
ನವದೆಹಲಿ : ಮದ್ಯದೊರೆ ವಿಜಯ್ ಮಲ್ಯ ಒಡೆತನದ ಯುನೈಟೆಡ್ ಬ್ರೇವರೀಸ್ ಹೋಲ್ಡಿಂಗ್ ಲಿಮಿಟೆಡ್ (ಯುಬಿಎಚ್ ಎಲ್) ಕಂಪನಿಯ ಒಟ್ಟು 12,203 ಕೋಟಿ ರು. ಮೌಲ್ಯದ ಆಸ್ತಿ ಮಾರಾಟ ಮಾಡಿ, ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಪಡೆದ ಸಾಲವನ್ನು ಬ್ಯಾಂಕ್‌ಗಳಿಗೆ ಮರುಪಾವತಿಸಲು ಸಿದ್ಧವಿರುವುದಾಗಿ ಯುಬಿಎಚ್ ಎಲ್ ಹೈಕೋರ್ಟ್‌ಗೆ ತಿಳಿಸಿದೆ.
ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಪಡೆದ ಸಾಲ ಮರು ಪಾವತಿಸಲು ಯುಬಿಎಚ್‌ಎಲ್ ಸಂಸ್ಥೆಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ವಿಭಾಗೀಯ ಪೀಠಕ್ಕೆ ಯುಬಿಎಚ್‌ಎಲ್ ಪರ ವಕೀಲರು ಈ ಮಾಹಿತಿ ನೀಡಿದರು. ವಿಚಾರಣೆ ಸಂದರ್ಭದಲ್ಲಿ ಯುಬಿಎಚ್‌ಎಲ್ ಪರ ವಕೀಲರು ಮೆಮೊ ಸಲ್ಲಿಸಿ, ಯುಬಿಎಚ್ ಎಲ್‌ನ ಆಸ್ತಿಯ ಸದ್ಯದ ಮಾರುಕಟ್ಟೆ ಮೌಲ್ಯ 12,203 ಕೋಟಿ ರು. ಆಗಿದೆ. ಇದರಲ್ಲಿ ಕೆಲ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದ ತಿಳಿಸಿದರು.
ಅಲ್ಲದೆ, ಜಾರಿ ನಿರ್ದೇಶನಾಲಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ ಯುಬಿ ಎಚ್‌ಎಲ್ ಷೇರುಗಳ ಮೌಲ್ಯ ಕುಸಿದಿದೆ. ಯುಬಿಎಚ್‌ಎಲ್ ತಮಗೆ 6,500 ಕೋಟಿ ರು. ಸಾಲ ಮರುಪಾವತಿಸಬೇಕಿದೆ ಎಂದು ಬ್ಯಾಂಕುಗಳು ಹೇಳುತ್ತಿವೆ. ಬಡ್ಡಿ ಹಣ ಸೇರಿದರೆ ಈ ಮೊತ್ತವು 9 ಸಾವಿರ ಕೋಟಿ ರು.ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಯುಬಿಎಚ್ ಎಲ್ ಎಲ್ಲ ಆಸ್ತಿ ಮಾರಾಟ ಮಾಡಿ, ಸಾಲ ತೀರಿಸಲು ನಮ್ಮ ಯಾವುದೇ ಅಭ್ಯಂತರ ಇಲ್ಲ. ಆಸ್ತಿ ಮಾರಾಟದಿಂದ ಬರುವ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ಸಹ ವಿದ್ದೇವೆ. ಹಾಗೆಯೇ, ಬಾಕಿ ಉಳಿಸಿಕೊಂಡಿರುವ ಸಾಲದ ಮರು ಪಾವತಿಯಲ್ಲಿ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯ ಪೀಠ, ಷೇರು ಮೌಲ್ಯ ಕುಸಿತದ ಬಗ್ಗೆ ಇಲ್ಲಿ ಚರ್ಚೆ ಬೇಡ. ಸಾಲ ತೀರಿಸುವ ನಿಮ್ಮ ಪ್ರಸ್ತಾವ ಉತ್ತಮವಾಗಿದ್ದರೆ ಅಡ್ಡಿಯಿಲ್ಲ. ಹೀಗಾಗಿ ಬಾಕಿ ಉಳಿಸಿಕೊಂಡಿರುವ ಹಣ ಪಾವತಿ ಸಂಬಂಧ ಸೂಕ್ತ ಪ್ರಸ್ತಾಪ ಸಿದ್ಧಪಡಿಸಿ ಕೋರ್ಟ್‌ಗೆ ಸಲ್ಲಿಸಬೇಕು. ಅದು ಕೋರ್ಟ್‌ಗೆ ತೃಪ್ತಿಕರವಾಗಿರಬೇಕು ಎಂದು ಸೂಚಿಸಿತು. ಹಾಗೆಯೇ, ಪ್ರಕರಣ ಸಂಬಂಧ ಈವರೆಗೆ ನಡೆದಿರುವ ಬೆಳವಣಿಗೆಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆ ಕೋರ್ಟ್‌ಗೆ ಸಲ್ಲಿಸಬೇಕು ಎಂದು ಯುಬಿಎಚ್ ಎಲ್ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಏಪ್ರಿಲ್ 2ಕ್ಕೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.