
ನರಹಂತಕ ವೀರಪ್ಪನ್ ಹೆಸರು ಕೇಳಿದ್ರೆ ಸಾಕು. ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ನಿದ್ದೆಗೆಡುತ್ತಿದ್ದರು. ಯಾಕಂದ್ರೆ, ವೀರಪ್ಪನ್ ನ ಅಟ್ಟಹಾಸ ಎಲ್ಲೆ ಮೀರಿಸುತ್ತಿದ್ದ ಕಾಲವದು. 1990 ರಿಂದ 1992 ರವರೆಗೆ ವೀರಪ್ಪನ್ ಸೃಷ್ಟಿಸಿದ ರಕ್ತ ಸಿಕ್ತ ಅಧ್ಯಾಯ ಗಳನ್ನ ಕಂಡ ಯಾವ ಪೊಲೀಸ್ರು ಮಲೆ ಮಹದೇಶ್ವರ ಬೆಟ್ಟಕ್ಕೆ ಡ್ಯೂಟಿ ಮಾಡಲು ಹಿಂದೇಟು ಹಾಕುತ್ತಿದ್ದರು.ಎಸ್ ಟಿ ಎಫ್ ಡ್ಯೂಟಿ ಅಂದರೆ, ಅದು ಸಾವಿನ ಜೊತೆ ಸೆಣಸಾಟವಂತೆಯೇ. ಅಂತಾ ವೀರಪ್ಪನ ಕಾರ್ಯಾಚರಣೆಯಲ್ಲಿ ಎದೆಗುಂದದೆ ಮುನ್ನುಗಿದ್ದ ಸಾಹಸಿ ಎಸ್ ಐ ಶಕೀಲ್ ಅಹಮದ್. ಮತ್ತು ಎಸ್ಪಿ ಹರಿಕೃಷ್ಣ...
ವೀರಪ್ಪನ್ ಬೇಟೆಗೆ ಎಸ್ಟಿಎಫ್ ಪಡೆ, ಬಿಡುವಿಲ್ಲದೇ ಪ್ರಯತ್ನ ಪಡುತ್ತಿತ್ತು. ಅಂಥ ಸಂದರ್ಭದಲ್ಲಿಯೇ, ಎಸ್'ಐ ಶಕೀಲ್ ಅಹಮದ್'ಗೆ ವೀರಪ್ಪನ್ ಬಂಟ ಗುರುನಾಥನ್'ನ್ನ ಹಿಡಿಯುವ ಅವಕಾಶ ಒದಗಿ ಬರುತ್ತೆ. ಶಸ್ತ್ರ ವ್ಯಾಪಾರಿಗಳ ಸೋಗಿನಲ್ಲಿ ಬಂದ ಎಸ್ಪಿ ಹರಿಕೃಷ್ಣ, ಎಸ್'ಐ ಶಕೀಲ್ ಅಹಮದ್ ಗುರುನಾಥನನ್ನ ಹಿಡಿದು ವೀರಪ್ಪನ್'ಗೆ ಸೆಡ್ಡು ಹೊಡೆಯುತ್ತಾರೆ. ಪೊಲೀಸರ ಗುಂಡಿಗೆ ಗುರುನಾಥನ್ ಬಲಿಯಾಗ್ತಾನೆ.
