
ಮೈಸೂರು : ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಪ್ರಕಟಗೊಳ್ಳುವ ಮುನ್ನವೇ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅಖಾಡ ಸಿದ್ಧಗೊಳಿಸಿಕೊಳ್ಳಲು ಮುಂದಾಗಿದ್ದಾರೆ.
ನಗರದಲ್ಲಿ ದಿನವಿಡೀ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿದ ವಿಜಯೇಂದ್ರ ಅವರು, ಎಲ್ಲರನ್ನೂ ಒಟ್ಟುಗೂಡಿಸಲು ಮುಂದಾದರು. ಏತನ್ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಮುನಿಸಿಕೊಂಡಿದ್ದಾರೆನ್ನಲಾದ ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ವೀರಶೈವ ಮುಖಂಡರಲ್ಲೊಬ್ಬರಾದ ಕಾಂಗ್ರೆಸ್‌ನ ಎಲ್. ರೇವಣಸಿದ್ದಯ್ಯರನ್ನು ನಂಜನಗೂಡು ರಸ್ತೆಯ ಅವರ ತೋಟದ ಮನೆಯಲ್ಲಿ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು.
2008ರಲ್ಲಿ ವರುಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೇವಣಸಿದ್ದಯ್ಯ ನಂತರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಬಿಜೆಪಿಗೆ ಬರುವಂತೆ ವಿಜಯೇಂದ್ರ ಆಹ್ವಾನಿಸಿದರು. ಜತೆಗೆ, ಈ ಬಾರಿ ತಮಗೆ ಬೆಂಬಲ ನೀಡುವಂತೆಯೂ ಮನವಿ ಮಾಡಿದರು.
ಬಳಿಕ ಮಾತನಾಡಿದ ವಿಜಯೇಂದ್ರ, ಹಿರಿಯರಾದ ರೇವಣಸಿದ್ದಯ್ಯ ಆಶೀರ್ವಾದ ಪಡೆಯಲು ಬಂದಿದ್ದೇನೆ. ಒಮ್ಮೆ ಅವರು ವರುಣ ಕ್ಷೇತ್ರದಿಂದ ಸ್ಪರ್ಧಿಸಿದ್ದರಿಂದ ಅವರ ಆಶೀರ್ವಾದ ಪಡೆದಿದ್ದೇನೆ. ಇನ್ನೂ ಟಿಕೆಟ್ ಘೋಷಣೆ ಆಗದಿದ್ದರೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಚುನಾವಣೆ ಮುಗಿಯುವವರೆಗೂ ಇಲ್ಲೇ ಇರುತ್ತೇನೆ ಎಂದರು.
ರೇವಣಸಿದ್ದಯ್ಯ ಮಾತನಾಡಿ, ಬಿಜೆಪಿಗೆ ಸೇರುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈಗಾಗಲೇ ಅನೇಕರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಸಕ್ರಿಯ ರಾಜಕಾರಣದಲ್ಲೇ ಇದ್ದೇನೆ. ಆದರೆ ಬೀದಿ ರಾಜಕೀಯದಿಂದ ದೂರ ಉಳಿದಿದ್ದೇನೆ. ಮುಂದಿನ ದಿನಗಳಲ್ಲಿ ಸಂದರ್ಭಗಳು ಹೇಗೆ ಎದುರಾಗುತ್ತವೆಯೋ ನೋಡೋಣ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸೋಲಿಸಲು ಮುಂದಾಗಿರುವ ವಿಜಯೇಂದ್ರ ಅವರು ಟಿಕೆಟ್ ಘೋಷಣೆಗೂ ಮುನ್ನ ಕ್ಷೇತ್ರದಲ್ಲಿ ಸಂಚರಿಸುತ್ತಿರುವುದು ಸಂಚಲನ ಮೂಡಿಸಿದೆ. ವರುಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಯ ಶೋಧ ನಡೆಯುವಾಗಲೇ ವಿಜಯೇಂದ್ರ ಪ್ರಚಾರದಲ್ಲಿ ತೊಡಗಿರುವುದು ಕಾರ್ಯಕರ್ತರಲ್ಲಿ ಸಂತೋಷ ಮೂಡಿಸಿದೆ.
ಮೊದಲು ನಗರದಲ್ಲಿ ಟಿಕೆಟ್ ಆಕಾಂಕ್ಷಿಗಳ ಜೊತೆ ಮಾತುಕತೆ ನಡೆಸಿದ ಅವರು ಎಲ್ಲರ ಮನವೊಲಿಸಲು ಮುಂದಾದರು. ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಕಾ.ಪು.ಸಿದ್ದಲಿಂಗಸ್ವಾಮಿ, ಬಿ.ಎನ್. ಸದಾನಂದ, ಎ.ಎಂ.ಗುರುಸ್ವಾಮಿ, ಎಸ್.ಡಿ.ಮಹೇಂದ್ರ, ಕೆ.ಎನ್. ಪುಟ್ಟಬುದ್ಧಿ, ಎಸ್.ಸಿ.ಅಶೋಕ್, ಕಾ.ಪು.ಸಿದ್ದವೀರಪ್ಪ ಪಾಲ್ಗೊಂಡಿದ್ದರು. ನಂತರ ಜಿಪಂ ಕ್ಷೇತ್ರದ ಪ್ರಮುಖರೊಡನೆ ಸಭೆ ನಡೆಸಿ, ಪಕ್ಷಕ್ಕೆ ದೊರೆಯಬಹುದಾದ ಜನ ಬೆಂಬಲದ ಮಾಹಿತಿ ಪಡೆದರು. ಬಳಿಕ ವಾಟಾಳು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.