ನವೆಂಬರ್ 24ರಂದು ಮಂಡ್ಯದಲ್ಲಿ ಸಂಭವಿಸಿದ ಭೀಕರ ಬಸ್ ದುರಂತಕ್ಕೆ ಕಾರಣ ಇದೀಗ ಹೊರಬಿದ್ದಿದೆ. ಚಾಲಕನ ಅಜಾಗರೂಕತೆಯಿಂದ ದುರಂತ ಸಂಭವಿಸಿದೆ ಎಂದು ಚಾಲಕ ಒಪ್ಪಿಕೊಂಡಿದ್ದಾರೆ.
ಪಾಂಡವಪುರ: ನನ್ನ ಅಜಾಗರೂಕತೆಯಿಂದಲೇ ದುರಂತ ಸಂಭವಿಸಿತು. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತದೆ ಎಂಬ ಕಾರಣಕ್ಕೆ ಸ್ವಲ್ಪ ಎಡಕ್ಕೆ ಎಳೆದ ಪರಿಣಾಮ ಬಸ್ ನಾಲೆಗೆ ಉರುಳಿತು ಎಂದು 30 ಮಂದಿಯ ಬಲಿ ಪಡೆದ ಬಸ್ ಚಾಲಕ ಶಿವಣ್ಣ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ನ.24ರಂದು ತಾಲೂಕಿನ ಕನಗನಮರಡಿ ಸಮೀಪ ವಿ.ಸಿ. ನಾಲೆಗೆ ರಾಜ್‌ಕುಮಾರ್ ಹೆಸರಿನ ಖಾಸಗಿ ಬಸ್ ಉರುಳಿ ಮಂದಿ ಜಲ ಸಮಾಧಿಯಾಗಿದ್ದರು. ಅವಘಡ ಸಂಭವಿಸುತ್ತಿದ್ದಂತೆ ಬಸ್ ಚಾಲಕ ಶಿವಣ್ಣ ಕಣ್ಮರೆಯಾಗಿದ್ದ.
15 ದಿನಗಳ ಕಾಲ ಆರೋಪಿಗಾಗಿ ಹುಡುಕಾಟ ನಡೆಸಿದ ಪೊಲೀಸರು, ಶನಿವಾರ ಬೆಂಗಳೂರಿನಲ್ಲಿ ಶಿವಣ್ಣನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಯಾಗಿದ್ದರು. ಸೋಮವಾರ ಪಾಂಡವಪುರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ವಾರದ ಹಿಂದೆಯಷ್ಟೇ ನಿರ್ವಾಹಕನನ್ನು ಬಂಧಿಸಲಾಗಿತ್ತು. ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಹಾಗೂ ನಿರ್ವಾಹಕರಿಬ್ಬರು ಪರಾರಿಯಾಗಿದ್ದರು.