ಸೋತ ಬಳಿಕ ಶಿವರಾಜ್‌ ಸಿಂಗ್‌ ಚೌಹಾಣ್‌ ದೂರವಿಟ್ಟ ಬಿಜೆಪಿ ಹೈಕಮಾಂಡ್‌?

By Web DeskFirst Published Jan 17, 2019, 9:43 AM IST
Highlights

ಮೋದಿಗೆ ಹೂವಿನ ಹಾರ ಹಾಕಲು ಮುಂದಾಗಿದ್ದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ತಡೆದಿದ್ದಾರೆ ಎಂಬ ಸಂದೇಶದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿಯಾಚೆಗಿನ ಸತ್ಯ

ಪ್ರಧಾನಿ ನರೇಂದ್ರ ಮೋದಿಗೆ ಹೂವಿನ ಹಾರ ಹಾಕಲು ಮುಂದಾಗಿದ್ದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಬಿಜೆಪಿ ರಾಷ್ಟಾ್ರಧ್ಯಕ್ಷ ಅಮಿತ್‌ ಶಾ ತಡೆದಿದ್ದಾರೆ ಎಂಬ ಸಂದೇಶದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮೋದಿಗೆ ಹೂವಿನ ಹಾರ ಹಾಕುವ ಸಂದರ್ಭದ ಫೋಟೋದೊಂದಿಗೆ ದಿನ ಪತ್ರಿಕೆಯೊಂದು ‘ಮೋದಿಗೆ ಹಾರ ಹಾಕಲು ಮುಂದಾಗಿದ್ದ ಶಿವರಾಜ್‌ ಅನ್ನು ತಡೆದ ಅಮಿತ್‌ ಶಾ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.

ಆ ವರದಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ನಡೆದ ಘಟನೆಯಾಗಿದ್ದು, ಇತ್ತೀಚೆಗೆ ನಡೆದ ಮಧ್ಯಪ್ರದೇಶ ಚುನಾವಣೆಯಲಿ ಬಿಜೆಪಿ ಸೋತ ಬಳಿಕ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಬಿಜೆಪಿ ಹೈಕಮಾಂಡ್‌ ದೂರವಿಡುತ್ತಿದೆ ಎಂದು ಹೇಳಲಾಗಿದೆ.

ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ‘ಗುಡ್‌ ಈವ್ನಿಂಗ್‌’ ಎಂಬ ದಿನಪತ್ರಿಕೆಯ ವರದಿಯನ್ನು ಪೋಸ್ಟ್‌ ಮಾಡಲಾಗಿದೆ. ಈ ಸುದ್ದಿ ನಿಜವೇ ಎಂದು ಪ್ರತಿಕೆಯ ವರದಿಯಲ್ಲಿರುವಂತೆ ಜನವರಿ 11 ಮತ್ತು 12ರಂದು ನಡೆದ ಬಿಜೆಪಿ ರಾಷ್ಟ್ರೀಯ ಸಮಾವೇಶದ ಮೂಲ ವಿಡಿಯೋವನ್ನು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ವಿಡಿಯೋದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ಅಮಿತ್‌ ಶಾ, ಜೇಟ್ಲಿ, ನಿತಿನ್‌ ಗಡ್ಕರಿ ಮತ್ತು ಶಿವರಾಜ್‌ ಸಿಂಗ್‌ ಚೌಹಾಣ್‌ ಸೇರಿದಂತೆ ಹಲವರು ಹಾರ ಹಾಕಲು ಮುಂದಾಗಿದ್ದಾರೆ. ಹಲವರು ಒಟ್ಟಿಗೇ ನಿಂತಿದ್ದರಿಂದ ಶಿವರಾಜ್‌ ಅವರನ್ನು ಅಮಿತ್‌ ಶಾ ತಡೆಯುತ್ತಿರುವಂತೆ ಭಾಸವಾಗುತ್ತದೆ ಅಷ್ಟೆ. ವಾಸ್ತವವಾಗಿ ಆ ವೇಳೆ ಅಮಿತ್‌ ಶಾ ಇನ್ನೊಬ್ಬ ವ್ಯಕ್ತಿಯನ್ನು ಮುಂದೆ ಬರುವಂತೆ ಕರೆದಿದ್ದನ್ನು ತಪ್ಪಾಗಿ ಅರ್ಥೈಸಿ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡಲಾಗಿದೆ.

click me!