ವೈರಲ್ ಚೆಕ್: ಎಚ್‌ಎಎಲ್‌ ಮುಖ್ಯಸ್ಥರಾಗಿ ಖ್ಯಾತ ನಟ ಮಾಧವನ್‌ ನೇಮಕ?

By Web DeskFirst Published Sep 3, 2018, 10:55 AM IST
Highlights

ಸರಕಾರಿದ ಸ್ವಾಮ್ಯದ ಪ್ರತಿಷ್ಠಿತ ಕಂಪನಿ ಎಚ್ಎಎಲ್‌ನ ಮುಖ್ಯಸ್ಥರಾಗಿ ಖ್ಯಾತ ನಟ ಮಾಧವನ್ ನೇಮಕವಾಗಿದ್ದಾರೆಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು? ವೈರಲ್ ಆಗಿರೋ ಸುದ್ದಿಯ ರಿಯಾಲಿಟಿ ಚೆಕ್ ಇದು.

ಬೆಂಗಳೂರಿನಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಕಂಪನಿ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌)ಗೆ ಖ್ಯಾತ ಬಹುಭಾಷಾ ಚಿತ್ರನಟ ಆರ್‌.ಮಾಧವನ್‌ ನೇಮಕಗೊಂಡಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ವಿಮಾನ, ಹೆಲಿಕಾಪ್ಟರ್‌ ಹಾಗೂ ರಕ್ಷಣಾ ಇಲಾಖೆಗೆ ಬೇಕಾಗುವ ಸಾಮಗ್ರಿಗಳನ್ನು ತಯಾರಿಸುವ ಎಚ್‌ಎಎಲ್‌ಗೆ ಚಿತ್ರನಟನನ್ನು ಚೇರ್ಮನ್‌ ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್‌ (ಸಿಎಂಡಿ) ಆಗಿ ಮೋದಿ ಸರ್ಕಾರ ಏಕೆ ನೇಮಿಸಿದೆ ಎಂದು ಟ್ವೀಟರ್‌, ಫೇಸ್‌ಬುಕ್‌ನಲ್ಲಿ ಕೆಲವರು ತರಾಟೆ ತೆಗೆದುಕೊಂಡಿದ್ದಾರೆ. ಮಾಧವನ್‌ ಅವರನ್ನು ನೇಮಕ ಮಾಡಿರುವ ಸುದ್ದಿಯನ್ನು ಗಲ್ಫ್ ಟುಡೇಯಂತಹ ವಿದೇಶಿ ಪತ್ರಿಕೆಗಳು ಕೂಡ ವರದಿ ಮಾಡಿವೆ.

ವಾಸ್ತವವಾಗಿ ಇದು ಕೇರಳದ ಅತಿದೊಡ್ಡ ಪತ್ರಿಕಾ ಸಮೂಹ ‘ಮಾತೃಭೂಮಿ’ಗೆ ಸೇರಿದ ಇಂಗ್ಲಿಷ್‌ ವೆಬ್‌ಸೈಟ್‌ ಮಾಡಿದ ಎಡವಟ್ಟು. ಎಚ್‌ಎಎಲ್‌ಗೆ ಆರ್‌.ಮಾಧವನ್‌ರನ್ನು ಸಿಎಂಡಿ ಆಗಿ ನೇಮಕ ಮಾಡಿರುವುದು ನಿಜ. ಆದರೆ ಅವರು ಸಿನಿಮಾ ನಟ ಮಾಧವನ್‌ ಅಲ್ಲ. ಬದಲಿಗೆ ಎಚ್‌ಎಎಲ್‌ನಲ್ಲೇ ಇದ್ದ ಹಿರಿಯ ಅಧಿಕಾರಿ. ಅವರ ಇನಿಶಿಯಲ್‌ ಕೂಡ ಆರ್‌ ಎಂದಿರುವುದರಿಂದ ಮಾತೃಭೂಮಿ ವೆಬ್‌ಸೈಟ್‌ ಗೊಂದಲ ಮಾಡಿಕೊಂಡು ಸಿನಿಮಾ ನಟ ಆರ್‌.ಮಾಧವನ್‌ರನ್ನು ನೇಮಕ ಮಾಡಲಾಗಿದೆ ಎಂದು ಸುದ್ದಿ ಪ್ರಕಟಿಸಿತ್ತು. ಅದು ಎಲ್ಲೆಡೆ ವೈರಲ್‌ ಆಗಿದೆ. ಹೀಗಾಗಿ ಎಚ್‌ಎಎಲ್‌ ಸಿಎಂಡಿಯಾಗಿ ಸಿನಿಮಾ ನಟ ಮಾಧವನ್‌ ನೇಮಕವಾಗಿದ್ದಾರೆಂಬುದು ಸುಳ್ಳು ಸುದ್ದಿಯಷ್ಟೆ.

ಮತ್ತಷ್ಟು ವೈರಲ್ ಚೆಕ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

click me!