
ಬೆಂಗಳೂರು (ಆ.03): ನಿನ್ನೆ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಮನೆಗೆ ಐಟಿ ಅಧಿಕಾರಿಗಳು ಎಂಟ್ರಿಕೊಟ್ಟಾಗಲೇ ಇತ್ತ ಆರ್ ಟಿ ನಗರದಲ್ಲಿದ್ದ ಜ್ಯೋತಿಷಿ ದ್ವಾರಕಾನಾಥ್ ಮನೆಗೂ ಐಟಿ ಅಧಿಕಾರಿಗಳು ಎಂಟ್ರಿಕೊಟ್ಟಿದ್ದರು. ಹೀಗೆ ಬಂದಿದ್ದ ಐಟಿ ಅಧಿಕಾರಿಗಳಿಗೂ ಸ್ಪಷ್ಟವಾಗಿ ದ್ವಾರಕಾನಾಥ್ ಹಾಗೂ ಡಿಕೆಶಿ ನಡುವಿನ ಸಂಬಂಧ ಗೊತ್ತಿತ್ತು.
ಕೆ.ಶಿವಕುಮಾರ್ ಮನೆ ಮೇಲೆ ಐಟಿ ರೇಡ್ ಆಗುತ್ತಿದ್ದಂತೆ ದ್ವಾರಕಾನಾಥ್ ಗುರೂಜಿಯ ಮನೆಯ ಕದವನ್ನು ಐಟಿ ಅಧಿಕಾರಿಗಳು ತಟ್ಟಿದ್ದರು. ಅಲ್ಲಿಗೆ ಬಂದಿದ್ದ ಐಟಿ ಅಧಿಕಾರಿಗಳಿಗೆ ಒಂದಂತೂ ಸ್ಪಷ್ಟವಾಗಿ ತಿಳಿದಿತ್ತು. ಅದೇನೆಂದ್ರೆ ದ್ವಾರಕಾನಾಥ್ ಗುರೂಜಿ ರಾಜಕೀಯ ಗಣ್ಯರಿಗೆ ಭವಿಷ್ಯ ಹೇಳೋದು ಮಾತ್ರವಲ್ಲ. ಅದಕ್ಕೂ ಮೀರಿದ ವ್ಯವಹಾರ ಗುರೂಜಿ ಹಾಗೂ ಅವರ ಶಿಷ್ಯರ ನಡುವೆ ನಡೀತಿದೆ ಅನ್ನೋದರ ಬಗ್ಗೆ ಐಟಿ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿದಿತ್ತು. ಇದೇ ಕಾರಣದಿಂದ ಗುರೂಜಿಯ ಮನೆಯಲ್ಲಿನ ದಾಖಲೆಗಳ ಪರಿಶೀಲನೆಗೆ ಐಟಿ ಅಧಿಕಾರಿಗಳು ಮುಂದಾದರು.
ಡಿಕೆಶಿಗೂ ಗುರೂಜಿಗೂ ಮೂರು ದಶಕದ ಸಂಬಂಧ...! ಜ್ಯೋತಿಷ್ಯಕ್ಕೂ ಮೀರಿದ ಸಂಬಂಧ ಬೆಳೆದಿತ್ತಾ...?
