
ನವದೆಹಲಿ(ಫೆ.14): ಆದಾಯ ಮೀರಿ ಅಕ್ರಮ ಆಸ್ತಿಗಳಿಕೆ ಮಾಡಿದ ಆರೋಪದಡಿ ಶಶಿಕಲಾ ಹಾಗೂ ಇನ್ನಿಬ್ಬರನ್ನು ಅಪರಾಧಿಗಳೆಂದು ಸುಪ್ರೀಂ ಕೋರ್ಟ್ ಮಹತ್ತರ ತೀರ್ಪು ನೀಡಿದೆ. ಈ ಮೂಲಕ 19 ವರ್ಷಗಳ ವಾದವಿವಾದಗಳ ಬಳಿಕ ಅಂತಿಮ ತೀರ್ಪು ಹೊರಬಿದ್ದಿದೆ.
ಬೆಂಗಳೂರು ವಿಶೇಷ ಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್'ನ ದ್ವಿಸದಸ್ಯ ನ್ಯಾಯಪೀಠ ಶಶಿಕಲಾ ನಟರಾಜನ್'ಗೆ ನಾಲ್ಕು ವರ್ಷ ಜೈಲು ಹಾಗೂ 10 ಕೋಟಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ತೀರ್ಪು ಪ್ರಕಟಣೆಯಾಗುತ್ತಿದ್ದಂತೆ ಶಶಿಕಲಾ ಗಳಗಳನೆ ಅತ್ತಿದ್ದಾರೆಂದು ವರದಿಯಾಗಿದೆ. ಈ ಮೂಲಕ ತಮಿಳುನಾಡಿನ ಮುಖ್ಯಮಂತ್ರಿ ಆಗುವ ಶಶಿಕಲಾ ಕನಸು ಭಗ್ನವಾಗಿದೆ. ಚಿನ್ನಮ್ಮ ಇನ್ನು ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
ಶಶಿಕಲಾ,ಇಳವರಸಿ ಮತ್ತು ಸುಧಾಕರ್ ಅಪರಾಧಿಗಳೆಂದು ಸುಪ್ರೀಂ ಕೋರ್ಟ್'ನ ನ್ಯಾ.ಪಿ.ಸಿ. ಘೋಷ್ ಮತ್ತು ಅಮಿತವ್ ರಾಯ್ ಒಳಗೊಂಡ ವಿಭಾಗೀಯ ಪೀಠ ಒಮ್ಮತದ ತೀರ್ಪು ಪ್ರಕಟಿಸಿದೆ.
ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಆದಾಯ ಮೀರಿ ಆಸ್ತಿ ಪ್ರಕರಣದ ಮುಖ್ಯ ಆರೋಪಿಯಾಗಿದ್ದು ಅವರು ಮೃತಪಟ್ಟಿರುವುದರಿಂದ ಅವರನ್ನು ಪ್ರಕರಣದಿಂದ ಕೈಬಿಡಲಾಗಿದ್ದು, ಇನ್ನು ಎರಡನೇ ಆರೋಪಿ ಶಶಿಕಲಾ, ಮೂರನೇ ಆರೋಪಿ ಸುಧಾಕರನ್ ಮತ್ತು ನಾಲ್ಕನೇ ಆರೋಪಿ ಇಳವರಸಿ ಇದೀಗ ಅಪರಾಧಿಗಳೆಂದು ತೀರ್ಪು ಹೊರಬಿದ್ದಿದ್ದು ಅವರೆಲ್ಲರೂ ಜೈಲು ಸೇರಲಿದ್ದಾರೆ.
ಈ ತೀರ್ಪು ತಮಿಳುನಾಡು ಹಂಗಾಮಿ ಸಿಎಂ ಪನ್ನೀರ್ ಸೆಲ್ವಂಗೆ ನಿರಾಳವನ್ನಾಗಿಸಿದೆ. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಿಂದ ತಕ್ಷಣವೇ ಶಶಿಕಲಾ ಪೊಲೀಸರಿಗೆ ಶರಣಾಗಬೇಕಿದೆ. ಹೀಗಾಗಿ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ರವಾನೆಯಾಗಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.