ಪತ್ರಿಕೋದ್ಯಮದ ವಿರುದ್ಧ ಕಮ್ಯುನಿಸ್ಟ್ ದಾಳಿ..! ಸಚಿವರ ಬಣ್ಣ ಬಯಲು ಮಾಡಿದ್ದಕ್ಕೆ ಒತ್ತುವರಿ ಆರೋಪ..!

By Suvarna Web deskFirst Published Nov 25, 2017, 9:14 PM IST
Highlights

ರಾಜೀವ್ ಚಂದ್ರಶೇಖರ್ ಅವರಿಗೆ ಹೋರಾಟ ಹೊಸದಲ್ಲ. ಬೆದರಿಕೆಗಳು ಹೊಸದಲ್ಲ. ಆರೋಪಗಳೂಹೊಸದಲ್ಲ. ಏಕೆಂದರೆ, ಹೋರಾಟ ಅವರ ರಕ್ತದಲ್ಲೇ ಇದೆ. ಈ ಹಿಂದೆಯೂ ಇಂಥ ಆರೋಪಗಳು ಎದುರಾದಾಗಲೆಲ್ಲ, ಅವರು ಗೆದ್ದು ಬಂದಿದ್ದಾರೆ. ವಾಮ ಮಾರ್ಗದಲ್ಲಿ ಅಲ್ಲ. ಕಾನೂನಿನ ಮಾರ್ಗದಲ್ಲಿ.

ನೀವು.. ಅಕ್ರಮದ ವಿರುದ್ಧ.. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡ್ತೀರಾ..? ಹಾಗಾದರೆ, ನಮ್ಮ ಬಳಿ ಸರ್ಕಾರ ಇದೆ. ಅಧಿಕಾರ ಇದೆ. ನಾವು ಕೊಡೋ ಏಟು ತಿನ್ನೋಕೆ ರೆಡಿಯಾಗಿ. ಇಂಥಾದ್ದೊಂದು ಸಂದೇಶ ಕೊಟ್ಟಿರೋದು ಕೇರಳದ ಸಿಪಿಎಂ ಸರ್ಕಾರ.

ಎಡಪಕ್ಷದ ಸರ್ಕಾರ, ಅಂಥಾದ್ದೊಂದು ಸಂದೇಶ ಕೊಟ್ಟಿರೋದು ಉದ್ಯಮಿ ಹಾಗೂ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ವಿರುದ್ಧ. ಎಷ್ಟರ ಮಟ್ಟಿಗೆ ಅಂದ್ರೆ, ಅವರ ಒಡೆತನದ ರೆಸಾರ್ಟ್ ಮೇಲೆ ಸಿಪಿಎಂ ಕಾರ್ಯಕರ್ತರು ನುಗ್ಗಿ ದಾಂಧಲೆಯನ್ನೇ ನಡೆಸಿಬಿಟ್ಟಿದ್ದಾರೆ.

Latest Videos

ಕಮ್ಯುನಿಸ್ಟರು ಕನಲಿದ್ದಾರೆ
ಕಮ್ಯುನಿಸ್ಟರೇ ಹಾಗೇನೋ.. ಮುಖವಾಡ ಕಳಚಿದರೆ ಕನಲಿಬಿಡ್ತಾರೆ. ಕೇರಳದಲ್ಲಿ ನೇರ..ದಿಟ್ಟ..ನಿರಂತರ.. ಪತ್ರಿಕೋದ್ಯಮದ ವಿರುದ್ಧ ದಾಳಿ ಮಾಡಿದ್ದ ಕಮ್ಯುನಿಸ್ಟರು, ಈಗ ಸಂಸದರ ಉದ್ಯಮದ ವಿರುದ್ಧ ದಾಳಿ ಮಾಡಿದ್ದಾರೆ. ಸರ್ಕಾರದ ಸಚಿವರ ಬಣ್ಣ ಬಯಲು ಮಾಡಿದ್ದಕ್ಕೆ, ಸಂಸದರ ವಿರುದ್ಧವೇ ಒತ್ತುವರಿ ಆರೋಪ ಹೊರಿಸಿದ್ದಾರೆ.

