
ಲಂಡನ್(ಏ. 18): ವಿಜಯ್ ಮಲ್ಯರನ್ನು ಭಾರತಕ್ಕೆ ಹಿಡಿದುತರಲಾಗುತ್ತದೆ ಎಂದು ಒಂದು ಗಂಟೆಯಿಂದ ಜಾತಕಪಕ್ಷಿಯಂತೆ ಕಾದುಕುಳಿತಿದ್ದ ಭಾರತೀಯ ಬ್ಯಾಂಕುಗಳಿಗೆ ನಿರಾಶೆಯಾಗಿದೆ. ಕೆಲ ಗಂಟೆಯ ಹಿಂದಷ್ಟೇ ಬಂಧಿತರಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯಗೆ ಲಂಡನ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಮಲ್ಯರನ್ನು ಭಾರತಕ್ಕೆ ಗಡೀಪಾರು ಮಾಡುವ ಪ್ರಯತ್ನಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ.
ಒಂದು ಗಂಟೆ ಹಿಂದಷ್ಟೇ ಸ್ಕಾಟ್'ಲ್ಯಾಂಡ್ ಯಾರ್ಡ್ ಪೊಲೀಸರು ಲಂಡನ್'ನಲ್ಲಿ ಮಲ್ಯರನ್ನು ಬಂಧಿಸಿದ್ದರು. ತರುವಾಯ ಅವರನ್ನು ವೆಸ್ಟ್'ಮಿನ್ಸ್'ಟರ್ ಕೋರ್ಟ್'ಗೆ ಹಾಜರುಪಡಿಸಲಾಯಿತು. ಮಲ್ಯರ ವಕೀಲರು ತತ್'ಕ್ಷಣವೇ ಜಾಮೀನಿಗೆ ಅರ್ಜಿಯನ್ನೂ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ವಿಜಯ್ ಮಲ್ಯರಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿತು. ಕೋರ್ಟ್ ತೀರ್ಪು ಕೊಟ್ಟ ನಂತರ ವಿಜಯ್ ಮಲ್ಯ ಈ ಸಂಬಂಧ ಟ್ವೀಟ್ ಮಾಡಿದ್ದು, ಭಾರತೀಯ ಮಾಧ್ಯಮವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಜಯ್ ಮಲ್ಯ ಅವರು ವಿವಿಧ ಬ್ಯಾಂಕ್'ಗಳಲ್ಲಿ 9 ಸಾವಿರ ಕೋಟಿ ರೂ ಮೊತ್ತದ ಸಾಲ ಮಾಡಿ ಮರುಪಾವತಿ ಮಾಡದೇ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ವಿಜಯ್ ಮಲ್ಯರನ್ನು ಗಡೀಪಾರು ಮಾಡಬೇಕೆಂದು ಭಾರತ ಸರಕಾರವು ಬ್ರಿಟನ್ ಸರಕಾರಕ್ಕೆ ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಲ್ಯರನ್ನು ಬಂಧಿಸಲಾಗಿತ್ತು. ಕೋರ್ಟ್ ವಿಚಾರಣೆ ಬಳಿಕ ಮಲ್ಯರನ್ನು ಬ್ರಿಟನ್'ನಿಂದ ಗಡೀಪಾರು ಮಾಡಿ ಭಾರತಕ್ಕೆ ಒಪ್ಪಿಸುವ ಸಾಧ್ಯತೆ ಇತ್ತು.
ಕಳೆದ ವರ್ಷದಂದು 9 ಸಾವಿರ ಕೋಟಿ ರೂ ವಂಚನೆಯ ಪ್ರಕರಣವನ್ನು ಕೋರ್ಟ್ ಕೈಗೆತ್ತಿಕೊಳ್ಳುವ ಕೆಲ ದಿನಗಳ ಮುನ್ನವೇ ವಿಜಯ್ ಮಲ್ಯ ದೇಶಬಿಟ್ಟು ಹೋಗಿದ್ದರು. ಕೋರ್ಟ್ ವಿಚಾರಣೆಗೆ ಅವರು ಹಾಜರಾಗಲೇ ಇಲ್ಲ. ಕೋರ್ಟ್ ಸೂಚನೆಯನ್ನೂ ಧಿಕ್ಕರಿಸಿ ಅವರು ವಿದೇಶದ ಬ್ಯಾಂಕ್'ಗಳಲ್ಲಿರುವ ತಮ್ಮ ಮಕ್ಕಳ ಖಾತೆಗಳಿಗೆ 40 ಮಿಲಿಯನ್ ಡಾಲರ್ ಹಣವನ್ನು ವರ್ಗಾಯಿಸಿದ್ದರು. ಈ ಸಂಬಂಧ ಮಲ್ಯ ವಿರುದ್ಧ ದೂರು ದಾಖಲಾಗಿದ್ದು, ಕೋರ್ಟ್'ನಲ್ಲಿ ವಿಚಾರಣೆಯೂ ಮುಕ್ತಾಯಗೊಂಡಿದೆ. ಸುಪ್ರೀಮ್ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.