ಜೆಡಿಎಸ್‌ ಜತೆ ಕಾಂಗ್ರೆಸ್ ಮೈತ್ರಿ ಹಿಂದಿನ ಉದ್ದೇಶವೇನು.. ?

First Published Jul 1, 2018, 9:40 AM IST
Highlights

ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದು, ಈ ಮೈತ್ರಿಯು ಇಷ್ಟಪಟ್ಟು ಮಾಡಿಕೊಂಡಿದ್ದಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವ ಸಲುವಾಗಿ ಮಾಡಿಕೊಂಡಿದ್ದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಕಲಬುರಗಿ: ಜೆಡಿಎಸ್‌ನೊಂದಿಗೆ ಇಷ್ಟಪಟ್ಟು ಮೈತ್ರಿ ಮಾಡಿಕೊಂಡಿಲ್ಲ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿಯೇ ಅನಿವಾರ್ಯವಾಗಿ ಮೈತ್ರಿ ಸರ್ಕಾರ ರಚನೆಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ಕೋಮುವಾದಿ ಪಕ್ಷ ಬೆಳೆಯಬಾರದು ಹಾಗೂ ಜಾತ್ಯತೀತ ತತ್ವ ಉಳಿಸುವುದಕ್ಕಾಗಿ ಕಾಂಗ್ರೆಸ್‌, ಜೆಡಿಎಸ್‌, ಬಿಎಸ್‌ಪಿ ಮತ್ತು ಪಕ್ಷೇತರರು ಸೇರಿ ಮೈತ್ರಿ ಸರ್ಕಾರ ರಚಿಸಿದ್ದೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದ ಸುಳ್ಳಿನ ಸಾಧನೆಗಳನ್ನು ಘೋಷ ವಾಕ್ಯದಲ್ಲಿ ಹೇಳಲು .4500 ಕೋಟಿ ಖರ್ಚು ಮಾಡಿದ್ದಾರೆ. ಬಿಜೆಪಿಯವರ ಸಾಫ್‌ ನಿಯತ್‌, ಸಹಿ ವಿಕಾಸ್‌ ಅನ್ನೊದು ಬೊಗಳೆ ಮಾತು. ಅವರಿಗೆ ಶಿಸ್ತು ಇದ್ದರೆ ಹೇಳಿದಂತೆ ನಡೆದು ತೋರಿಸುತ್ತಿದ್ದರೇ ಹೊರತು ತ್ರಿಪುರಾದಂತೆ ಕರ್ನಾಟಕದಲ್ಲಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಯತ್ನಿಸುತ್ತಿರಲಿಲ್ಲ ಎಂದರು.

ರಾಜಕೀಯ ಅಸ್ತಿತ್ವ ಉಳಿಸುವುದಕೋಸ್ಕರ ಕೆಲವರು ಮಲ್ಲಿಕಾರ್ಜನ ಖರ್ಗೆಯವರ ವಿರುದ್ಧ ಮಾತಾಡಿದರು. ಅವರು ನಮಗೆ ನೀತಿ ಪಾಠ ಹೇಳಬೇಕಾಗಿಲ್ಲ. ಅವರು ಯಾವ ದಂಧೆಯಲ್ಲಿದ್ದಾರೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ಹೆಚ್ಚಾಗಿ ಎಂ.ವೈ.ಪಾಟೀಲರಿಗೆ ಗೊತ್ತು ಎಂದು ಪರೋಕ್ಷವಾಗಿ ಮಾಲಿಕಯ್ಯ ಗುತ್ತೇದಾರ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.

ಸಮಾಜ ಕಲ್ಯಾಣ ಇಲಾಖೆ ಬಗ್ಗೆ ಒಳ್ಳೆ ಅಭಿಪ್ರಾಯಗಳಿಲ್ಲ. ಈ ನಿಟ್ಟಿನಲ್ಲಿ ಸ್ವಯಂ ಕಲ್ಯಾಣ ಬಿಟ್ಟು ನಿಜವಾದ ಸಮಾಜ ಕಲ್ಯಾಣ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. .30,000 ಕೋಟಿ ಅನುದಾನ ಹೊಂದಿರುವ ದೊಡ್ಡ ಇಲಾಖೆ ಇದಾಗಿದ್ದು, ಸೂಕ್ತವಾಗಿ ನಿರ್ವಹಣೆ ಮಾಡುವೆ ಎಂದರು.

click me!