ಕಮ್ಯುನಿಸ್ಟರು ಕನಲಿದ್ದು ಏಕೆ..?

ಅದು ಇಂದು ನಿನ್ನೆಯ ಕಥೆಯಲ್ಲ. ನಿಮಗೆ ಗೊತ್ತಿರಲಿ.. ಆ ಸರ್ಕಾರ ಅಧಿಕಾರಕ್ಕೆ ಬಂದು ಆಗಿರೋದು ಎರಡು ವರ್ಷ. ಆ ಎರಡು ವರ್ಷಗಳಲ್ಲಿ ಆ ಸರ್ಕಾರದ ಮೂವರು ಸಚಿವರು ರಾಜೀನಾಮೆ ಕೊಟ್ಟಿದ್ದಾರೆ. ಕೇರಳದಲ್ಲಿ ಪಿಣರಾಯಿ ವಿಜಯನ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವೂ ಆಗಿಲ್ಲ. ಈ ಎರಡು ವರ್ಷಗಳಲ್ಲೇ ಆ ಸರ್ಕಾರದ ಮೂವರು ಸಚಿವರು ರಾಜೀನಾಮೆ ಕೊಟ್ಟಿದ್ದಾರೆ. ವಿಶೇಷ ಅಂದ್ರೆ, ಈ ರಾಜೀನಾಮೆಯ ಹಿಂದಿರೋದು ಸಂಸದ ರಾಜೀವ್ ಚಂದ್ರಶೇಖರ್ ಅವರ ಹೋರಾಟ. ಅದೇ ಕಾರಣಕ್ಕಾಗಿ ರಾಜೀವ್ ಚಂದ್ರಶೇಖರ್ ಅವರ ಮೇಲೆ ಇಂಥಾ ದಾಳಿ ನಡೆಯುತ್ತಿದೆ.

ಸಂಸದರ ನಿರಾಮಾಯ ರೆಸಾರ್ಟ್ ಪುಡಿ ಮಾಡಿದ ಸಿಪಿಎಂ ಗೂಂಡಾಗಳು

 ಕೇರಳದ ಕುಮಾರಕೊಂನಲ್ಲಿರೋ ರೆಸಾರ್ಟ್. ಈ ರೆಸಾರ್ಟ್ ಕೇರಳಕ್ಕೊಂದು ಕಿರೀಟವಿದ್ದಂತೆ ಇತ್ತು. ಆ ರೆಸಾರ್ಟ್​ನ್ನು ಸಿಪಿಎಂ ಗೂಂಡಾಗಳು ಮನಬಂದಂತೆ ಚಚ್ಚಿ ಪುಡಿ ಪುಡಿ ಮಾಡಿಬಿಟ್ಟಿದ್ದಾರೆ. ಇದೆಲ್ಲದಕ್ಕೂ ಕಾರಣವೇನು ಗೊತ್ತಾ..?ಈ ನಿರಾಮಾಯ ರೆಸಾರ್ಟ್​ನ ಮಾಲೀಕರಲ್ಲಿ ಒಬ್ಬರು ರಾಜೀವ್ ಚಂದ್ರಶೇಖರ್. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸದ. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ನಾಯಕ. ಮೂಲತಃ ಕೇರಳದವರು.
ರಾಜೀವ್ ಚಂದ್ರಶೇಖರ್​ಗೆ ರಾಜಕೀಯ ಅನಿವಾರ್ಯವೇನೂ ಅಲ್ಲ. ಆಸಕ್ತಿ. ಸೈನಿಕರ ಬಗ್ಗೆ, ಸೈನ್ಯದ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡಿರುವ ರಾಜೀವ್ ಚಂದ್ರಶೇಖರ್, ಬೆಂಗಳೂರಿನಲ್ಲೂ ಕೂಡಾ ಒತ್ತುವರಿ ವಿರುದ್ಧ ಹೋರಾಟ ಮಾಡಿರುವ ಹೋರಾಟಗಾರ.  ಅಂಥದ್ದೆ ಹೋರಾಟವನ್ನು ಕೇರಳದಲ್ಲೂ ಚಾಲ್ತಿಯಲ್ಲಿಟ್ಟಿದ್ದಾರೆ.

