
ನವದೆಹಲಿ (ಅ.31): ಭಾರೀ ಸಂಚಲನವನ್ನು ಉಂಟು ಮಾಡಿದ್ದ ಬಹುಕೋಟಿ ವ್ಯಾಪಂ ಹಗರಣದಿಂದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾನ್’ರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. 490 ಮಂದಿ ಮೇಲೆ ಸಿಬಿಐ ಆರೋಪಪಟ್ಟಿ ಸಲ್ಲಿಸಿದ್ದು ಶಿವರಾಜ್ ಚೌಹಾಣ್’ರನ್ನು ಕೈಬಿಟ್ಟಿದೆ. ಇದರಿಂದ ಬಿಜೆಪಿಗೆ ತುಸು ನಿರಾಳವಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ವ್ಯಾಪಂ ಕಚೇರಿಯಿಂದ ವಶಪಡಿಸಿಕೊಂಡ ಹಾರ್ಡ್ ಡಿಸ್ಕ್’ನಲ್ಲಿ ‘ಸಿಎಂ’ ಹೆಸರಿರಲಿಲ್ಲ ಎಂದು ಸಿಬಿಐ ನ್ಯಾಯಾಲಯಕ್ಕೆ ಹೇಳಿದೆ. ಹಾರ್ಡ್ ಡಿಸ್ಕನ್ನು ತಿರುಚಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಪಾಂಡೆ ಆರೋಪಿಸಿದ್ದಾರೆ. ಇದನ್ನು ಸಿಬಿಐ ಅಲ್ಲಗಳೆದಿದೆ.
ವ್ಯಾಪಂ ಕಚೇರಿಯಿಂದ ವಶಪಡಿಸಿಕೊಂಡ ಮೂರು ಕಂಪ್ಯೂಟರ್’ಗಳ ಹಾರ್ಡ್ ಡಿಸ್ಕ್’ಗಳನ್ನು ವಿಧಿವಿಜ್ಞಾನ ತಜ್ಞರು ಪರಿಶೀಲಿಸಿದ್ದಾರೆ. ಅದನ್ನು ತಿರುಚಲಾಗಿಲ್ಲ. ಇದ್ದಿದ್ದನ್ನು ಇರುವ ಹಾಗೆಯೇ ನಾವು ಭೂಪಾಲ್ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ ಎಂದು ಸಿಬಿಐ ಹೇಳಿದೆ.
ಏನಿದು ವ್ಯಾಪಂ ಪ್ರಕರಣ?
2013 ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವಿದ್ದಾಗ ವ್ಯವಸಾಯಿಕ್ ಪರೀಕ್ಷಾ ಮಂಡಲ್/ ವ್ಯಾಪಂ ನಡೆಸುವ ಪೂರ್ವ ವೈದ್ಯಕೀಯ ಪರೀಕ್ಷೆಯಲ್ಲಿ ಸುಮಾರು 2000 ಕೋಟಿ ಭಾರೀ ಅಕ್ರಮವಾಗಿದೆ. ಇದರಲ್ಲಿ ಒಂದು ಪ್ರಶ್ನೆಪತ್ರಿಕೆಯನ್ನು 5 ಲಕ್ಷದವರೆಗೆ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗಿದೆ. ಆಸನ ವ್ಯವಸ್ಥೆ, ಉತ್ತರ ಪತ್ರಿಕೆ ಅದಲು-ಬದಲು ಮಾಡಿ ಭಾರೀ ಅಕ್ರಮ ಎಸಗಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಹಗರಣದಲ್ಲಿ ಶಿವರಾಜ್ ಸಿಂಗ್ ಹೆಸರು ಬಲವಾಗಿ ಕೇಳಿ ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.