ಸರ್ಕಾರ ದೇಶದ ಎಲ್ಲರ ಫೋನ್ ಕರೆ ಕದ್ದಾಲಿಸುತ್ತಿದೆ!

By Web DeskFirst Published Aug 16, 2018, 3:48 PM IST
Highlights

ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದಲ್ಲಿ ಆ ಗ್ರೂಪ್‌ನ ಅಡ್ಮಿನ್ ತೊಂದರೆಗೆ ಸಿಲುಕಬಹುದು, ಜೈಲೂ ಸೇರಬಹುದು. ಈ ಸಂದೇಶದ ವಿಶ್ವಾಸಾರ್ಹತೆಗಾಗಿಯೇ ಕೊಲ್ಕತ್ತಾ ಪೊಲೀಸ್ ಫೇಸ್‌ಬುಕ್ ಪೇಜ್‌ನೊಂದಿಗೆ ಟ್ಯಾಗ್ ಮಾಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ಮತ್ತು ಕೋಮು ಸಂಘರ್ಷಕ್ಕೆ ಎಡೆಮಾಡುವಂತಹ ಸಂದೇಶಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿಯೊಬ್ಬರ ಫೋನ್ ಕಾಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡುತ್ತಿದೆ ಎಂಬ ಸಂದೇಶವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೀಗೆ ಹರಿದಾಡುತ್ತಿರುವ ಸಂದೇಶದಲ್ಲಿ,‘ನಾಳೆಯಿಂದಲೇ ಸರ್ಕಾರ ನಮ್ಮ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಡುತ್ತದೆ. ನಿಮ್ಮ ಎಲ್ಲಾ ಕರೆಗಳು, ವಾಟ್ಸ್‌ಆ್ಯಪ್, ಫೇಸ್‌ಬುಕ್ ದಾಖಲೆ ಗಳು ಸಚಿವಾಲಯದಲ್ಲಿ ದಾಖಲಾಗುತ್ತವೆ. ಅನಗತ್ಯ ಸಂದೇಶಗಳನ್ನು ರವಾನಿಸುವ ಮುನ್ನ ಎಚ್ಚರವಿರಲಿ. ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದಲ್ಲಿ ಆ ಗ್ರೂಪ್‌ನ ಅಡ್ಮಿನ್ ತೊಂದರೆಗೆ ಸಿಲುಕಬಹುದು, ಜೈಲೂ ಸೇರಬಹುದು.

ಈ ಸಂದೇಶದ ವಿಶ್ವಾಸಾರ್ಹತೆಗಾಗಿಯೇ ಕೊಲ್ಕತ್ತಾ ಪೊಲೀಸ್ ಫೇಸ್‌ಬುಕ್ ಪೇಜ್‌ನೊಂದಿಗೆ ಟ್ಯಾಗ್ ಮಾಡಲಾಗಿದೆ. ಈ ಸಂಬಂಧ ಯಾವುದಾದರೂ ಪ್ರಶ್ನೆಗಳಿದ್ದಲ್ಲಿ, ಇನ್‌ಬಾಕ್ಸ್‌ಗೆ ಸಂದೇಶ ಕಳುಹಿಸಿ’ ಎಂದು ಹೇಳಲಾಗಿದೆ. ಈ ಸಂದೇಶ ಸದ್ಯ ವೈರಲ್ ಆಗಿದೆ. ಆದರೆ ನಿಜಕ್ಕೂ ಸರ್ಕಾರ ಪ್ರತಿಯೊಬ್ಬರ  ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.

ಕೊಲ್ಕತ್ತಾ ಪೊಲೀಸರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ಇದೊಂದು ಸುಳ್ಳುಸುದ್ದಿ, ಈ ರೀತಿ ಸುಳ್ಳುಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದಿದ್ದಾರೆ. ವಾಸ್ತವವಾಗಿ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿಲ್ಲ. ಅದು ಸಾಧ್ಯವೂ ಇಲ್ಲ. ಮೊಬೈಲ್ ಹ್ಯಾಕ್ ಆದಾಗ ಮಾತ್ರ ಬೇರೊಬ್ಬರು ನಿಮ್ಮ ವಾಟ್ಸ್‌ಆ್ಯಪ್ ಅನ್ನು ಗಮನಿಸುತ್ತಿರಬಹುದಷ್ಟೆ.  ಅಲ್ಲದೆ ಈ ಸಂದೇಶದಲ್ಲಿ ಉಲ್ಲೇಖಿಸಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡುವ ಯಾವುದೇ ಸಚಿವಾಲಯವೂ ಅಸ್ತಿತ್ವದಲ್ಲಿಲ್ಲ.

[ವೈರಲ್ ಚೆಕ್ ಅಂಕಣ]

click me!