ಕೇರಳದಲ್ಲಿ ಮನಸೋ ಇಚ್ಛೆ ನಡೆಯುತ್ತಿರುವ ಅಕ್ರಮ ಭೂಒತ್ತುವರಿ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಪ್ರತಿಯೊಂದು ಹೋರಾಟವೂ ಕಾನೂನಿನ ಹೋರಾಟವೇ. ಹೀಗೆ ಸದಾ ತಮ್ಮ ಸರ್ಕಾರದ ಅಕ್ರಮಗಳಿಗೆ, ಒತ್ತುವರಿಗಳಿಗೆ ತೊಂದರೆ ಕೊಡುತ್ತಿರುವ ರಾಜೀವ್ ಚಂದ್ರಶೇಖರ್​ರನ್ನು ಮೌನವಾಗಿಸುವ, ಬೆದರಿಸುವ ತಂತ್ರವೊಂದು ನಿರಂತರವಾಗಿ ನಡೆಯುತ್ತಿದೆ.  ಅದೇ ಕಾರಣಕ್ಕಾಗಿ ಅವರ ಒಡೆತನದ ರೆಸಾರ್ಟ್ ಮೇಲೆ ಸಿಪಿಎಂ ಗೂಂಡಾಗಳು ದಾಳಿ ಮಾಡಿದ್ದಾರೆ.

ಹೋರಾಟ ಮಾಡಿದ್ದಕ್ಕೆ ಅಪಪ್ರಚಾರ, ಸರ್ಕಾರದ ಬ್ಲಾಕ್​ಮೇಲ್ ಪಾಲಿಟಿಕ್ಸ್

ಈ ಹಿಂದೆಯೂ ಅವರಿಗೆ ಇಂಥ ಅನುಭವಗಳಾಗಿವೆ. ಉದ್ಯಮಿ ಹಾಗೂ ರಾಜಕಾರಣಿ ಎರಡೂ ಆಗಿರುವ ರಾಜೀವ್ ಚಂದ್ರಶೇಖರ್, ಪ್ರತಿಬಾರಿಯೂ ಹಿಡಿದಿರುವುದು ಕಾನೂನಿನ ಹೋರಾಟದ ಮಾರ್ಗ. ಪ್ರತಿಬಾರಿಯೂ ಅವರು ಗೆದ್ದಿದ್ದಾರೆ ಅನ್ನೋದು ವಿಶೇಷ.  20 ಡಿವೈಎಫ್​ಐ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿದ ಕೇರಳ ಸರ್ಕಾರ, ಎಲ್ಲರಿಗೂ ಜಾಮೀನು ಕೊಟ್ಟು ಕಳಿಸಿತು. ವಿಚಿತ್ರ ಅಂದರೆ ಇಡೀ ಪ್ರಕರಣದಲ್ಲಿ ಬಯಲಾಗಿರೋದು ಕೇರಳ ಸರ್ಕಾರದ ಬ್ಲಾಕ್​ಮೇಲ್ ಪಾಲಿಟಿಕ್ಸ್. ಈ ನಿರಾಮಯ  ರೆಸಾರ್ಟ್​ ನಿರ್ಮಾಣವಾಗಿದ್ದು 2013ರಲ್ಲಿ.

