'ನಾವು ಭಾರತದ ನಂಬಿಗಸ್ಥ ಚೇಲಾಗಳು'

By Suvarna Web DeskFirst Published May 24, 2017, 5:33 PM IST
Highlights

ಸಮಾಜದಲ್ಲಿ ಇಂದಿಗೂ ಹಾಸುಹೊಕ್ಕಾಗಿರುವ ಜಾತಿ ವ್ಯವಸ್ಥೆ ಹಾಗೂ ಊಳಿಗಮಾನ್ಯ ಪದ್ಧತಿಯ ಮನಸ್ಥಿತಿಯಿಂದ ಯಾವುದೇ ಧರ್ಮ ಶ್ರೇಷ್ಠತೆ ಸಾಧಿಸಿದಂತೆ ಆಗುವುದಿಲ್ಲ ಹಾಗೂ ಇಂತಹ ಪದ್ಧತಿಯನ್ನು ನಿಜವಾದ ಧರ್ಮ ಒಪ್ಪುವುದಿಲ್ಲ ಎಂದು ಜಗತ್ತಿನಲ್ಲಿ ಇಂದಿಗೂ ಜೀವಂತವಾಗಿರುವ ಜಾತಿ ವ್ಯವಸ್ಥೆಯನ್ನು ವಿಮರ್ಶಿಸಿದರು.

ಬೆಂಗಳೂರು: ಪುರಾತನ ಮೌಲ್ಯಗಳು ಮತ್ತು ಜ್ಞಾನದಿಂದಾಗಿ ಭಾರತವು ಗುರು ಎನಿಸಿದ್ದು, ನಾವೆಲ್ಲ ಭಾರತದ ನಂಬಿಗಸ್ಥ ಚೇಲಾಗಳು. ಭಾರತದ ಪ್ರಾಚೀನತೆಯನ್ನು ನಾವು ಸಂರಕ್ಷಿಸಿಕೊಂಡು ಬಂದಿದ್ದೇವೆ ಎಂದು ಟಿಬೇಟ್‌'ನ ಬೌದ್ಧ ಧರ್ಮಗುರು ದಲೈ ಲಾಮಾ ಅಭಿಪ್ರಾಯಪಟ್ಟರು. ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ನಗರದ ಡಾ.ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣ ಮಾಡಿದರು. 

‘ನಾನು ನನ್ನನ್ನು ಭಾರತದ ಪುತ್ರನೆಂದೇ ನಂಬಿದ್ದೇನೆ. ನನ್ನ ಮೆದುಳಿನ ಪ್ರತಿ ಕಣವೂ ಭಾರತದ ಪುರಾತನ ಜ್ಞಾನ ಮತ್ತು ದೇಹದ ಕಣಕಣವೂ ಭಾರತದ ಅನ್ನದಿಂದ ಸೃಷ್ಟಿಯಾಗಿದೆ' ಎಂದು ಬಣ್ಣಿಸಿದರು.

ಸಮಾಜದಲ್ಲಿ ಇಂದಿಗೂ ಹಾಸುಹೊಕ್ಕಾಗಿರುವ ಜಾತಿ ವ್ಯವಸ್ಥೆ ಹಾಗೂ ಊಳಿಗಮಾನ್ಯ ಪದ್ಧತಿಯ ಮನಸ್ಥಿತಿಯಿಂದ ಯಾವುದೇ ಧರ್ಮ ಶ್ರೇಷ್ಠತೆ ಸಾಧಿಸಿದಂತೆ ಆಗುವುದಿಲ್ಲ ಹಾಗೂ ಇಂತಹ ಪದ್ಧತಿಯನ್ನು ನಿಜವಾದ ಧರ್ಮ ಒಪ್ಪುವುದಿಲ್ಲ ಎಂದು ಜಗತ್ತಿನಲ್ಲಿ ಇಂದಿಗೂ ಜೀವಂತವಾಗಿರುವ ಜಾತಿ ವ್ಯವಸ್ಥೆಯನ್ನು ವಿಮರ್ಶಿಸಿದರು.

ಲೋಕಸಭೆಯ ಕಾಂಗ್ರೆಸ್‌ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇಂದಿಗೂ ದಕ್ಷಿಣ ಭಾರತೀಯರು ಕಪ್ಪು ಜನ, ಉತ್ತರ ಭಾರತೀಯರು ಬಿಳಿ ಜನ ಎಂದು ಹೇಳುವ ವರ್ಣಭೇದ ನೀತಿ ಪ್ರಚೋದಿಸುವ ನಾಯಕರು ಭಾರತದಂತಹ ದೇಶದಲ್ಲಿ ಇದ್ದಾರೆ. ಇದು ಕಠೋರ ಸತ್ಯ. ನಮ್ಮ ಜನರು ಒಗ್ಗಟ್ಟಿನಿಂದ ಇಂತಹ ಶಕ್ತಿಗಳನ್ನು ಎದುರಿಸಬೇಕು ಎಂದು ಅಭಿಪ್ರಾಯಪಟ್ಟರು.

ವಿಚಾರ ಸಂಕಿರಣ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಾಮಾಜಿಕ ನ್ಯಾಯ, ಮೀಸಲಾತಿಯ ವಿಷಯಗಳು ಜಾತಿ ವ್ಯವಸ್ಥೆಯೊಂದಿಗೆ ತಳುಕು ಹಾಕಿಕೊಂಡಿವೆ. ಈ ಬಗ್ಗೆ ಮೇಲ್ವರ್ಗದವರು, ಶೋಷಿತರು ಒಟ್ಟಾಗಿ ಚಿಂತನೆ ಮಾಡಬೇಕಿದೆ ಎಂದು ಹೇಳಿದರು. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್, ಆಯುಕ್ತ ವಿಕಾಸ್'ಕುಮಾರ್ ಉಪಸ್ಥಿತರಿದ್ದರು.

ನಾನು ಲೆಫ್ಟ್‌, ಮಹದೇವಪ್ಪ ರೈಟ್‌!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಲೆಫ್ಟ್‌, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ರೈಟ್‌. ಅಂದರೆ ನಾನು ಎಡಗೈ. ಮಹದೇವಪ್ಪನವ್ರು ಬಲಗೈ. ನಾವಿಬ್ಬರೂ ಸಿದ್ದರಾಮಯ್ಯನವರ ಜೊತೆಗೇ ಇರುತ್ತೇವೆ... ಹೀಗೆಂದು ತಮ್ಮ ನಿಷ್ಠೆಯನ್ನು ಹೇಳಿಕೊಂಡವರು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ. ರಾಜ್ಯದ ದಲಿತ ಸಮುದಾಯಗಳ ಅಭಿವೃದ್ಧಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ತೋರಿದ ಔದಾರ್ಯವನ್ನು ಹಾಡಿ ಹೊಗಳಿದ ಆಂಜನೇಯ, ಅದರ ಹಿಂದೆ ನನ್ನ ಮತ್ತು ಮಹದೇವಪ್ಪನವರ ಮೇಲಿನ ಪ್ರೀತಿ, ವಿಶ್ವಾಸ ಮತ್ತು ದಲಿತರ ಬಗೆಗಿನ ಕಾಳಜಿ ಇದೆ ಎಂದರು. 

ಕನ್ನಡಪ್ರಭ ವಾರ್ತೆ
epaper.kannadaprabha.in

click me!