ನಾವಿದನ್ನು ನೆನಪಿಟ್ಟುಕೊಳ್ಳುತ್ತೇವೆ: ಸೋನಿಯಾಗೆ ಮಮತಾ ಎಚ್ಚರಿಕೆ!

By Web DeskFirst Published Feb 14, 2019, 9:52 AM IST
Highlights

ನೆನಪಿಟ್ಟುಕೊಳ್ತೇವೆ ಎಂದು ಸೋನಿಯಾಗೆ ಮಮತಾ ಎಚ್ಚರಿಕೆ!| ಶಾರದಾ ಚಿಟ್‌ಫಂಡ್‌ನಲ್ಲಿ ಮಮತಾ ಭಾಗಿ ಎಂದಿದ್ದ ಅಧೀರ್‌ ರಂಜನ್‌| ಲೋಕಸಭೆಯಲ್ಲಿ ತಮ್ಮ ಮೇಲೆ ಆರೋಪದಿಂದ ಮಮತಾ ಆಕ್ರೋಶ| ಸಂಸತ್‌ನಲ್ಲಿ ಎದುರಾದ ಸೋನಿಯಾಗೆ ಇದನ್ನು ನಾವು ಮರೆಯಲ್ಲ ಎಂದ ದೀದಿ

ನವದೆಹಲಿ[ಫೆ.14]: ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ ತಮ್ಮ ವಿರುದ್ಧ ಕಾಂಗ್ರೆಸ್‌ ನಾಯಕರು ವಾಗ್ದಾಳಿ ನಡೆಸಿದ್ದಕ್ಕೆ ಕ್ರುದ್ಧರಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ನಾವಿದನ್ನು ನೆನಪಿಟ್ಟುಕೊಳ್ಳುತ್ತೇವೆ’ ಎಂದು ಮುಖಕ್ಕೆ ಹೊಡೆದಂತೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೇ ಹೇಳಿದ್ದಾರೆ.

ಬುಧವಾರ ಲೋಕಸಭೆ ಕಲಾಪದಲ್ಲಿ ಪಶ್ಚಿಮ ಬಂಗಾಳದ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧುರಿ ಮಾತನಾಡಿ, ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ ಮಮತಾ ಬ್ಯಾನರ್ಜಿ ನೇರವಾಗಿ ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಜನರನ್ನು ಲೂಟಿ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು. ನಂತರ ಸ್ವಲ್ಪ ಹೊತ್ತಿನಲ್ಲೇ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಮಮತಾ ಬ್ಯಾನರ್ಜಿ ಹಾಗೂ ಸೋನಿಯಾ ಗಾಂಧಿ ಎದುರುಬದುರಾದರು. ಆಗ ಸೋನಿಯಾ ಅವರೇ ಮಮತಾರನ್ನು ಮಾತನಾಡಿಸಿ, ‘ನಾವು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದರೂ ಸ್ನೇಹಿತರೇ’ ಎಂದರು. ಅದಕ್ಕೆ ಸಿಟ್ಟಿನಿಂದ ಉತ್ತರ ನೀಡಿದ ಮಮತಾ, ‘ನಾವಿದನ್ನು ನೆನಪಿಟ್ಟುಕೊಳ್ಳುತ್ತೇವೆ’ ಎಂದು ಹೇಳಿ ಅಲ್ಲಿಂದ ತೆರಳಿದರು.

ಇದಕ್ಕೂ ಮುನ್ನ ಸಂಸತ್ತಿನಲ್ಲಿ ಅಧೀರ್‌ ರಂಜನ್‌ ಚೌಧುರಿ ಅವರು ಮಮತಾ ಹಾಗೂ ಅವರ ಪಕ್ಷ ಟಿಎಂಸಿ ವಿರುದ್ಧ ನಡೆಸಿದ ವಾಗ್ದಾಳಿಗೆ ಬಿಜೆಪಿ ಸಂಸದರು ಮೇಜು ಕುಟ್ಟಿಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಾದೇಶಿಕ ಪಕ್ಷಗಳು ರೂಪಿಸಿರುವ ಮಹಾಗಠಬಂಧನದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೇರಿಸಿಕೊಳ್ಳುವ ವಿಚಾರ ಡೋಲಾಯಮಾನ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ‘ಮಮತಾ-ಸೋನಿಯಾ ಘರ್ಷಣೆ’ ಮಹತ್ವ ಪಡೆದಿದೆ. ಇತ್ತೀಚೆಗೆ ಬಂಗಾಳದಲ್ಲಿ ಮಮತಾ ನಡೆಸಿದ್ದ ಮಹಾಗಠಬಂಧನ ಸಮಾವೇಶಕ್ಕೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ತೆರಳಿದ್ದರು.

click me!