ಡಿ.ಕೆ.ಶಿವಕುಮಾರ್ ರಾಜಕೀಯಕ್ಕೆ ದೊಡ್ಡಮಟ್ಟದಲ್ಲಿ ಎಂಟ್ರಿಯಾಗಿದ್ದು 1989ರಲ್ಲಿ. ಆಗ ಸಾತನೂರು ಕ್ಷೇತ್ರದಿಂದ ಮೊದಲ ಬಾರಿ ಶಿವಕುಮಾರ್ ಜಯಭೇರಿ ಭಾರಿಸಿದ್ದರು. ಅಲ್ಲಿಂದ ನಂತರ ಹಂತ ಹಂತವಾಗಿ ಬೆಳೆಯುತ್ತಾ ಬಂದವರು ಶಿವಕುಮಾರ್. ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ರಾಜ್ಯದಲ್ಲಿ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾದರು. ಮೊದಲ ಬಾರಿಗೆ ಶಾಸಕರಾಗಿದ್ದ ಶಿವಕುಮಾರ್’ಗಿದ್ದ ನಾಯಕತ್ವ ಗುಣವನ್ನು ಅರ್ಥಮಾಡಿಕೊಂಡಿದ್ದ ಬಂಗಾರಪ್ಪ ತಮ್ಮ ಬೃಹತ್ ಕ್ಯಾಬಿನೆಟ್ ನಲ್ಲಿ ಈ ಯುವಕ ಶಾಸಕನನ್ನೂ ಮಂತ್ರಿ ಮಾಡಿದ್ದರು. ಆಗ ಮೊದಲ ಬಾರಿಗೆ ಬಂಧಿಖಾನೆ ಸಚಿವರಾಗಿ ಶಿವಕುಮಾರ್ ಅಧಿಕಾರ ಸ್ವೀಕರಿಸಿದ್ದರು. ಹೀಗಿದ್ದಾಗಲೇ ಡಿಕೆಶಿ ಹಾಗೂ ದ್ವಾರಕಾನಾಥ್ ಗುರೂಜಿಯ ನಡುವೆ ಸಂಪರ್ಕ ಶುರುವಾಗಿತ್ತು. ಆ ಕಾಲದಲ್ಲಿ ರಾಜ್ಯದ ಹಲವು ಮುಖ್ಯಮಂತ್ರಿಗಳಿಗೆ ಜ್ಯೋತಿಷ್ಯ ಸಲಹೆ ನೀಡುತ್ತಿದ್ದ ದ್ವಾರಕಾನಾಥ್ ಗುರೂಜಿಯ ಬಗ್ಗೆ ಡಿಕೆಶಿಗೂ ಅಪಾರ ಗೌರವವಿತ್ತು. ಅಷ್ಟೇ ಅಲ್ಲದೆ ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಹೀಗೆ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸಿಗುವ ಎಲ್ಲ ಅವಕಾಶಗಳ ಬಗ್ಗೆ ಡಿಕೆಶಿಗೆ ಅಪಾರ ನಂಬಿಕೆಯಿತ್ತು. ಹೀಗಾಗಿ ದ್ವಾರಕಾನಾಥ್ ಗುರೂಜಿ ನೀಡುವ ಸಲಹೆಗಳನ್ನು ಶಿವಕುಮಾರ್ ಕಾಯಾ, ವಾಚಾ ಮನಸಾ ಅನುಸರಿಸುತ್ತಿದ್ದರು.
ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಹೆಚ್ಚಾಯ್ತು ಬಾಂಧವ್ಯ..ಜ್ಯೋತಿಷ್ಯದಿಂದ ಬ್ಯುಸಿನೆಸ್ ಕಡೆಗೂ ಹೊರಳಿತ್ತು ಸಂಬಂಧ…?
