ಕುತೂಹಲ ಮೂಡಿಸಿದ ಎಚ್.ಕೆ. ಪಾಟೀಲ್ ಮುಂದಿನ ನಡೆ

First Published Jun 10, 2018, 8:24 AM IST
Highlights

 ಸಚಿವ ಸ್ಥಾನ ವಂಚಿತ ಎಂ.ಬಿ.ಪಾಟೀಲ್‌ ದೆಹಲಿಯಲ್ಲಿ ಅತೃಪ್ತಿ ಬಾವುಟ ಹಾರಿಸಿದರೆ, ಇನ್ನೊಬ್ಬ ಸಚಿವ ಸ್ಥಾನ ವಂಚಿತರಾದ ಎಚ್‌.ಕೆ.ಪಾಟೀಲ್‌ ಅವರ ಬಣ ಬೆಂಗಳೂರಿನಲ್ಲೇ ಬಂಡಾಯ ತೀವ್ರಗೊಳಿಸಿದೆ. 

ಬೆಂಗಳೂರು :  ಸಚಿವ ಸ್ಥಾನ ವಂಚಿತ ಎಂ.ಬಿ.ಪಾಟೀಲ್‌ ದೆಹಲಿಯಲ್ಲಿ ಅತೃಪ್ತಿ ಬಾವುಟ ಹಾರಿಸಿದರೆ, ಇನ್ನೊಬ್ಬ ಸಚಿವ ಸ್ಥಾನ ವಂಚಿತರಾದ ಎಚ್‌.ಕೆ.ಪಾಟೀಲ್‌ ಅವರ ಬಣ ಬೆಂಗಳೂರಿನಲ್ಲೇ ಬಂಡಾಯ ತೀವ್ರಗೊಳಿಸಿದೆ. ಅಲ್ಲದೆ, ಕಾಂಗ್ರೆಸ್‌ ಹೈಕಮಾಂಡ್‌ನಿಂದ ಕೆ.ಸಿ.ವೇಣುಗೋಪಾಲ್‌ ಸೇರಿದಂತೆ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ಎಲ್ಲದಕ್ಕೂ ಮಂಗಳವಾರ ಸೂಕ್ತ ಉತ್ತರ ಕೊಡುತ್ತೇನೆ ಎಂದು ಎಚ್‌.ಕೆ. ಪಾಟೀಲ್‌ ಹೊಸ ‘ಬಾಂಬ್‌’ ಸಿಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ.  ಜಿ.ಪರಮೇಶ್ವರ್‌ ನಡೆಸಿದ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಶನಿವಾರ ಡಿ.ಕೆ.ಶಿವಕುಮಾರ್‌, ಜಾಫರ್‌ ಷರೀಫ್‌ ಸೇರಿದಂತೆ ಹಲವರು ಎಚ್‌.ಕೆ.ಪಾಟೀಲ್‌ ಅವರ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸಲು ಯತ್ನಿಸಿದರು. ಆದರೆ, ಮುಖಂಡರ ಮನವೊಲಿಕೆಗೆ ಬಗ್ಗದ ಎಚ್‌.ಕೆ. ಪಾಟೀಲ್‌ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಅಲ್ಲದೆ ತಮ್ಮ ಮುಂದಿನ ನಡೆ ಬಗ್ಗೆ ಮಂಗಳವಾರ ಘೋಷಣೆ ಮಾಡಲಿದ್ದೇನೆ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಶನಿವಾರ ಸಂಜೆ ಡಿ.ಕೆ.ಶಿವಕುಮಾರ್‌ ಅವರು ಎಚ್‌.ಕೆ.ಪಾಟೀಲ್‌ ಅವರ ಮನವೊಲಿಸಲು ಎರಡು ಗಂಟೆಗಳ ಕಾಲ ಪ್ರಯತ್ನ ನಡೆಸಿದರು. ಆದರೆ, ಡಿ.ಕೆ.ಶಿವಕುಮಾರ್‌ ಮಾತಿಗೆ ಎಚ್‌.ಕೆ.ಪಾಟೀಲ್‌ ಒಪ್ಪಿಲ್ಲ. ನೀವೆಲ್ಲಾ ಮಂತ್ರಿ ಸ್ಥಾನ ಪಡೆದುಕೊಂಡು ಆರಾಮಾಗಿರಿ. ನಾನು ಕ್ಷೇತ್ರದಲ್ಲಿ ಹೇಗೆ ಮುಖ ತೋರಿಸಬೇಕು? ಯಾವ ಕಾರಣಕ್ಕೆ ನಿಮಗೆ ಸಚಿವ ಸ್ಥಾನ ತಪ್ಪಿದೆ ಎಂದರೆ ಏನು ಹೇಳಬೇಕು ಪ್ರಶ್ನಿಸಿದರು ಎಂದು ತಿಳಿದುಬಂದಿದೆ.