ಅದು ಸುಮಾರು 320 ಕೋಟಿಯ ಹೂಡಿಕೆ. ಆರೋಪ ಬಂದಿದ್ದು 2014ರಲ್ಲಿ. ಸರ್ವೆ ಮಾಡಿ, ಇವರೂ ಉತ್ತರ ಕೊಟ್ಟ ಮೇಲೆ ಸುಮ್ಮನಿದ್ದ ಕೇರಳ ಸರ್ಕಾರ, ದಿಢೀರನೆ ಈ ದಾಳಿ ನಡೆಸಿದ್ದು ಈಗ. ಕೇರಳದಲ್ಲಿನ ಕಮ್ಯುನಿಸ್ಟರು ಈಗಲ್ಲ. ಹಿಂದಿನಿಂದಲೂ ಹಾಗೇ. ಸುಮಾರು ವರ್ಷಗಳ ಕಾಲ ಅಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರ. ಹೊರಜಗತ್ತಿಗೆ ಗೊತ್ತೇ ಇರಲಿಲ್ಲ ಎಂದರೆ, ಅರ್ಥ ಮಾಡಿಕೊಳ್ಳಿ. ಈಗ.. ಅವರ ವಿರುದ್ಧ ಧ್ವನಿ ಎತ್ತುವವರ ಧ್ವನಿಯನ್ನೇ ಕಿತ್ತುಕೊಳ್ಳೋ ಹುನ್ನಾರ ನಡೀತಾ ಇದೆ.

ಹಾಗಾದರೆ, ರಾಜೀವ್ ಚಂದ್ರಶೇಖರ್ ಒಡೆತನದ ರೆಸಾರ್ಟ್​ಗೆ ನುಗ್ಗಿ ದಾಂಧಲೆ ನಡೆಸುತ್ತಿರುವ ಸಿಪಿಎಂ ಮಾಡುತ್ತಿರುವ ಆರೋಪ ಏನು..? ನಿಜವಾದ ಕಥೆ ಏನು..? ತೆರೆಯ ಹಿಂದೆ ನಡೆಯುತ್ತಿರುವುದು ಏನು..? ಒಂದೊಂದೂ ರೋಚಕವಾಗಿಯೇ ಕಾಣುತ್ತಿದೆ. ಏಕೆಂದರೆ, ಕಮ್ಯುನಿಸ್ಟರ ಮುಖವಾಡ ಕಳಚುತ್ತಿದೆ. ಅವರು ಕನಲುತ್ತಿದ್ದಾರೆ.

ಒತ್ತುವರಿ ಎನ್ನುತ್ತಿರುವ ಭೂಮಿ ಎಷ್ಟು ಗೊತ್ತಾ..?  

ನಿಮಗೆ ಸರಳವಾಗಿ ಅರ್ಥವಾಗಬೇಕೆಂದರೆ, ಅದು 30*40 ಸೈಟಿಗಿಂತ ಸ್ವಲ್ಪ ಹೆಚ್ಚಿರಬಹುದೇನೋ. ಆದರೆ, 0.00.44 ಚ. ಮೀ ಹಾಗೂ 0.0.50 ಚ.ಮೀ. ಒತ್ತುವರಿ ಆರೋಪ..! ಸಮಸ್ಯೆಯಾಗಿರುವುದೇ ಇಲ್ಲಿ. ಏಕೆಂದರೆ, ಆ ಜಮೀನಿನ ಸರ್ವೆ ಮಾಡಿ ಜಮೀನು ಕೊಟ್ಟಿರುವುದು ಕೇರಳ ಸರ್ಕಾರ.ಎಲ್ಲವೂ ಕಾನೂನುಬದ್ಧವಾಗಿದೆ ಎಂದು ಅನುಮತಿ ಕೊಟ್ಟಿರುವ ಸರ್ಕಾರವೇ, ಈಗ ಒತ್ತುವರಿ ಮಾಡಿದ್ದೀರಿ ಎಂದು ನೋಟಿಸ್ ಕೊಟ್ಟಿದೆ.

