ಮಂಗಳೂರಿನಲ್ಲಿ ನೀರು ರೇಷನಿಂಗ್ ಶುರು: 4 ದಿನ ನೀರು ಪೂರೈಕೆ, 2 ದಿನ ಸ್ಥಗಿತ

By Web DeskFirst Published May 2, 2019, 8:05 AM IST
Highlights

ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕುಸಿತ | ನಗರಕ್ಕೆ 4 ದಿನ ನೀರು ಪೂರೈಕೆ, 2 ದಿನ ಸ್ಥಗಿತ

ಮಂಗಳೂರು[ಮೇ.02]: ರಾಜ್ಯದೆಲ್ಲೆಡೆ ಬಿರುಬೇಸಿಗೆಯಿಂದಾಗಿ ನೀರಿಗೆ ಹಾಹಾಕಾರ ಶುರುವಾಗಿದೆ. ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಇಳಿಕೆ ಯಾಗಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನೀರು ರೇಷನಿಂಗ್ ಆರಂಭಿಸಲಾ ಗಿದೆ. ಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುವ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮಳೆಯಾಗುವ ತನಕ ಮಂಗಳೂರು ನಗರಕ್ಕೆ 4 ದಿನ ನೀರು ಪೂರೈಸಿ 2 ದಿನ ನೀರು ಸ್ಥಗಿತಗೊಳಿಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ.

ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹಾಗೂ ಪಾಲಿಕೆ ಆಯುಕ್ತ ನಾರಾಯಣಪ್ಪ ಅವರ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದಿನ ರೇಷನಿಂಗ್ ತೀರ್ಮಾನ ದಂತೆಯೇ 48 ಗಂಟೆಗಳ ಕಡಿತ ಹಾಗೂ 96 ಗಂಟೆಗಳ ನೀರು ಸರಬರಾಜು ನಡೆಯಲಿದೆ.

ಮೇ ೧ರಂದು ಬೆಳಗ್ಗೆ 6 ಗಂಟೆಯಿಂದ ಮುಂದಿನ 48 ಗಂಟೆಗಳ (ಮೇ ೩ರಂದು ಬೆಳಗ್ಗೆ 6 ಗಂಟೆ) ವರೆಗೆ ನೀರು ಪೂರೈಕೆ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಮೇ ೩ರಂದು ಬೆಳಗ್ಗೆ 6 ಗಂಟೆಯಿಂದ ಮುಂದಿನ 96 ಗಂಟೆ (ಮೇ 7ರ ಬೆಳಗ್ಗೆ 6 ಗಂಟೆ) ನೀರು ಪೂರೈಕೆಯಾಗಲಿದ್ದು, ಮೇ 7ರಂದು ಬೆಳಗ್ಗೆ 6 ಗಂಟೆಗೆ ನೀರು ಮತ್ತೆ ಸ್ಥಗಿತ ಗೊಳ್ಳಲಿದೆ. ಮೇ 21ರ ವರೆಗೆ ಇದೇ ರೀತಿ ಮುಂದುವರಿ ಯಲಿದೆ. ಬಳಿಕ ನೀರಿನ ಲಭ್ಯತೆ ನೋಡಿ ಮುಂದಿನ ಕ್ರಮ ಅನುಸರಿಸಲಾಗುವುದು. ಒಂದು ವೇಳೆ ಮಳೆ ಬಂದು ನೀರಿನ ಪ್ರಮಾಣ ಹೆಚ್ಚಳವಾದರೆ ರೇಷನಿಂಗ್ ಪದ್ಧತಿ ಕೈಬಿಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

click me!