
ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವ ಹಿತದೃಷ್ಠಿಯಿಂದ ಹಾಗೂ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದ 30 ರವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಡಿಸಿ ಕೆ.ಎ.ದಯಾನಂದ ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದು ಲಘು ವಾಹನಗಳಾದ ಸಾಮಾನ್ಯ ಬಸ್ಸು, ಜೀಪು, ವ್ಯಾನ್, ಎಲ್‌ಸಿವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ -ಮಾಳಾಘಾಟ್-ಕಾರ್ಕಳ-ಉಡುಪಿ (ರಾಷ್ಟ್ರೀಯ ಹೆದ್ದಾರಿ 169) ಮೂಲಕ ಸಂಚರಿಸಬೇಕು.
ಭಾರಿ ವಾಹನಗಳಾದ ರಾಜಹಂಸ, ಐರಾವತ ಮತ್ತು ಖಾಸಗಿ ಲಕ್ಸುರಿ ಬಸ್‌ಗಳು, ಬುಲೆಟ್ ಟ್ಯಾಂಕರ್ಸ್, ಶಿಪ್ ಕಾಗೋ ಕಂಟೈನರ್ಸ್ ಮತ್ತು ಲಾಂಗ್ ಚಾಸೀಸ್ ವಾಹನಗಳಿಗೆ ತೀರ್ಥಹಳ್ಳಿ-ಮಾಸ್ತಿಕಟ್ಟೆ- ಹೊಸಂಗಡಿ- ಸಿದ್ದಾಪುರ-ಕುಂದಾಪುರ-ಉಡುಪಿ (ರಾಜ್ಯ ಹೆದ್ದಾರಿ 59) ಮೂಲಕ ಸಂಚರಿಸಲು ಬದಲಿ ವ್ಯವಸ್ಥೆ ಮಾಡಲಾಗಿದೆ.
ಏಪ್ರಿಲ್ 30 ಅಥವಾ ಕಾಮಗಾರಿ ಮುಗಿಯುವ ತನಕ ರಸ್ತೆ ಸಂಚಾರ ನಿಷೇಧ ಜಾರಿಯಲ್ಲಿರುವುದು. ಕಾಮಗಾರಿ ನಡೆಯುವ ವೇಳೆ ನಿಷೇಧಿತ ಮಾರ್ಗದಲ್ಲಿ ಯಾವುದೆ ವಾಹನ ಸಂಚರಿಸದಂತೆ ಮತ್ತು ಕಾಮಗಾರಿಗೆ ಅಡಚಣೆಯಾಗದಂತೆ ಸೂಕ್ತ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ಆದೇಶಿಸಿದ್ದಾರೆ.
ಕಳೆದ ಜುಲೈ 10 ಮತ್ತು 13 ರಂದು ಸುರಿದ ಭಾರಿ ಮಳೆಯಿಂದ ಆಗುಂಬೆ ಘಾಟಿಯ 7 ನೇ ಮತ್ತು 14 ನೇ ತಿರುವಿನಲ್ಲಿ ಮತ್ತು ಆನೆಬಂಡೆ ಬಳಿ ಗುಡ್ಡ ಕುಸಿತ ಉಂಟಾಗಿ ಭಾಗಶಃ ರಸ್ತೆ ಕುಸಿದಿದ್ದು ಶಾಶ್ವತ ದುರಸ್ತಿ ಕಾಮಗಾರಿಯನ್ನು ಇದೀಗ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ದ್ವಿತೀಯ ಪಿಯು ಪರೀಕ್ಷೆ ಹಾಗೂ ಕುದುರೆಮುಖ ವನ್ಯಜೀವಿ ವಲಯದ ಅನುಮತಿ ಸಿಗದ ಕಾರಣ ಎರಡು ಬಾರಿ ದುರಸ್ತಿ ಕಾರ್ಯವನ್ನು ಮುಂದೂಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.