ರಾಜ್ಯದಲ್ಲಿ 1999ರಲ್ಲಿ ಎಸ್.ಎಂ,ಕೃಷ್ಣ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ರು. ಕೃಷ್ಣ ಸರ್ಕಾರದಲ್ಲಿ ಘಟಾನುಘಟಿ ಮಂತ್ರಿಗಳು ಇದ್ದರೂ ಡಿ.ಕೆ.ಶಿವಕುಮಾರ್ ಮಾತ್ರ ಡಿಫ್ಯಾಕ್ಟೋ ಸಿಎಂ ತರ ಇದ್ರು. ಕೃಷ್ಣ ಸರ್ಕಾರದ ಪ್ರತಿಯೊಂದು ನಡೆಯಲ್ಲೂ ಶಿವಕುಮಾರ್ ಪಾತ್ರ ದೊಡ್ಡದಿತ್ತು. ಅದರಲ್ಲೂ ಹೈಕಮಾಂಡ್ ನ ಇಷ್ಟಾರ್ಥಗಳನ್ನು ಪೂರೈಸಲು ಶಿವಕುಮಾರ್ ಮೇಲೆಯೇ ಕೃಷ್ಣ ಹೆಚ್ಚಾಗಿ ಅವಲಂಬಿಸಿದ್ದರು ಅನ್ನೋ ಮಾತು ರಾಜಕೀಯ ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು. ಇದೇ ಸಂದರ್ಭದಲ್ಲಿ ಕೃಷ್ಣ ಹಾಗೂ ಡಿಕೆಶಿ ಜೋಡಿಗೆ ಜ್ಯೋತಿಷಿ ದ್ವಾರಕಾನಾಥ್ ರಾಜಗುರುವಾಗಿ ಬಿಟ್ಟಿದ್ದರು. ಸರ್ಕಾರ ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳ ಸಂದರ್ಭದಲ್ಲಿ ದ್ವಾರಕಾನಾಥ್ ಸಲಹೆಯನ್ನು ಪಡೆಯಲಾಗುತ್ತಿತ್ತು. ಇದಕ್ಕಿಂತ ಮಿಗಲಾಗಿ ದ್ವಾರಕಾನಾಥ್- ಡಿಕೆಶಿಗೆ ಪರಮಾಪ್ತರಾಗತೊಡಗಿದರು. ಬೆಳೆಯುತ್ತಿದ್ದ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಆಗಿನ ನಗರಾಭಿವೃದ್ಧಿ ಸಚಿವರಾಗಿದ್ದ ಡಿಕೆಶಿ ತೊಡಗಿಸಿಕೊಳ್ಳತೊಡಗಿದ್ದರು. ಅವರ ಲ್ಯಾಂಡ್ ಡೆವಲಪಿಂಗ್ ಕಂಪನಿಗಳು ದೊಡ್ಡ ಮಟ್ಟದಲ್ಲಿ ಡೆವಲಪ್ ಆಗ ತೊಡಗಿದ್ದವು. ಇದರಲ್ಲಿ ದ್ವಾರಕಾನಾಥ್ ಗುರೂಜಿಯ ನಂಟೂ ಸೇರಿತ್ತು ಅನ್ನೋ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಶುರುವಾಗಿತ್ತು.
ಸಿದ್ದರಾಮಯ್ಯ ಸಂಪುಟದಲ್ಲಿ ಮೊದಲು ಮಂತ್ರಿಯಾಗದ ಡಿಕೆಶಿ..ಸಚಿವ ಸ್ಥಾನಕ್ಕಾಗಿ ದ್ವಾರಕಾನಾಥ್ ರಿಂದ ಸಲಹೆ ಸೂಚನೆ...!
