
ಬೆಂಗಳೂರು(ಜ.04): ಬಿಐಎಸ್, ಐಎಸ್'ಐ ಗುಣಮಟ್ಟದಲ್ಲಿ ಇಲ್ಲದ ಹಾಗೂ ತಲೆಯನ್ನು ಅರ್ಧ ಮಾತ್ರ ಆವರಿಸುವ ಅಸುರಕ್ಷಿತ ಕಳಪೆ ಹೆಲ್ಮೆಟ್ ಬಳಕೆಯನ್ನು ನಿರ್ಬಂಧಿಸುವಂತೆ ಗೃಹ ಸಚಿವ ರಾಮ ಲಿಂಗಾರೆಡ್ಡಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಫೆಬ್ರವರಿ 1ರಿಂದ ಇಂತಹ ಹೆಲ್ಮೆಟ್ ಧರಿಸಿ ದ್ವಿಚಕ್ರವಾಹನ ಚಾಲನೆ ಮಾಡುವವರ ವಿರುದ್ಧ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸುವಂತೆಯೂ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಅರೆ ಹೆಲ್ಮೆಟ್’ ಹಾಗೂ ಕಳಪೆ ಗುಣಮಟ್ಟದ ಹೆಲ್ಮೆಟ್ ಧಾರಣೆ ವಿರುದ್ಧ ಮೈಸೂರು ನಗರ ಪೊಲೀಸರ ಕಾರ್ಯಾಚರಣೆಯು ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದ ಬೆನ್ನಲ್ಲೇ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಈಗ ರಾಜ್ಯವ್ಯಾಪಿ ಕಾರ್ಯಾಚರಣೆಗೆ ಸೂಚನೆ ನೀಡಿದ್ದಾರೆ. ಫೆಬ್ರವರಿ 1ರಿಂದ ರಾಜ್ಯದೆಲ್ಲೆಡೆ ದ್ವಿಚಕ್ರ ವಾಹನಗಳ ಸವಾರರು ಐಎಸ್'ಐ ಗುಣಮಟ್ಟದ್ದಲ್ಲದ ಹಾಗೂ ಅರೆ ಹೆಲ್ಮೆಟ್ ಧರಿಸುವುದನ್ನು ನಿರ್ಬಂಧಿಸುವಂತೆ ಪೊಲೀಸರಿಗೆ ನಿರ್ದೇಶಿಸಿದ್ದಾರೆ.
ಬುಧವಾರ ಬೆಳಗ್ಗೆ ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಹಾಗೂ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಆರ್.ಹಿತೇಂದ್ರ ಅವರಿಗೆ ದೂರವಾಣಿ ಕರೆ ಮಾಡಿದ ಸಚಿವರು, ಮೈಸೂರು ಪೊಲೀಸರ ಮಾದರಿಯಲ್ಲೇ ಕಳಪೆ ಹೆಲ್ಮೆಟ್'ಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಜರುಗಿಸುವಂತೆ ತಾಕೀತು ಮಾಡಿದ್ದಾರೆ. ಸಚಿವರ ಸೂಚನೆ ಬಳಿಕ ಡಿಜಿ-ಐಜಿ ಅವರು, ಬೆಂಗಳೂರು ಸೇರಿದಂತೆ ಬೆಳಗಾವಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ ಆಯುಕ್ತರು ಹಾಗೂ ಎಲ್ಲ ವಲಯ ಐಜಿಪಿಗಳಿಗೆ ಕರೆ ಮಾಡಿದರು. ಕಳಪೆ ಹೆಲ್ಮೆಟ್ ಧರಿಸುವ ದ್ವಿಚಕ್ರ ವಾಹನಗಳ ಸವಾರರು ಹಾಗೂ ಮಾರಾಟಗಾರರ ವಿರುದ್ಧ ಕಾರ್ಯಾಚರಣೆಗೆ ಆದೇಶ ನೀಡಿದರು ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಫುಲ್ ಹೆಲ್ಮೆಟ್, ಬಿಐಎಸ್ ಕಡ್ಡಾಯ: ಈ ಆದೇಶದ ಹಿನ್ನೆಲೆಯಲ್ಲಿ ಗುಣಮಟ್ಟದ ಹೆಲ್ಮೆಟ್ ಖರೀದಿಗೆ ನಾಗರಿಕರಿಗೆ ಜ.31 ವರೆಗೆ ಗಡುವು ವಿಧಿಸಿದಂತಾಗಿದೆ. ಅಲ್ಲದೆ, ಗುಣಮಟ್ಟದ ಹೆಲ್ಮೆಟ್ ಧಾರಣೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಫೆ.1ರಿಂದ ಬಿಐಎಸ್ ಮತ್ತು ಐಎಸ್'ಐ ಗುಣಮಟ್ಟ ಹೊಂದಿರದ ಹಾಗೂ ಅರೆ ಹ್ಮೆಟ್ ಧರಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ 45 ಲಕ್ಷ ದ್ವಿಚಕ್ರ ವಾಹನಗಳಿವೆ. ಇಲ್ಲಿ ತಲಾ ಬೈಕ್'ಗೆ ಎರಡು ಹೆಲ್ಮೆಟ್‌ಗಳ ಎಂದು ಪರಿಗಣಿಸಿದರೂ ಸುಮಾರು ಒಂದು ಕೋಟಿಗೂ ಅಧಿಕ ಹೆಲ್ಮೆಟ್'ಗಳು ಬಳಕೆಯಲ್ಲಿವೆ. ಹೀಗಾಗಿ ಒಮ್ಮೆಗೆ ಕಳಪೆ ಹೆಲ್ಮೆಟ್ ಧರಿಸುವಂತಿಲ್ಲ ಎಂದು ತಾಕೀತು ಮಾಡಿದರೆ ಜನರಿಂದ ವಿರೋಧ ವ್ಯಕ್ತವಾಗಬಹುದು. ಆದರಿಂದ ಈ ತಿಂಗಳಾಂತ್ಯದವರೆಗೆ ಸುರಕ್ಷಿತ ಹೆಲ್ಮೆಟ್‌ಗಳ ಕುರಿತು ನಾಗರಿಕರಿಗೆ ಅರಿವು ಮೂಡಿಸಲು ಜಾಗೃತಿ ಕಾಯಕ್ರಮ ಆಯೋಜನೆ ಹಾಗೂ ಪ್ರಚಾರ ನಡೆಸಲಾಗುತ್ತದೆ. ನಂತರ ಕಳಪೆ ಹೆಲ್ಮೆಟ್ ಧರಿಸಿದರೆ ಕ್ರಮ ಜರುಗಿಸಲಾಗುತ್ತದೆ ಎಂದರು. ಗುಣಮಟ್ಟವಲ್ಲದ ಹೆಲ್ಮೆಟ್ ಧರಿಸುವವರಿಗೆ ಮಂಗಳವಾರ ಚುರುಕು ಮುಟ್ಟಿಸಿದ್ದ ಮೈಸೂರು ನಗರ ಪೊಲೀಸರು, ಕೇವಲ ಮೂರು ತಾಸಿನೊಳಗೆ 15 ಸಾವಿರಕ್ಕೂ ಅಸುರಕ್ಷಿತ ಹೆಲ್ಮಟ್'ಗಳನ್ನು ವಶಕ್ಕೆ ಪಡೆದಿದ್ದರು. ಈ ಕಾರ್ಯಾಚರಣೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.