ಬಿ.ಎಲ್‌. ಶಂಕರ್‌ಗೆ ರಾಹುಲ್‌ ಬುಲಾವ್‌

By Suvarna Web DeskFirst Published Apr 21, 2017, 7:46 AM IST
Highlights

ಎಐಸಿಸಿ ಜವಾಬ್ದಾರಿಗಾಗಿ ಕರೆ | ಅನ್ಯ ಪಕ್ಷದತ್ತ ತೆರಳದೇ ‘ಕೈ'ನಲ್ಲೇ ಶಂಕರ್‌ ಗಟ್ಟಿ

ಅನ್ಯ ಪಕ್ಷಗಳತ್ತ ಮುಖ ಮಾಡಿದ್ದಾರೆ ಎನ್ನಲಾಗಿದ್ದ ಕಾಂಗ್ರೆಸ್‌ ನಾಯಕ ಬಿ.ಎಲ್‌. ಶಂಕರ್‌ ಅವರು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದು, ರಾಷ್ಟ್ರಮಟ್ಟದಲ್ಲಿ ಪಕ್ಷ ಸಂಘಟನೆ ದಿಸೆಯಲ್ಲಿ ತೊಡಗಿಕೊಳ್ಳುವಂತೆ ಸೂಚನೆ ಪಡೆದಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಪಕ್ಷ ದುರ್ಬಲವಾಗು ತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಪಕ್ಷವನ್ನು ಹೇಗೆ ಕಟ್ಟಬೇಕು? ಪ್ರಧಾನಿ ಮೋದಿಯತ್ತ ಆಕರ್ಷಿತವಾಗುತ್ತಿರುವ ಯುವ ಸಮೂಹ ವನ್ನು ಪಕ್ಷದೊಂದಿಗೆ ಹೇಗೆ ಕಟ್ಟಿಹಾಕಬೇಕು ಎಂಬ ಬಗ್ಗೆ ಚರ್ಚಿಸಲು ಎಐಸಿಸಿಯು ರಾಷ್ಟ್ರದ ವಿವಿಧ ರಾಜ್ಯಗಳ ಸುಮಾರು 45 ಜನರೊಂದಿಗೆ ರಾಹುಲ್‌ ಗಾಂಧಿ ಅವರ ಸಂವಾದವನ್ನು ಆಯೋಜಿಸಿತ್ತು. ಈ ಸಂವಾದದಲ್ಲಿ ರಾಜ್ಯದಿಂದ ಬಿ.ಎಲ್‌. ಶಂಕರ್‌ ಹಾಗೂ ಶಾಸಕ ಎನ್‌.ಎ. ಹ್ಯಾರೀಸ್‌ ಭಾಗವಹಿಸಿದ್ದರು.

ಈ ವೇಳೆ ರಾಹುಲ್‌ಗಾಂಧಿ ಅವರು ಎಐಸಿಸಿಯಲ್ಲಿ ಕೆಲಸ ಮಾಡುವ ಆಹ್ವಾನವನ್ನು ಶಂಕರ್‌ ಅವರಿಗೆ ನೀಡಿದ್ದು, ತಿಂಗಳಲ್ಲಿ 10ರಿಂದ 15 ದಿನ ಎಐಸಿಸಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕಾ ಗುತ್ತದೆ ಎಂದು ಸೂಚಿಸಿದರು ಎನ್ನಲಾಗಿದೆ. ಆದರೆ, ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪವಿರುವುದರಿಂದ ರಾಜ್ಯದಲ್ಲಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಚುನಾವಣೆ ನಂತರ ಸಕ್ರಿಯವಾಗಿ ಎಐಸಿಸಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಾಗಿ ಶಂಕರ್‌ ಅವರು ತಿಳಿಸಿದರು ಎನ್ನಲಾಗಿದೆ.

ಎಸ್‌.ಎಂ. ಕೃಷ್ಣ ಪಕ್ಷ ತೊರೆದ ನಂತರ ಬಿ.ಎಲ್‌. ಶಂಕರ್‌ ಅವರು ಅದೇ ಹಾದಿ ಹಿಡಿಯಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ, ಹೈಕಮಾಂಡ್‌ ಶಂಕರ್‌ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದಲ್ಲದೇ, ಅವರಿಗೆ ಶೀಘ್ರ ಎಐಸಿಸಿ ಪ್ರದಾನ ಕಾರ್ಯದರ್ಶಿ ಹುದ್ದೆ ನೀಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಂಕರ್‌ ಹಾಗೂ ರಾಹುಲ್‌ ಗಾಂಧಿ ಭೇಟಿ ಮಹತ್ವ ಪಡೆದಿದ್ದು, ಶಂಕರ್‌ ಅವರು ಎಐಸಿಸಿಯಲ್ಲಿ ಇನ್ನು ಮುಂದೆ ಹೆಚ್ಚು ಸಕ್ರಿಯವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

click me!