
ಬಳ್ಳಾರಿ (ಫೆ.17); ಜೀವ ಉಳಿಸಲು ಇಲ್ಲಿಗೆ ಬಂದವರಿಗೆ ಸಾವಿಗೆ ಆಹ್ವಾನ ಸಿಗುತ್ತೆ. ಒಂಚೂರು ಯಾಮಾರಿದ್ರೆ ನಿಮ್ಮ ಜೀವ ಉಳಿಯೋದು ಗ್ಯಾರಂಟಿಯಿಲ್ಲ. ಜೀವ ಉಳಿಸಿಕೊಳ್ಳಲು ಆಸ್ಪತ್ರೆಗೆ ಬಂದವರು ಆ ದೇವರೆ ಕಾಪಾಡಬೇಕು. ಪದೇ ಪದೇ ಅಗ್ನಿ ಅವಘಡಗಳು, ದುರಂತ ನಡೆಯುತ್ತಿದೆ. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯ ಹಳೆಯ ಕಟ್ಟಡದ ದುಸ್ಥಿತಿ ಇದು.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ದುಸ್ಥಿತಿ ನೋಡಿದರೆ ಭಯವಾಗುತ್ತದೆ. ಜೀವ ಉಳಿಸಿ ಎಂದು ಆಸ್ಪತ್ರೆಗೆ ಬಂದ ರೋಗಿಗಳಿಗೆ ಯಮನ ದರ್ಶನ ಆದಂತೆ! ಅಷ್ಟೇ ಯಾಕೆ? ಒಂದು ಜೀವವನ್ನೂ ಈಗಾಗಲೇ ಬಲಿ ಪಡೆದುಕೊಂಡಿದೆ ಈ ಶಿಥಿಲಾವಸ್ಥೆ ಕಟ್ಟಡ!
ಮೇಲ್ಛಾವಣಿ ಕುಸಿದು ಒಂದುವರೆ ವರ್ಷದ ಹಿಂದೆ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಇದರ ಬೆನ್ನಲ್ಲೇ ಕಳೆದೊಂದು ವಾರದಿಂದ ಎರಡೆರಡು ಬಾರಿ ಅಗ್ನಿ ಅವಘಡ ಸಂಭವಿಸಿದೆ. ಆದರೂ ನಿದ್ರಾವಸ್ಥೆಗೆ ಜಾರಿದ ಸರ್ಕಾರ ಎಚ್ಚೆತ್ತುಕೊಳ್ತಿಲ್ಲ.
45 ವರ್ಷದ ಕಟ್ಟಡದ ಮೇಲ್ಛಾವಣಿ ಕುಸಿದು ಆಗಾಗ ಬೀಳುತ್ತಲೇ ಇದೆ. ಹೀಗಾಗೇ ಬಿರುಕು ಬಿಟ್ಟ ಭಾಗದಲ್ಲಿನ ವಾರ್ಡಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಆದರೂ ಶಿಥಿಲ ಕಟ್ಟಡದ ಭಾಗದಿಂದಲೇ ಓಡಾಡಬೇಕು. ಕಟ್ಟಡ ವಾಸಕ್ಕೆ ಯೋಗ್ಯವಲ್ಲವೆಂದು ಲೋಕೋಪಯೋಗಿ ಇಲಾಖೆಯೂ ಶಿಫಾರಸ್ಸು ಮಾಡಿದೆ. ಆದರೂ ಯಾಕೆ ಕಿಲ್ಲರ್ ಕಟ್ಟಡಕ್ಕೆ ಮುಕ್ತಿ ನೀಡುತ್ತಿಲ್ಲ.
ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಹೊತ್ತಾಗ ಸಚಿವ ಸಂತೋಷ್ ಲಾಡ್ ಜಿಲ್ಲೆಯ ಆಸ್ಪತ್ರೆಗಳ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ಹರಿಹಾಯ್ದಿದ್ದರು. ಸಚಿವರೇ ಈ ಕಿಲ್ಲರ್ ಕಟ್ಟಡ ನಿಮ್ಮ ಕಣ್ಣಿಗೆ ಬೀಳಲೇ ಇಲ್ವಾ.. ಒಂದು ಪ್ರಾಣ ಬಲಿ ಪಡೆದರೂ ಕಟ್ಟಡ ನೆಲಸಮಕ್ಕೆ ಸರ್ಕಾರ ಯಾಕೆ ಮನಸ್ಸು ಮಾಡ್ತಿಲ್ಲ? ಜನಪ್ರತಿನಿಧಿಗಳೇ.. ಇನ್ನೆಷ್ಟು ಬಲಿಗಾಗಿ ಕಾಯುತ್ತಿದ್ದೀರಿ..?
ವರದಿ: ಶ್ರೀನಿವಾಸಶೆಟ್ಟಿ, ಸುವರ್ಣನ್ಯೂಸ್ ಬಳ್ಳಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.