ರಾಜ್ಯ ಸರ್ಕಾರದಿಂದ ಏರಿಕೆಯಾಗುತ್ತಾ ST ಮೀಸಲು ?

By Web DeskFirst Published Jun 20, 2019, 9:23 AM IST
Highlights

ತಮ್ಮ ಸಮುದಾಯಕ್ಕೆ ಇರುವ ಮೀಸಲಾತಿ ಪ್ರಮಾಣವನ್ನು ಇನ್ನಷ್ಟು ಏರಿಕೆ ಮಾಡಲು ಇದೀಗ  ವಾಲ್ಮೀಕಿ ಸಮುದಾಯವು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಮಾಡಿದೆ. 

ಬೆಂಗಳೂರು [ಜೂ.20] :  ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 7 ಕ್ಕೆ ಹೆಚ್ಚಿಸಬೇಕೆಂದು ವಾಲ್ಮೀಕಿ ಸಮುದಾಯದ ಶಾಸಕರು, ಮುಖಂಡರ ನಿಯೋಗ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಸುರಪುರ ಶಾಸಕ ರಾಜುಗೌಡ ನೇತೃತ್ವದಲ್ಲಿ ಮುಖ್ಯ ಮಂತ್ರಿ ಅವರನ್ನು ಭೇಟಿ ಮಾಡಿದ ನಿಯೋಗ, ಪರಿಶಿಷ್ಟ ಪಂಗಡಕ್ಕೆ ಕೇಂದ್ರ ಸರ್ಕಾರ ಶೇ. 7 ರಷ್ಟು ಮೀಸಲಾತಿ ನೀಡಿದೆ. ಆದರೆ, ರಾಜ್ಯದಲ್ಲಿ ಕೇವಲ ಶೇ. 3 ರಷ್ಟು ಮೀಸಲಾತಿ ನೀಡಲಾಗಿದೆ. ಇದರಿಂದ ವಾಲ್ಮೀಕಿ ನಾಯಕ ಸಮುದಾಯ ಸೇರಿದಂತೆ ಪರಿಶಿಷ್ಟ ಪಂಗಡದಲ್ಲಿ ಬರುವ ಸಮುದಾಯಗಳಿಗೆ ಭಾರೀ ಅನ್ಯಾಯವಾ ಗುತ್ತಿದೆ. ಈ ಅನ್ಯಾಯ ಸರಿಪಡಿಸಲು ರಾಜ್ಯದಲ್ಲೂ ಪರಿಶಿಷ್ಟ ಪಂಗಡಕ್ಕೆ ಇರುವ ಮೀಸಲಾತಿ ಪ್ರಮಾಣವನ್ನು ಶೇ. 7 ಕ್ಕೆ ಹೆಚ್ಚಿಸಬೇಕು ಎಂದು ಕೋರಿದರು.

ಮುಖ್ಯಮಂತ್ರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೂಗೌಡ, ರಾಜ್ಯ ಸರ್ಕಾರ ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಸಮುದಾಯದ ಬೇಡಿಕೆ ಪರಿಗಣಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದೇವೆ. ಮುಖ್ಯ ಮಂತ್ರಿಗಳು ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಮೀಸಲಾತಿ ಹೆಚ್ಚಳಕ್ಕಾಗಿ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಆರಂಭಗೊಂಡಿರುವ ಪಾದಯಾತ್ರೆ, ಜೂ. 24 ರಂದು ಬೆಂಗಳೂರು ತಲುಪಲಿದೆ ಎಂದರು.

click me!