ವೈರಲ್ ಚೆಕ್: ಬಿಜೆಪಿ ಪರ ಅಭಿನಂದನ್ ಪ್ರಚಾರ ಮಾಡಿದ್ದು ನಿಜನಾ..?

By Web DeskFirst Published Apr 18, 2019, 1:52 PM IST
Highlights

ವಿಂಗ್ ಕಮಾಂಡರ್ ಅಭಿನಂದನ್ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಸುಳ್ಳು ಸುದ್ದಿ ವೈರಲ್ ಆಗುತ್ತಿದೆ. ಏನಿದು ಕಹಾನಿ ನೀವೇ ನೋಡಿ...

ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಬೆಂಬಲ ನೀಡಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಅಭಿನಂದನ್‌ ಅವರಂತೆಯೇ ಕಾಣುವ ವ್ಯಕ್ತಿಯ ಫೋಟೋವನ್ನು ಪೋಸ್ಟ್‌ ಮಾಡಲಾಗಿದ್ದು, ಅದರಲ್ಲಿ ಅವರು ಕೇಸರಿ ಬಣ್ಣದ ಶಿರೋವಸ್ತ್ರ ಧರಿಸಿದ್ದಾರೆ, ಅದರಲ್ಲಿ ಕಮಲದ ಚಿತ್ರವಿದೆ. 

ಈ ಫೋಟೋದೊಂದಿಗೆ, ‘ಅಭಿನಂದನ್‌ ಜೀ ನೇರವಾಗಿ ಬಿಜೆಪಿಗೆ ಬೆಂಬಲ ನೀಡಿ, ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ. ಸದ್ಯ ನರೇಂದ್ರ ಮೋದಿಗಿಂತ ಉತ್ತಮ ಪ್ರಧಾನಿ ಬೇರೊಬ್ಬರಿಲ್ಲ ಎಂದು ಅವರೇ ಹೇಳುತ್ತಿದ್ದಾರೆ. ಈ ಸಂದೇಶವನ್ನು ಜಿಹಾದಿಗಳಿಗೆ ಮತ್ತು ಕಾಂಗ್ರೆಸ್‌ಗೆ ತಲುಪಿಸಿ’ ಎಂದು ಒಕ್ಕಣೆ ಬರೆಯಲಾಗಿದೆ.

ಬಿಜೆಪಿ ಬೆಂಬಲಿತ ಫೇಸ್‌ಬುಕ್‌ ಪೇಜ್‌ಗಳು ಇದನ್ನು ಹೆಚ್ಚು ಶೇರ್‌ ಮಾಡಿವೆ. ಆದರೆ ಇದೊದು ಸುಳ್ಳು ಸುದ್ದಿ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಏಕೆಂದರೆ ಭಾರತೀಯ ವಾಯುಪಡೆಯ ಯಾವುದೇ ಅಧಿಕಾರಿಗಳೂ ಯಾವುದೇ ಪಕ್ಷದ ಪರವಾಗಿ ಬಹಿರಂಗ ಪ್ರಚಾರ ಮಾಡುವಂತಿಲ್ಲ. 

ಈ ಬಗ್ಗೆ ಐಎಫ್‌ಎಸ್‌ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಇದೆ. ಅಲ್ಲದೆ ಫೋಟೋದಲ್ಲಿರುವ ವ್ಯಕ್ತಿ ಅಭಿನಂದನ್‌ ವರ್ತಮಾನ ಕೂಡ ಅಲ್ಲ. ಫೋಟೋವನ್ನು ಕಂಡಾಕ್ಷಣ ಸಾಮ್ಯತೆ ಕಂಡರೂ ಸೂಕ್ಷ್ಮವಾಗಿ ಗಮನಿಸಿದಾಗ ವ್ಯತ್ಯಾಸಗಳು ಗೋಚರವಾಗುತ್ತವೆ.

click me!