ಹಾಗೆಂದು ಇಲ್ಲಿ ರಾಜೀವ್ ಚಂದ್ರಶೇಖರ್ ಆರೋಪದಿಂದ ಓಡಿ ಹೋಗಿಲ್ಲ. ಕಾನೂನಿನ ಪ್ರಕಾರ ನಾವು ಸರಿಯಾಗಿದ್ದೇವೆ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಕಾನೂನಿನ ಹೋರಾಟ ಬಿಟ್ಟಿರುವ ಸರ್ಕಾರ, ಹಿಡಿದಿರುವುದು ಬೆದರಿಸುವ ಈ ದಾರಿಯನ್ನ. ರೆಸಾರ್ಟ್​ಗೆ ನುಗ್ಗಿ ದಾಂಧಲೆ ನಡೆಸಿ ಬೆದರಿಸುವ ಹಾದಿಯನ್ನು ಹಿಡಿದಿದ್ದಾರೆ.

ದಾಳಿ ಮಾಡಿದ ಪುಂಡರಿಗೆ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಜಾಮೀನು!  

ವಿಶೇಷವೆಂದರೆ, ಹೀಗೆ ದಾಳಿ ಮಾಡಿದವರಲ್ಲಿ ಒಬ್ಬರನ್ನೂ ಬಂಧಿಸಿಲ್ಲ. ಎಫ್​ಐಆರ್ ದಾಖಲಿಸಿದ ಕೇವಲ 2 ಗಂಟೆಗಳಲ್ಲಿ, ವಿಚಾರಣೆಯನ್ನೂ ನಡೆಸದೆ ಎಲ್ಲರಿಗೂ ಜಾಮೀನು ಕೊಟ್ಟು ಕಳುಹಿಸಲಾಗಿದೆ. ರಾಜೀವ್ ಚಂದ್ರಶೇಖರ್ ಪ್ರಶ್ನಿಸುತ್ತಿರುವುದೇ  ರೀತಿಯ ನಿಲುವುಗಳನ್ನು.

‘‘ಬಗ್ಗುವುದಿಲ್ಲ, ಬೆದರುವುದಿಲ್ಲ, ಹೋರಾಟ ನಿಲ್ಲುವುದಿಲ್ಲ ಎನ್ನುತ್ತಾರೆ ಸಂಸದರು

ರಾಜೀವ್ ಚಂದ್ರಶೇಖರ್ ಅವರಿಗೆ ಹೋರಾಟ ಹೊಸದಲ್ಲ. ಬೆದರಿಕೆಗಳು ಹೊಸದಲ್ಲ. ಆರೋಪಗಳೂ ಹೊಸದಲ್ಲ. ಏಕೆಂದರೆ, ಹೋರಾಟ ಅವರ ರಕ್ತದಲ್ಲೇ ಇದೆ. ಈ ಹಿಂದೆಯೂ ಇಂಥ ಆರೋಪಗಳು ಎದುರಾದಾಗಲೆಲ್ಲ, ಅವರು ಗೆದ್ದು ಬಂದಿದ್ದಾರೆ. ವಾಮ ಮಾರ್ಗದಲ್ಲಿ ಅಲ್ಲ. ಕಾನೂನಿನ ಮಾರ್ಗದಲ್ಲಿ.  ಈಗಲೂ ಅವರ ಕಾನೂನು ಹೋರಾಟ ಶುರುವಾಗಿದೆ. ಅವರ ಪ್ರಶ್ನೆಯೇ ಅದು. ಇಡೀ ದೇಶಕ್ಕೆ ಅನ್ವಯವಾಗುವ ಕಾನೂನು, ಕೇರಳದಲ್ಲೂ ಅನ್ವಯವಾಗಬೇಕು. ಎರಡೆರಡು ಕಾನೂನು ಇರಬಾರದು. ನಾನು ಕಾನೂನು ಗೌರವಿಸುತ್ತೇನೆ. ನೀವು ಕಾನೂನಿನ ಹೋರಾಟಕ್ಕೆ ಬನ್ನಿ ಎನ್ನುತ್ತಿದ್ದಾರೆ.

