
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸರಿಯಾಗಿ ಒಂದು ವರ್ಷ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ‘ಆಧುನಿಕ ಚಾಣಕ್ಯ' ಎಂದೇ ಕರೆಯಲ್ಪಡುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಯಾವಾಗ ಭೇಟಿ ನೀಡುತ್ತಾರೆ ಎಂಬುದು ಇದೀಗ ಕುತೂಹಲದ ಸಂಗತಿಯಾಗಿದೆ.
ಸಾಮಾನ್ಯವಾಗಿ ಒಂದು ರಾಜ್ಯದ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ತಮ್ಮ ತಂತ್ರಗಾರಿಕೆ ಆರಂಭಿಸುವುದು ಅಮಿತ್ ಶಾ ಅವರ ಕಾರ್ಯಶೈಲಿ. ಆ ರಾಜ್ಯಕ್ಕೆ ಆಗಾಗ ಭೇಟಿ ನೀಡುವುದು, ತಮ್ಮ ತಂಡದ ಸದಸ್ಯರನ್ನು ಆಯಾ ರಾಜ್ಯಗಳ ಪಕ್ಷದ ಮುಖಂಡರಿಗೆ ಗೊತ್ತಾಗದಂತೆ ಕಳುಹಿಸಿ ಅಲ್ಲಿನ ಪರಿಸ್ಥಿತಿ ಅರಿತುಕೊಳ್ಳುವುದು, ಕ್ಷೇತ್ರವಾರು ಲೆಕ್ಕಾಚಾರ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದು ಶಾ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಮಾಡಿಕೊಂಡು ಬಂದಿರುವಂಥದ್ದು. ಹೀಗಾಗಿಯೇ ಕೇವಲ ಬಿಜೆಪಿಯಷ್ಟೇ ಅಲ್ಲದೆ, ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಅಮಿತ್ ಶಾ ಅವರ ಆಗಮನದ ಬಗ್ಗೆ ಕುತೂಹಲ ಕೆರಳಿದೆ.
ಕಳೆದ ವಾರ ಒಡಿಶಾದ ಭುವನೇಶ್ವರದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ವೇಳೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬರುವ ಮೇ 6 ಮತ್ತು 7ರಂದು ಮೈಸೂರಿನಲ್ಲಿ ಆಯೋಜಿಸಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಗೆ ಆಗಮಿಸುವ ಮೂಲಕ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಮುಖಂಡರನ್ನು ಉದ್ದೇಶಿಸಿ ಸಲಹೆ-ಸೂಚನೆ ಗಳನ್ನು ನೀಡಬೇಕು ಎಂಬ ಮನವಿ ಮಾಡಿದ್ದರು.
ಯಡಿಯೂರಪ್ಪ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಮಿತ್ ಶಾ ಅವರು, ತಮ್ಮ ಪ್ರವಾಸದ ವಿವರ ಗಮನಿಸಿ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಮೂರ್ನಾಲ್ಕು ದಿನಗಳಲ್ಲಿ ಸ್ಪಷ್ಟಚಿತ್ರಣ ಹೊರಬೀಳಲಿದೆ. ಒಂದು ವೇಳೆ ರಾಜ್ಯ ಕಾರ್ಯಕಾರಿಣಿ ಸಭೆಗೆ ಆಗಮಿಸಲು ಸಾಧ್ಯವಾಗದಿದ್ದರೂ ಶೀಘ್ರದಲ್ಲೇ ಪ್ರವಾಸ ಹಮ್ಮಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.