
ನವದೆಹಲಿ(ಆ. 11): ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ವೆಂಕಯ್ಯ ನಾಯ್ಡು ದೇಶದ 13ನೇ ಉಪರಾಷ್ಟ್ರಪತಿಯಾಗಿ ಪದಗ್ರಹಣ ಮಾಡಿದರು. ಶುಕ್ರವಾರ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್'ನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ವೆಂಕಯ್ಯನಾಯ್ಡು ಪ್ರಮಾಣ ವಚನ ಸ್ವೀಕರಿಸಿದರು. ನಿನ್ನೆಯಷ್ಟೇ ಹಮೀದ್ ಅನ್ಸಾರಿ ಅವರ ಉಪರಾಷ್ಟ್ರಪತಿ ಹುದ್ದೆಯ ಅವಧಿ ಮುಕ್ತಾಯಗೊಂಡಿತ್ತು.
68 ವರ್ಷದ ವೆಂಕಯ್ಯ ನಾಯ್ಡು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯವರಾದರೂ ಕರ್ನಾಟಕದಿಂದ ಮೂರು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆರೆಸ್ಸೆಸ್ ಸ್ವಯಂಸೇವಕರಾದ ಅವರು ಕಾಲೇಜು ದಿನಗಳಲ್ಲಿ ಎಬಿವಿಪಿಯಲ್ಲಿ ತೊಡಗಿಸಿಕೊಂಡು ಆ ಮೂಲಕ ರಾಜಕೀಯದ ಆರಂಭ ಪಡೆದರು. 1974ರಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಸಮರ್ಪಿಸಿಕೊಂಡ ವೆಂಕಯ್ಯ ನಾಯ್ಡು 1977ರ ತುರ್ತು ಪರಿಸ್ಥಿತಿ ವೇಳೆ ಬಂಧನಕ್ಕೊಳಗಾದರು.
2002ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ, ವಕ್ತಾರ ಹೀಗೆ ಹಲವು ಸ್ತರಗಳಲ್ಲಿ ಬಿಜೆಪಿ ಪಕ್ಷದ ನಾಯಕತ್ವ ವಹಿಸಿದ ಅನುಭವಸ್ಥರು. ವಾಜಪೇಯಿ ಹಾಗೂ ಮೋದಿ ಸರಕಾರಗಳಲ್ಲಿ ಸಚಿವರಾಗಿ ದುಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.