ಪಿಣರಾಯಿ ವಿಜಯನ್ ನೇತೃತ್ವದ ಎಡರಂಗದ ಸರ್ಕಾರ, ಕಳೆದ 15 ತಿಂಗಳಿಂದ ಪದೇ ಪದೇ ಅವಮಾನ ಅನುಭವಿಸುತ್ತಿದೆ. ವಿವಿಧ ಪ್ರಕರಣಗಳಲ್ಲಿ ಮೂವರು ಸಚಿವರು ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ಇವರ ವಿರುದ್ಧ ಧ್ವನಿಯೆತ್ತುತ್ತಿರುವವರನ್ನೆಲ್ಲ ತುಳಿಯುವ ಕೆಲಸಕ್ಕೆ ಕೈ ಹಾಕಿದೆ. ಇಂಥ ಹಿಂಸಾ ರಾಜಕಾರಣ, ನಿರಂತರವಾಗಿ ನಡೆಯುತ್ತಿದೆ. ಯಾವಾಗ ನಾನು ಬಗ್ಗಲಿಲ್ಲವೋ. ಅವರು ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ಮಾಡಿದರು. ನಂತರ, ನನ್ನ ಮಾಲೀಕತ್ವದ ಸುದ್ದಿ ಸಂಸ್ಥೆಯ ಮೇಲೆ ದಾಳಿ ಮಾಡಿದರು. ಅವರ ಈ ದುಷ್ಟತನಕ್ಕೆ ಈಗ ಸಿಪಿಎಂನ ಡಿವೈಎಫ್​ಐ ದಾಳಿ ಇನ್ನೊಂದು ಸಾಕ್ಷಿ.

- ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯರು

ಇದೇ ಮೊದಲಲ್ಲ, ಆದರೂ ಸಂಸದರು ಸೋತಿಲ್ಲ

ಇಂಥ ಆರೋಪಗಳು, ಬೆದರಿಕೆಗಳು ಹೊಸದೇನೂ ಅಲ್ಲ. ಕೇರಳ ಸರ್ಕಾರದ ಇಂಥ ಭ್ರಷ್ಟಾಚಾರದ ವಿರುದ್ಧ ವರದಿ ಮಾಡಿದ್ದಕ್ಕಾಗಿ, ಕೇರಳದ ನಿರ್ಭೀತ ಮಾಧ್ಯಮ, ನಂಬರ್ ಒನ್ ನ್ಯೂಸ್ ಚಾನೆಲ್ ಏಷ್ಯಾನೆಟ್​  ಸಂಸ್ಥೆಯ ಮೇಲೂ ದಾಳಿ ಮಾಡಲಾಗಿತ್ತು. ಇವರು ಸೋಲಲಿಲ್ಲ. ನಂತರ, ರಾಜೀವ್ ಚಂದ್ರಶೇಖರ್ ಅವರ ಒಡೆತನದ ಉದ್ಯಮಗಳನ್ನು ಟಾರ್ಗೆಟ್ ಮಾಡಲಾಯ್ತು. ಆಗಲೂ ಇವರು ಗೆದ್ದರು. ಈಗ ನಡೆದಿರುವುದು 3ನೇ ದಾಳಿ. ಸಿಪಿಎಂ ತನ್ನ ಪಕ್ಷದ ಯುವ ಸಂಘಟನೆ ಡಿವೈಎಫ್​ಐ ಮೂಲಕ ನಡೆದಿರುವ ದಾಳಿ.

ಅಂದಹಾಗೆ ಈ ನಿರಾಮಾಯ ಗ್ರೂಪ್​ನಲ್ಲಿ ಇವರ ಪತ್ನಿ ಅಂಜು ಒಬ್ಬರು ನಿರ್ದೇಶಕಿ. ಜ್ಯುಪಿಟರ್ ಗ್ರೂಪ್ ಹೂಡಿಕೆ ಮಾಡಿರುವ ಸಂಸ್ಥೆ ಈ ನಿರಾಮಾಯ. ಈ ಹಿಂದೆ ಇದೇ ರಾಜೀವ್ ಚಂದ್ರಶೇಖರ್, ನಿವೃತ್ತ ಸೈನಿಕರಿಗಾಗಿ ಒನ್ ರಾಂಕ್ ಒನ್ ಪೆನ್ಷನ್ ಯೋಜನೆಗಾಗಿ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು. ಆಗ ಅವರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ವ್ಯವಹಾರದ ಆರೋಪ ಕೇಳಿಬಂದಿತ್ತು. ಅದನ್ನು ಕಾನೂನಿನ ಮೂಲಕವೇ ಎದುರಿಸಿದ್ದ ರಾಜೀವ್ ಚಂದ್ರಶೇಖರ್, ಸುಪ್ರೀಂಕೋರ್ಟ್​ನಲ್ಲಿ ಗೆದ್ದಿದ್ದರು.

