
ಇಂದೋರ್/ಪುಣೆ(ಆ.11): ಸಾವಿಗೆ ಪ್ರಚೋದನೆ ನೀಡುವ ಅಪಾಯ ಕಾರಿ ಮೊಬೈಲ್ ಗೇಮ್ ಆಗಿರುವ ಬ್ಲೂವೇಲ್ ಚಾಲೆಂಜ್ ಸ್ವೀಕರಿಸಿ ಇತ್ತೀಚೆಗೆ ಮುಂಬೈನಲ್ಲಿ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ಅಂಥದ್ದೇ ಯತ್ನಕ್ಕೆ ಮುಂದಾಗಿದ್ದ ಇಬ್ಬರು ಬಾಲಕರನ್ನು ಗುರುವಾರ ರಕ್ಷಿಸಲಾಗಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಈ ಎರಡೂ ಪ್ರಕರಣ ಸೂಕ್ತ ಸಮಯದಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಬ್ಬರು ಶಾಲಾ ಮಕ್ಕಳ ಜೀವ ಉಳಿಯುವಂತಾಗಿದೆ.
ಭಾರತದಲ್ಲಿ ಬ್ಲೂವೇಲ್ ಮೊಬೈಲ್ ಗೇಮ್‌ಗೆ ನಿಷೇ‘ ಹೇರಬೇಕೆಂದು ಭಾರೀ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ಒಂದೇ ದಿನ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು ದೇಶಾದ್ಯಂತ ಪೋಷಕರು ಬೆಚ್ಚಿ ಬೀಳುವಂತೆ ಮಾಡಿದೆ.
ಶಾಲೆಯಲ್ಲೇ ಆತ್ಮಹತ್ಯೆ:
ಬ್ಲೂವೇಲ್ ಚಾಲೆಂಜ್'ನ 50ನೇ ಹಂತ ತಲುಪಿದ್ದ ಮಧ್ಯಪ್ರದೇಶದ ಇಂದೋರ್‌ನ 13 ವರ್ಷದ ಬಾಲಕನೊಬ್ಬ ಗುರುವಾರ ಶಾಲೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗುರುವಾರ ಮಧ್ಯಾಹ್ನ ಚಮಲೀದೇವಿ ಪಬ್ಲಿಕ್ ಸ್ಕೂಲ್'ನ ಶಾಲೆಯ 3ನೇ ಮಹಡಿಯಿಂದ ಕೆಳಗೆ ಹಾರಿ ಬಾಲಕ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ, ಸಹಪಾಠಿಗಳು ಸ್ಥಳಕ್ಕೆ ಧಾವಿಸಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಾಥಮಿಕ ತನಿಖೆ ವೇಳೆ, ಬಾಲಕ ಕಳೆದ ಕೆಲ ದಿನಗಳಿಂದ ತಂದೆಯ ಮೊಬೈಲ್'ನಲ್ಲಿ ಬ್ಲೂವೇಲ್ ಗೇಮ್ ಆಡುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಇದರ ಅಂತಿಮ ಹಂತವಾಗಿ ಗುರುವಾರ ಆತನಿಗೆ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಅದಕ್ಕೆ ಬಾಲಕ ಯತ್ನಿಸುತ್ತಿರುವಾಗಲೇ, ಸಹಪಾಠಿಗಳ ಸಮಯಪ್ರಜ್ಞೆಯಿಂದಾಗಿ ಬದುಕುಳಿದಿದ್ದಾನೆ.
ಮನೆ ಬಿಟ್ಟ ಬಾಲಕ:
ಈ ನಡುವೆ ಬ್ಲೂವೇಲ್ ಚಾಲೆಂಜ್‌ನ ಅಂಗವಾಗಿ ಸೊಲ್ಲಾಪುರದಿಂದ ಮನೆಬಿಟ್ಟು ಪುಣೆಗೆ ಬಸ್‌ನಲ್ಲಿ ಹೊರಟಿದ್ದ 14 ವರ್ಷದ ಬಾಲಕನನ್ನು ಕೂಡಾ ಗುರುವಾರ ರಕ್ಷಿಸಲಾಗಿದೆ. ಬಾಲಕ ನಾಪತ್ತೆಯಾಗಿದ್ದರಿಂದ ಗಾಬರಿಗೊಂಡ ಪೋಷಕರು, ಆತನ ಸಹಪಾಠಿಗಳನ್ನು ವಿಚಾರಿಸಿದಾಗ ಅವರು ಮೊಬೈಲ್'ನಲ್ಲಿ ಗೇಮ್ ಆಡುತ್ತಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ವೇಳೆ ಏಕಾಂಗಿಯಾಗಿ ಬಾಲಕನೊಬ್ಬ ಬಸ್‌ನಲ್ಲಿ ತೆರಳುತ್ತಿದ್ದ ಮಾಹಿತಿ ಪಡೆದು ಬಿಗ್'ವಾನ್ ಎಂಬಲ್ಲಿ ಬಸ್ಸನ್ನು ಅಡ್ಡಗಡ್ಡಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡೂ ಪ್ರಕರಣಗಳಲ್ಲಿ ರಕ್ಷಣೆ ಬಳಿಕ ವಿದ್ಯಾರ್ಥಿಗಳು ತೀರಾ ಗಾಬರಿಯಾಗಿದ್ದು ಕಂಡುಬಂದಿದೆ.
ಏನಿದು ಬ್ಲೂವೇಲ್ ಗೇಮ್?
ಇದೊಂದು ಆನ್‌ಲೈನ್ ಗೇಮ್. ಇದರಲ್ಲಿ ಸವಾಲು ಸ್ವೀಕರಿಸಿದವರಿಗೆ ದಿನಕ್ಕೊಂದು ಟಾಸ್ಕ್ ನೀಡಲಾಗುತ್ತದೆ. ಸವಾಲು ಸ್ವೀಕರಿಸುವಾಗ ಕಡೆಯಲ್ಲಿ ನೀವು ಸಾಯಬೇಕಾಗುತ್ತದೆ ಎಂದು ಸೂಚಿಸಲಾಗಿರುತ್ತದೆ. ಮಾನಸಿಕವಾಗಿ ದುರ್ಬಲ ಮಕ್ಕಳನ್ನೇ ಗೇಮ್‌ನತ್ತ ಸೆಳೆಯಲಾಗುತ್ತದೆ. ಒಂದು ವೇಳೆ, ಮಕ್ಕಳು ಮಧ್ಯದಲ್ಲಿ ಹಿಂದೆ ಸರಿಯಲು ಯತ್ನಿಸಿದರೆ ನಿಮ್ಮ ಎಲ್ಲಾ ಮಾಹಿತಿ ನಮ್ಮ ಬಳಿ ಇದೆ, ನಮ್ಮವರು ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಹೆದರಿಸಲಾಗುತ್ತದೆ. ಇದನ್ನು ಒಪ್ಪಿದವರಿಗೆ ದಿನಕ್ಕೊಂದರಂತೆ 50 ದಿನ ಹೊಸ ಟಾಸ್ಕ್ ನೀಡಲಾಗುತ್ತದೆ. ರಾತ್ರಿ ಏಳುವುದು, ಭಯಾನಕ ಚಿತ್ರ ನೋಡುವುದು, ನರ ಕತ್ತರಿಸಿಕೊಳ್ಳುವುದು ಹೀಗೆ ನಾನಾ ಕಠಿಣ ಟಾಸ್ಕ್‌ಗಳು ಇರುತ್ತದೆ. 50ನೇ ದಿನ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.