ರಾಜ್ಯದ ಪ್ರಭಾವಿ ನಾಯಕರಾಗಿ ಬೆಳೆದಿದ್ದರೂ ಡಿಕೆಶಿಗೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮೊದಲು ಮಂತ್ರಿ ಸ್ಥಾನ ತಪ್ಪಿಹೋಗಿತ್ತು. ಕಳಂಕಿತರನ್ನು ಮಂತ್ರಿ ಮಾಡಬಾರದು ಅನ್ನೋ ಸಾಮಾಜಿಕ ಹೋರಾಟಗಾರರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸಿದ್ದರಾಮಯ್ಯ, ತಮ್ಮ ಸಂಪುಟಕ್ಕೆ ಡಿಕೆಶಿಯನ್ನು ಸೇರಿಸಿಕೊಳ್ಳದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಹೈಕಮಾಂಡ್ ನಲ್ಲಿ ಎಷ್ಟೇ ಪ್ರಭಾವ ಹೊಂದಿದ್ದರೂ ಡಿಕೆಶಿ ಮಾಡುತ್ತಿದ್ದ ಪ್ರಯತ್ನಗಳು ಫಲಕೊಟ್ಟಿರಲಿಲ್ಲ. ಇದರಿಂದಾಗಿ ಒನ್ಸ್ ಅಗೇನ್ ಡಿಕೆಶಿ ಮೊರೆಹೋಗಿದ್ದು ಜ್ಯೋತಿಷಿ ದ್ವಾರಕಾನಾಥ್ ಗುರೂಜಿ ಕಡೆಗೆ. ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಮಂತ್ರಿಯಾಗದೆ ಪರದಾಡುತ್ತಿದ್ದ ಡಿ.ಕೆ.ಶಿವಕುಮಾರ್ ಗೆ ಹೋಮ, ಹವನಗಳನ್ನು ನಡೆಸಲು ಸೂಕ್ತ ಸಲಹೆಯನ್ನು ದ್ವಾರಕಾನಾಥ್ ನೀಡಿದ್ದರು. ಗುರೂಜಿ ಹೇಳಿದ ಪ್ರತಿಯೊಂದು ಪೂಜೆಯನ್ನೂ ಶಿವಕುಮಾರ್ ನಿಷ್ಟೆಯಿಂದ ಪೂರೈಸಿದ್ದರು. ಇದೇ ವೇಳೆ ಪಕ್ಷದಿಂದ ಸಿಕ್ಕ ರಾಜಕೀಯ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ ಶಿವಕುಮಾರ್ ಗೆ ಉಡುಗೊರೆ ರೂಪದಲ್ಲಿ ಸಿಕ್ಕಿದ್ದು ಮಂತ್ರಿಸ್ಥಾನ.
ದ್ವಾರಕಾನಾಥ್ ಸಲಹೆಯಂತೆ ವಿಧಾನಸೌಧ ಕೊಠಡಿ ಬದಲಾವಣೆ...ವಿಧಾನಸೌಧಕ್ಕೂ ಕಾಲಿಟ್ಟಿತ್ತು ಸಚಿವರ ವಾಸ್ತುನಂಬಿಕೆ!
ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ನಮ್ಮ ರಾಜಕಾರಣಿಗಳು ವಾಸ್ತುಪ್ರಕಾರ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಅದರಲ್ಲೂ ಡಿಕೆಶಿ ಮಂತ್ರಿಯಾದಾಗ ಅವರಿಗೆ ಸಿಕ್ಕ ಕೊಠಡಿಯ ಬಾಗಿಲನ್ನು ವಾಸ್ತುಪ್ರಕಾರ ಬದಲಿಸಲು ನಿರ್ಧರಿಸಿದ್ದರು. ಆಗಲೂ ದ್ವಾರಕಾನಾಥ್ ಸಲಹೆಯಂತೆಯೇ ಎಲ್ಲವೂ ನಡೆದಿತ್ತು. ಇದೇ ತಮಗೆ ಹೆಚ್ಚು ಪವರ್ ನೀಡಿದ್ದು ಅನ್ನೋ ನಂಬಿಕೆ ಶಿವಕುಮಾರ್ ಗೆ ಈಗಲೂ ಇದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದಲ್ಲಿ ಹೆಚ್ಚಾಯ್ತು ಸಂಬಂಧ...ಐಟಿ ಇಲಾಖೆಗೆ ಸಿಗುತ್ತಿದೆ ಮಹತ್ವದ ದಾಖಲೆ ಪತ್ರ
