
ಲಂಡನ್(ಆ.12): ಖ್ಯಾತ ಬ್ರಿಟೀಷ್ ಲೇಖಕ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ವಿಎಸ್ ನೈಪಾಲ್ ವಿಧಿವಶರಾಗಿದ್ದಾರೆ. 85 ವರ್ಷದ ನೈಪಾಲ್ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಅವರ ನಿಧನದ ಸುದ್ದಿಯನ್ನು ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
1932ರಲ್ಲಿ ಟ್ರಿನಿಡ್ಯಾಡ್ ನಲ್ಲಿ ಜನಿಸಿದ್ದ ನೈಪಾಲ್, ಸುಮಾರು 30ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ‘ಎ ಬೆಂಡ್ ಇನ್ ದಿ ರಿವರ್’, ‘ಎ ಹೌಸ್ ಆಫ್ ಮಿ.ಬಿಸ್ವಾಸ್’ ಎಂಬ ಪುಸ್ತಕಗಳು ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದವು.
ಸಾಹಿತ್ಯ ಕ್ಷೇತ್ರಕ್ಕೆ ಅವರು ಸಲ್ಲಿಸಿದ್ದ ಸೇವೆಗಾಗಿ ಅವರಿಗೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದವು. ಈ ಪೈಕಿ 1971ರಲ್ಲಿ ಬೂಕರ್ ಪ್ರಶಸ್ತಿ ಒಲಿದಿತ್ತು. 1990ರಲ್ಲಿ ಬ್ರಿಟನ್ ರಾಣಿ ಕ್ವೀನ್ ಎಲಿಜೆಬೆತ್ ರಿಂದ ಗೌರವಕ್ಕೆ ಪಾತ್ರರಾಗಿದ್ದರು. 2001ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ವಿ.ಎಸ್.ನೈಪಾಲ್ ಅವರ ಪೂರ್ಣ ಹೆಸರು ವಿದ್ಯಾಧರ್ ಸೂರಜ್‌ಪ್ರಸಾದ್ ನೈಪಾಲ್. ಅವರ ತಂದೆ ಭಾರತ ಸರ್ಕಾರದ ಸೇವೆಯಲ್ಲಿದ್ದರು. ಆಕ್ಸ್‌ಫರ್ಡ್ ವಿವಿಯಲ್ಲಿ ವಿದ್ಯಾರ್ಥಿ ವೇತನ ಪಡೆದು ಇಂಗ್ಲಿಷ್ ಸಾಹಿತ್ಯ ಅಭ್ಯಾಸ ಮಾಡಿದರು.
ಬ್ರಿಟನ್‌ನ ಸಾಂಸ್ಕೃತಿಕ ಜಗತ್ತಿನ ಆಧಾರ ಸ್ತಂಭವಾಗಿದ್ದ ಅವರು, ಬ್ರಿಟನ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಅಗ್ರಗಣ್ಯರು. ವಸಾಹತು ಕಾಲಘಟ್ಟದ ನಂತರ ವಿಶ್ವದ ವಿವಿಧ ದೇಶಗಳಲ್ಲಿ ಆದ ಬದಲಾವಣೆಗಳನ್ನು ಅವರ ಕೃತಿಗಳು ಹಿಡಿದಿಟ್ಟಿವೆ.
ಇನ್ನು ನೈಪಾಲ್ ನಿಧನಕ್ಕೆ ವಿಶ್ವ ಕಂಬನಿ ಮಿಡಿದಿದ್ದು, ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಅದರಂತೆ ನೈಪಾಲ್ ಅವರ ಧೀರ್ಘಕಾಲದ ಸ್ನೇಹಿತ ಸಲ್ಮಾನ್ ರಶ್ದಿ ಸೇರಿದಂತೆ ಇತರ ಗಣ್ಯರೂ ಕಂಬನಿ ಮಿಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.