ಎಲ್ಲದಕ್ಕೂ ಕಾನೂನು ಮೂಲಕ ಹೋರಾಟ

ಇನ್ನು ಬೆಂಗಳೂರಿನಲ್ಲಿ ಇಂದಿರಾ ರಾಷ್ಟ್ರೀಯ ಯುದ್ಧ ಸ್ಮಾರಕ ವಿಚಾರದಲ್ಲೂ ಹೀಗೆಯೇ ಆಗಿತ್ತು. ಮೊದಲು ಅಲ್ಲಿ ಮರ ಕಡಿಯುತ್ತಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ನಂತರ, ಇಡೀ ಜಾಗವನ್ನೇ ಸ್ವಂತ ಮಾಡಿಕೊಳ್ಳಲು ಹುನ್ನಾರ ನಡೆಸಿದ್ದಾರೆ ಎನ್ನಲಾಗಿತ್ತು. ಎರಡನ್ನೂ ನ್ಯಾಯಾಲಯದಲ್ಲೇ ಗೆದ್ದರು ರಾಜೀವ್ ಚಂದ್ರಶೇಖರ್. ಯಾವ ಆರೋಪಗಳಿಗೂ ತಲೆಬುಡ ಇರಲಿಲ್ಲ. ಅಷ್ಟೇ ಅಲ್ಲ, ಸೈನಿಕರಿಗೆ ಸರ್ಕಾರದಿಂದ ಕೊಡಿಸಬೇಕಾದ ಸೌಲಭ್ಯಗಳ ವಿಚಾರದಲ್ಲಿ ಇಂದಿಗೂ ದೊಡ್ಡದಾಗಿ ಧ್ವನಿಯೆತ್ತುವ ನಾಯಕ ರಾಜೀವ್ ಚಂದ್ರಶೇಖರ್. ಕಾರ್ಗಿಲ್ ಹುತಾತ್ಮ ಸೌರಭ್ ಕಾಲಿಯಾ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ದಿದ್ದವರಲ್ಲಿ ರಾಜೀವ್ ಚಂದ್ರಶೇಖರ್ ಪ್ರಮುಖರು.

ಇನ್ನು ಬೆಂಗಳೂರಿನಲ್ಲಿ ಚಾಲುಕ್ಯ ಸರ್ಕಲ್​ನಿಂದ, ಹೆಬ್ಬಾಳದವರೆಗೆ ಸ್ಟೀಲ್ ಫ್ಲೈ ಓವರ್ ನಿರ್ಮಿಸುವ ಸರ್ಕಾರದ ವಿರುದ್ಧ ಜನಾಭಿಯಾನವನ್ನೇ ನಡೆಸಿದವರು ರಾಜೀವ್ ಚಂದ್ರಶೇಖರ್. ಭಾರಿ ಜನಬೆಂಬಲದ ಜೊತೆಗೆ ಆಗಲೂ ಅವರು ಗೆದ್ದಿದ್ದು ಕಾನೂನು ಹೋರಾಟದ ಮೂಲಕವೇ.