ಹೀಗೆ ಡಿಕೆಶಿ ಕುಟುಂಬಕ್ಕೆ ಪರಮಾಪ್ತರಾಗಿದ್ದ ದ್ವಾರಕಾನಾಥ್ ತಮ್ಮ ಮಕ್ಕಳಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಲು ಮುಂದಾಗಿದ್ದಾರೆ ಅನ್ನೋ ಮಾಹಿತಿ ಐಟಿ ಇಲಾಖೆಗೆ ಸಿಕ್ಕಿದೆ. ಅದರಲ್ಲೂ ಡಿಕೆಶಿ ವ್ಯವಹಾರಗಳ ಮೇಲೆ ಕಣ್ಣಿಟ್ಟಿದ್ದ ಆದಾಯ ತೆರಿಗೆ ಇಲಾಖೆಗೆ ಅವರ ವಹಿವಾಟಿನಲ್ಲಿ ದ್ವಾರಕಾನಾಥ್ ಜೊತೆ ಸಂಬಂಧ ಇರೋದು ಗೊತ್ತಾಗಿದೆ. ಇದೇ ಕಾರಣದಿಂದ ಐಟಿ ಇಲಾಖೆ ಡಿಕೆಶಿಗೆ ಸಂಬಂಧಿಸಿದವರ ಮೇಲೆ ದಾಳಿ ನಡೆಸುವಾಗ ಆ ಪಟ್ಟಿಯಲ್ಲಿ ದ್ವಾರಕಾನಾಥ್ ಮನೆಯನ್ನೂ ಸೇರಿಸಿಕೊಂಡಿದೆ. ಮೂಲಗಳ ಮಾಹಿತಿಯ ಪ್ರಕಾರ. ದ್ವಾರಕಾನಾಥ್ ಮನೆಯಲ್ಲಿ ತಪಾಸಣೆ ನಡೆಸುವ ವೇಳೆ ಕೆಲ ಮಹತ್ವದ ದಾಖಲೆ ಪತ್ರಗಳು ಆದಾಯ ತೆರಿಗೆ ಇಲಾಖೆಯ ಕೈಸೇರಿವೆ. ರಾಜಕಾರಣಿಗಳ ಪಾಲಿನ ರಾಜಗುರುವಾಗಿರುವ ಬೆಳ್ಳೂರು ಶಂಕರನಾರಾಯಣ ದ್ವಾರಕಾನಾಥ್ ಸದ್ಯ ಐಟಿ ದಾಳಿಯ ಬಿಸಿ ಎದುರಿಸುತ್ತಿದ್ದಾರೆ. ತಂದೆ ಶಂಕರನಾರಾಯಣರಿಂದ ಜ್ಯೋತಿಷ್ಯ ಕಲಿತು, ರಾಜ್ಯದ ಕರಕುಶಲ ನಿಗಮದಲ್ಲಿ ಕಾರ್ಯನಿರ್ಹವಿಸಿದ್ದ ದ್ವಾರಕಾನಾಥ್ ದೇವರಾಜ ಅರಸು ಸಂಪರ್ಕಕ್ಕೆ ಬಂದ ಮೇಲೆ ಅವರಿಗೆ ಆಪ್ತರಾಗಿ ಬೆಳೆದಿದ್ದರು., ನಂತರ ಹಲವು ಪ್ರಮುಖ ರಾಜಕಾರಣಿಗಳ ನಿಕಟವರ್ತಿಯಾಗಿ ಬೆಳೆದಿದ್ದ ದ್ವಾರಕಾನಾಥ್ ಸದ್ಯ ಅದೇ ರಾಜಕೀಯ ಸಂಬಂಧದ ಮುಂದುವರಿದ ಭಾಗದಲ್ಲಿ ಡಿಕೆಶಿ ಜೊತೆಗೆ ಐಟಿ ಶಾಕ್ ಅನುಭವಿಸುತ್ತಿದ್ದಾರೆ. ರಾಜಕಾರಣಿಗಳಿಗೆ ಜ್ಯೋತಿಷ್ಯದ ಸಲಹೆ ನೀಡುತ್ತಿದ್ದ ದ್ವಾರಕಾನಾಥ್ ಗೇ ಗೊತ್ತಾಗದ ರೀತಿಯಲ್ಲಿ ಐಟಿ ಅಧಿಕಾರಿಗಳು ಅವರ ಮನೆಗೆ ಬಂದು ಕದತಟ್ಟಿದ್ದಾರೆ. ಮಂತ್ರಿಗಳ ಪಾಲಿನ ರಾಜಗುರು ಈಗ ಐಟಿ ಶಾಕ್ ನಿಂದ ಹೊರಬರುವ ದಾರಿ ಹುಡುಕುವ ಪ್ರಯತ್ನದಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.