ಬಳಿಕ ಎಚ್‌.ಕೆ. ಪಾಟೀಲ್‌ ನಿವಾಸದಿಂದ ಹೊರಬಂದ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆಗೆ ನಿರಾಕರಿಸಿದರು. ನನ್ನದೇನೂ ಇಲ್ಲಪ್ಪ ಎಂದು ಕೈಮುಗಿದು ನಿರ್ಗಮಿಸಿದರು.

ಬಳಿಕ ಮಾತನಾಡಿದ ಎಚ್‌.ಕೆ.ಪಾಟೀಲ್‌, ಸಚಿವ ಸ್ಥಾನ ತಪ್ಪಿದ ರೋಷನ್‌ ಬೇಗ್‌ ಸೇರಿದಂತೆ ಹಲವರು ಸಂಪರ್ಕ ಮಾಡಿದರು. ಜತೆಗೆ ಡಿ.ಕೆ.ಶಿವಕುಮಾರ್‌ ಕೂಡ ಬಂದು ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ನನ್ನ ಕ್ಷೇತ್ರದಲ್ಲಿ ಬೆಂಬಲಿಗರು ಪ್ರತಿಭಟನೆ ಮಾಡುತ್ತಿದ್ದಾರೆ, ನನ್ನ ಮೇಲೂ ಸಹ ಒತ್ತಡ ಹೇರುತ್ತಿದ್ದಾರೆ. ಸಚಿವ ಸ್ಥಾನ ಪ್ರತಿಭಟನೆ ಮಾಡಿ ಪಡೆಯುವಂತಹದ್ದು ಅಲ್ಲ. ಅದೊಂದು ಸೂಕ್ಷ್ಮ ವಿಚಾರವಾಗಿದ್ದು, ನನ್ನ ನಿರ್ಧಾರವನ್ನು ಮಂಗಳವಾರ ಬಹಿರಂಗಗೊಳಿಸುತ್ತೇನೆ ಎಂದು ಹೇಳಿದರು.

ಜಾಫರ್‌ ಷರೀಫ್‌ ಅಸಮಾಧಾನ

ಮಂಗಳವಾರ ಎಚ್‌.ಕೆ.ಪಾಟೀಲ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ ಕೇಂದ್ರ ಮಾಜಿ ಸಚಿವ ಜಾಫರ್‌ ಷರೀಫ್‌ ಸಂಪುಟ ವಿಸ್ತರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಎಚ್‌.ಕೆ.ಪಾಟೀಲ್‌ ನನ್ನ ಹಳೆಯ ಸ್ನೇಹಿತರು. ಈ ಮಂತ್ರಿಮಂಡಲ ಹೇಗೆ ರಚನೆಯಾಯಿತು ಎಂಬ ಬಗ್ಗೆ ಅಚ್ಚರಿ ಉಂಟಾಗಿದೆ. ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡರು ಎಂಬುದು ತಿಳಿಯುತ್ತಿಲ್ಲ. ಮೊದಲನೆಯದಾಗಿ ಪಕ್ಷ ಅಧಿಕಾರ ಕಳೆದುಕೊಂಡಿದೆ. ಬಿಜೆಪಿಗೆ ಅಧಿಕಾರ ಕೊಡಬಾರದು ಎಂದು ಮಿತ್ರ ಪಕ್ಷ ಮಾಡಿಕೊಂಡಿದ್ದೀರಿ. ಆದರೆ ಸೂಕ್ತ ವ್ಯಕ್ತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಂತ್ರಿಮಂಡಲ ರಚಿಸಿದ್ದು ಹೇಗೆ ಎಂದು ಪ್ರಶ್ನಿಸಿದರು.

ಪಕ್ಷದ ಹೊಣೆಗಾರಿಕೆ ಹೊತ್ತಿರುವ ವೇಣುಗೋಪಾಲ್‌, ಪರಮೇಶ್ವರ್‌, ಸಿದ್ದರಾಮಯ್ಯ ಅವರು ತಾತ್ಕಾಲಿಕ ವಿಚಾರಗಳಿಗಿಂತ ದೂರದ ಉದ್ದೇಶದ ಬಗ್ಗೆ ಗಮನ ನೀಡಬೇಕು. ಇದರಲ್ಲಿ ಸ್ವಲ್ಪ ವ್ಯತ್ಯಾಸ ಕಾಣುತ್ತಿದೆ. ಹೀಗಾಗಿ ಕೆಲವರ ಜತೆ ಸಂಪರ್ಕ ಇಟ್ಟುಕೊಂಡಿದ್ದೇನೆ. ಇದರ ವಿರುದ್ಧ ಎದ್ದಿರುವ ಬಣಗಳ ಬಗ್ಗೆ ಅವರ ಜತೆ ಚರ್ಚೆ ಮಾಡುತ್ತಿದ್ದೇನೆ ಎಂದರು.

click me!