ಬೆಂಗಳೂರಿನಲ್ಲಿ ಕೆರೆ ಒತ್ತುವರಿ ವಿರುದ್ಧ ಕರ್ನಾಟಕ ಸರ್ಕಾರವನ್ನೇ ಎದುರು ಹಾಕಿಕೊಂಡು ಸುಪ್ರೀಂಕೋರ್ಟ್​ನಲ್ಲಿ ಗೆದ್ದವರು ರಾಜೀವ್ ಚಂದ್ರಶೇಖರ್. ಇಲ್ಲದೇ ಹೋಗಿದ್ದರೆ, ಬೆಂಗಳೂರಿನಲ್ಲಿ ಇನ್ನೆಷ್ಟು ಕೆರೆಗಳು ಮುಳುಗುತ್ತಿದ್ದವೋ. ಹೀಗೆ ಒತ್ತುವರಿ ವಿರುದ್ಧ ಅವರ ಹೋರಾಟ ಕರ್ನಾಟಕಕ್ಕಷ್ಟೇ ಸೀಮಿತವಲ್ಲ. ಕೇರಳದಲ್ಲೂ ಇದೇ ರೀತಿಯ ಹೋರಾಟ ನಡೆಯುತ್ತಲೇ ಇದೆ. ಹೀಗಿರುವಾಗ,  ಅವರ ವಿರುದ್ಧವೇ ಕೇರಳ ಇಂಥಾ ಬೆದರಿಕೆಯ ಹೋರಾಟಕ್ಕಿಳಿದಿದೆ.

ನೋಟಿಸ್ ಕೊಟ್ಟು, ಉತ್ತರವನ್ನೂ ಕೊಡಲು ಅವಕಾಶ ಕೊಡದ ಸರ್ಕಾರ, ತನ್ನ ಪಕ್ಷದ ಯುವ ಕಾರ್ಯಕರ್ತರಿಂದ ರೆಸಾರ್ಟ್​ನಲ್ಲಿ ದಾಂಧಲೆ ನಡೆಸಿದೆ. ಇದಕ್ಕೆಲ್ಲ ಬಗ್ಗುವುದಿಲ್ಲ ಎನ್ನುತ್ತಿರುವ ರಾಜೀವ್ ಚಂದ್ರಶೇಖರ್, ಪಿಣರಾಯಿ ವಿಜಯ್ ಅವರಿಗೆ ಕಿವಿಮಾತನ್ನೂ ಹೇಳಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರವನ್ನು ನಿಲ್ಲಿಸಬೇಕು. ದಾಳಿ ಮಾಡಿದ ಗೂಂಡಾಗಳನ್ನು ಜೈಲಿಗೆ ಕಳಿಸಬೇಕು. ಅಷ್ಟು ಮಾಡಿದ ನಂತರ ರಾಜೀನಾಮೆ ಕೊಡುತ್ತೇನೆ... ಈಗಲ್ಲ ಎನ್ನುವ ಮೂಲಕ ರಾಜೀವ್ ಚಂದ್ರಶೇಖರ್, ಸವಾಲಿಗೇ ಸವಾಲ್ ಹಾಕಿದ್ದಾರೆ.

ಕೇರಳದಲ್ಲಿನ ಕಮ್ಯುನಿಸ್ಟರು ಈಗಲ್ಲ.. ಹಿಂದಿನಿಂದಲೂ ಹಾಗೇ.. ಸುಮಾರು ವರ್ಷಗಳ ಕಾಲ ಅಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರ.. ಹೊರಜಗತ್ತಿಗೆ ಗೊತ್ತೇ ಇರಲಿಲ್ಲ ಎಂದರೆ, ಅರ್ಥ ಮಾಡಿಕೊಳ್ಳಿ. ಈಗ.. ಅವರ ವಿರುದ್ಧ ಧ್ವನಿ ಎತ್ತುವವರ ಧ್ವನಿಯನ್ನೇ ಕಿತ್ತುಕೊಳ್ಳೋ ಹುನ್ನಾರ ನಡೀತಾ ಇದೆ. ಇದೆಲ್ಲಕ್ಕೂ ಬ್ರೇಕ್ ಹಾಕಲೇಬೇಕಿದೆ.

click me!