ತನ್ನ ಬಲಗೈ ಬಂಟ ಗುರುನಾಥನ್ ಸಾವು ವೀರಪ್ಪನ್ ಆಕ್ರೋಶಕ್ಕೆ ಕಾರಣವಾಗುತ್ತದೆ. ಶಕೀಲ್ ಅಹಮದ್, ಹರಿಕೃಷ್ಣ ಅವರ ಹೆಣ ಉರುಳಿಸಲೇಬೇಕು ಎಂದು ಯೋಚನೆ ಮಾಡಿದ್ದ ವೀರಪ್ಪನ್, ಕಮಲಾನಾಯಕನ ಮೂಲಕ ದಾಳಿಗೆ ಅಖಾಡ ರೆಡಿ ಮಾಡ್ತಾನೆ. ಆಗಸ್ಟ್ 14 - 1992 ರಂದು ಆಯುಧ ವ್ಯಾಪಾರಿಗಳ ಸೋಗಿನಲ್ಲಿ ವೀರಪ್ಪನ್ ಹಿಡಿಯಲು ಹೊರಟ ಎಸ್ಪಿ ಹರಿಕೃಷ್ಣ ಮತ್ತು ಎಸೈ ಶಕೀಲ್ ಅಹಮದ್ ಮೀಣ್ಯಂ ಬಳಿ ವೀರಪ್ಪನ್ ದಾಳಿಗೆ ಬಲಿಯಾಗ್ತಾರೆ. ಇವರ ಜೊತೆಗೆ ಬೆನಗೊಂಡ, ಅಪ್ಪಚ್ಚು, ಸುಂದರ್ ಮತ್ತು ಕಾಳಪ್ಪ ಕೂಡಾ ವೀರಪ್ಪನ್ ಹಾರಿಸಿದ ಗುಂಡುಗಳಿಗೆ ಪ್ರಾಣ ಬಿಡುತ್ತಾರೆ. 6 ಜನರ ಪ್ರಾಣ ತೆಗೆದ ವೀರಪ್ಪನ್ ಅಟ್ಟಹಾಸ ಮೆರೆದಿದ್ದ. ಆ ಕರಾಳ ನೆನಪು ಆ ಕುಟುಂಬಗಳಲ್ಲಿ ಇನ್ನೂ ಮಾಸಿಲ್ಲ.
ಈ ವೀರರ ಮರೆತ ಸರಕಾರ:
ವೀರಪ್ಪನ್ ಅಟ್ಟಹಾಸ ಮುಗಿದಿದೆ. ಆದರೆ, ಆ ನರಹಂತಕನನ್ನ ಹಿಡಿಯುವ ಪ್ರಯತ್ನದಲ್ಲಿ ಪ್ರಾಣಬಿಟ್ಟ ಆರು ಮಂದಿಯ ಶೌರ್ಯದ ಬಗ್ಗೆ ಸರ್ಕಾರವಾಗಲೀ ಅಥವಾ ಪೊಲೀಸ್ ಇಲಾಖೆಯಾಗಲೀ, ಯಾರೂ ಕೂಡಾ ಗಮನಹರಿಸಿಲ್ಲ. ಕೆಲ ಸ್ಥಳೀಯರೇ ಆ ವೀರಯೋಧರ ನೆನಪಿಗಾಗಿ ದಾಳಿ ನಡೆದ ಸ್ಥಳದಲ್ಲಿ ಎರಡು ವರ್ಷಗಳ ಹಿಂದೆಯೇ ಸ್ಮಾರಕ ನಿರ್ಮಾಣ ಮಾಡಿದೆ. ಈ ಸ್ಮಾರಕಕ್ಕೆ ನಿನ್ನೆ ಹರಿಕೃಷ್ಣ ಪತ್ನಿ ಪ್ರೀತಾ ಹರಿಕೃಷ್ಣ ಮತ್ತು ಶಕೀಲ್ ಅಹಮದ್ ಸಹೋದರ ಅಗಲಿದ ಬಂದುಗಳಿಗೆ ಪುಷ್ಪ ನಮನ ಸಲ್ಲಿಸಿದರು.
ವೀರಪ್ಪನ್ ಸೃಷ್ಟಿಸಿದ ರಕ್ತ ಸಿಕ್ತ ಅಧ್ಯಾಯದಲ್ಲಿ ಇಂಥ ಅದೆಷ್ಟೋ ಮಂದಿ ವೀರಯೋಧರು ಪ್ರಾಣತೆತ್ತಿದ್ದಾರೆ. ಉಳಿದ ಅಂಥಾ ಯೋಧರ ಸ್ಮಾರಕಕ್ಕೆ ಸರ್ಕಾರ ಈಗಲಾದರೂ ಯೋಚನೆ ಮಾಡಲಿ ಅನ್ನೋದು ಅಗಲಿದ ಪೊಲೀಸರ ಕುಟುಂಬಗಳ ಆರ್ತನಾದ. ಈ ಕೂಗು ಸರ್ಕಾರಕ್ಕೆ ಕೇಳಿಸುತ್ತಾ....!!!
- ರವಿಕುಮಾರ್, ಕ್ರೈಂಬ್ಯೂರೋ, ಸುವರ್ಣನ್ಯೂಸ್, ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.