ಮತ್ತೆ ಅಖಂಡ ಕರ್ನಾಟಕ ಬಂದ್ ?

By Web DeskFirst Published Jul 30, 2018, 9:55 AM IST
Highlights

ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇದೀಗ ಮತ್ತೊಮ್ಮೆ ಕರ್ನಾಟಕ ಬಂದ್ ಗೆ ಕರೆ ನಿಡುವ ಬಗ್ಗೆ ನಿರ್ಧಾರ ಮಾಡುತ್ತಿರುವುದಾಗಿ ಹೇಳಿದ್ದಾರೆ.  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಕೇಳಿ ಬರುತ್ತಿರುವ ಕೂಗನ್ನು ವಿರೋಧಿಸಿ ಈ ಬಂದ್  ಮಾಡಲಾಗುವುದು ಎಂದು ಹೇಳಿದ್ದಾರೆ. 

ಬೆಂಗಳೂರು :  ಪ್ರತ್ಯೇಕ ರಾಜ್ಯದ ಹೋರಾಟವನ್ನು ಖಂಡಿಸಿ ಬೀದರ್‌ನಿಂದ ಚಾಮರಾಜನಗರದವರೆಗೆ ಪ್ರತಿಭಟನೆ ಮಾಡುವ ಕುರಿತು ಸೋಮವಾರ ಸಭೆ ಸೇರಿ ಅಖಂಡ ಕರ್ನಾಟಕ ಬಂದ್ ಮಾಡುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳುವುದಾಗಿ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. 

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಭಾನುವಾರ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಮತ್ತು ದಕ್ಷಿಣ ಕರ್ನಾಟಕದ ರಾಗಿ ಮುದ್ದೆಯನ್ನು ಒಟ್ಟಿಗೆ ಊಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. 

ಈ ವೇಳೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಅಖಂಡ ಕರ್ನಾಟಕ ಇಬ್ಭಾಗವಾಗುವುದಕ್ಕೆ ಅವಕಾಶ ನೀಡುವುದಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡದೆ ಅನ್ಯಾಯ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂಬುದಕ್ಕೆ ನಮ್ಮ ಬೆಂಬಲವಿದೆಯೇ ಹೊರತು ಪ್ರತ್ಯೇಕತೆಯ ವಿಚಾರವನ್ನು ಒಪ್ಪುವುದಿಲ್ಲ. ಅಖಂಡ ಕರ್ನಾಟಕ ಒಂದೇ ಎಂಬ ಬಾಂಧವ್ಯದ ಸಂಕೇತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಕರ್ನಾಟಕವನ್ನು ಯಾವುದೇ ಕಾರಣಕ್ಕೂ ಎರಡು ಭಾಗ ಮಾಡಬೇಡಿ. 

ಅಖಂಡ ಕರ್ನಾಟಕ ಎಲ್ಲರಿಗೂ ಬೇಕಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ಮಹನೀಯರು ಹೋರಾಟ ನಡೆಸಿದ್ದಾರೆ. ಕರ್ನಾಟಕ ಒಡೆಯುವ ತಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳು ಉತ್ತರ ಕರ್ನಾಟಕವನ್ನು ಕಡೆಗಣಿಸಿವೆ. ಒಂದು ವೇಳೆ ರಾಜ್ಯ ಇಬ್ಭಾಗ ಮಾಡಲು ಹೊರಟರೆ ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

click me!