಾಜ್ಯಕ್ಕೆ ಮಧ್ಯಂತರ ಮುಖ್ಯಮಂತ್ರಿಯನ್ನು ನೇಮಕ ಮಾಡಲಾಗುವುದು ಎಂಬ ಸುದ್ದಿಯೂ ಕೇಳಿಬರತೊಡಗಿದೆ. ಇದಕ್ಕೆ ಎಐಎಡಿಎಂಕೆ ಸಿದ್ಧವಾಗಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಆದರೆ, ಬಹುತೇಕ ಮಂದಿ ಬಹುಸಂಖ್ಯಾತ ಥೇವಾರ್ ಸಮುದಾಯಕ್ಕೆ ಸೇರಿದ ಒ ಪನ್ನೀರ್‌ಸೆಲ್ವಂ ಅವರೇ ಮಧ್ಯಂತರ ಸಿಎಂ ಆಗಲಿ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೊಂದೆಡೆ, ಮತ್ತೊಮ್ಮೆ ಥೇವಾರ್ ಸಮುದಾಯದವರನ್ನೇ ಸಿಎಂ ಮಾಡಿದರೆ, ಗೌಂಡರ್ ಸಮುದಾಯದ ನಾಯಕರು ಸಿಟ್ಟಿಗೇಳಬಹುದು ಹಾಗೂ ಇದು ಪಕ್ಷದಲ್ಲಿ ಆಂತರಿಕ ಕಚ್ಚಾಟಕ್ಕೆ ಕಾರಣವಾಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಸಂಭಾವ್ಯ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡಿರುವ ಪಕ್ಷವು, ಜಯಲಲಿತಾ ಅವರನ್ನೇ ಸಿಎಂ ಆಗಿ ಮುಂದುವರಿಸಿ, ಅವರ ಕೈಯ್ಯಲ್ಲಿರುವ ಇಲಾಖೆಗಳನ್ನು ಹಿರಿಯ ಸಚಿವರಿಗೆ ಹಂಚುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈಗಾಗಲೇ ಪನ್ನೀರ್‌ಸೆಲ್ವಂ ಬೆಂಬಲಿಗರು ಮತ್ತು ಗೌಂಡರ್ ಸಮುದಾಯದ ಎಂ ತಂಬೀದುರೈ ಬೆಂಬಲಿಗರ ನಡುವೆ ಶೀತಲ ಸಮರ ಆರಂಭವಾಗಿದ್ದು, ಬಿಜೆಪಿ ಕೂಡ ತಂಬಿದುರೈ ಅವರಿಗೆ ಬೆಂಬಲ ಸೂಚಿಸುವ ಲಕ್ಷಣಗಳು ಗೋಚರಿಸತೊಡಗಿವೆ ಎಂದೂ ವರದಿ ತಿಳಿಸಿದೆ.
ಆರೋಗ್ಯ ವಿಚಾರಿಸಿದ ರಾಹುಲ್: ಸಿಎಂ ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಅಪೋಲೋ ಆಸ್ಪತ್ರೆಗೆ ಶುಕ್ರವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂ ಭೇಟಿ ನೀಡಿದ್ದಾರೆ. ‘‘ಜಯಲಲಿತಾಜೀ ಆರೋಗ್ಯ ಸುಧಾರಣೆಯಾಗುತ್ತಿದ್ದು, ಅವರು ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ ಎಂಬ ಭರವಸೆಯಿದೆ,’’ ಎಂದು ಹೇಳಿದ್ದಾರೆ. ಇನ್ನೊಂದೆಡೆ, ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಶುಕ್ರವಾರ ರಾಜ್ಯದ ಇಬ್ಬರು ಹಿರಿಯ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿ ಪಿ ರಾಮಮೋಹನ ರಾವ್ ಅವರನ್ನು ಕರೆಸಿಕೊಂಡು, ರಾಜ್ಯದ ಆಡಳಿತದ ಕುರಿತು ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪತ್ರ ಬರೆದಿದ್ದಾರೆ. ಸಿಎಂ ಜಯಲಲಿತಾ ಆಸ್ಪತ್ರೆ ದಾಖಲಾದ ಬಳಿಕ ಇಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸ್ಲೀಪರ್‌ಸೆಲ್‌ನಂತಿದ್ದ ಐಎಸ್, ನಕ್ಸಲ್ ಮತ್ತು ಎಲ್‌ಟಿಟಿಇ ಉಗ್ರ ಸಂಘಟನೆಗಳು ಶಾಂತಿ ಕದಡಲು ಯತ್ನಿಸುತ್ತಿವೆ. ಹಾಗಾಗಿ, ಜಯಲಲಿತಾ ಆರೋಗ್ಯ ಸುಧಾರಣೆಯಾಗುವವರೆಗೂ(6 ತಿಂಗಳು) ತಮಿಳುನಾಡು ವಿಧಾನಸಭೆ ಅಮಾನತಿನಲ್ಲಿಟ್ಟು, ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕೆಂದು ಸ್ವಾಮಿ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.