ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ರಾಜ್ಯದ ಎಂಟು ನದಿಗಳಲ್ಲಿ ವಿಸರ್ಜನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು : ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ರಾಜ್ಯದ ಎಂಟು ನದಿಗಳಲ್ಲಿ ವಿಸರ್ಜನೆ ಮಾಡಲು ತೀರ್ಮಾನಿಸಲಾಗಿದ್ದು, ದೆಹಲಿಯಿಂದ ಬುಧವಾರ ಬೆಂಗಳೂರಿಗೆ ತರಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಬೆಳಗ್ಗೆ ಪಕ್ಷದ ಎಲ್ಲಾ ರಾಜ್ಯಗಳ ಅಧ್ಯಕ್ಷರ, ಪ್ರಮುಖರ ಸಭೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರೆದಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಅವರ ಅಸ್ಥಿಯನ್ನು ದೇಶದ ಪ್ರಮುಖ ನದಿಗಳಲ್ಲಿ ವಿಸರ್ಜನೆ ಮಾಡುವ ಬಗ್ಗೆ ಚರ್ಚಿಸಲಾಗುವುದು. ರಾಜ್ಯದಲ್ಲಿಯೂ ಎಂಟು ನದಿಯಲ್ಲಿ ವಿಸರ್ಜನೆ ಮಾಡಲಾಗುವುದು. ರಾಜ್ಯದ ಪ್ರಮುಖ ನದಿಗಳಾದ ಕಾವೇರಿ, ನೇತ್ರಾವತಿ, ಮಲಪ್ರಭಾ, ಕೃಷ್ಣಾ ಸೇರಿದಂತೆ ಇತರೆ ನದಿಗಳಲ್ಲಿ ವಿಸರ್ಜನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತು ಆರ್.ಅಶೋಕ್ ನೇತೃತ್ವದಲ್ಲಿ ವಾಜಪೇಯಿ ಅವರ ಅಸ್ಥಿ ಕಲಶವನ್ನು ಸ್ವಾಗತಿಸಲಾಗುತ್ತದೆ. ಬಿಜೆಪಿ ಕಚೇರಿವರೆಗೆ ಮೆರವಣಿಗೆಯಲ್ಲಿ ತಂದು ಪುಷ್ಪಾರ್ಚನೆ ನೆರವೇರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು, ವಾಜಪೇಯಿ ಅವರ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಆ.23 ಮತ್ತು ಆ.25ರಂದು ಅಸ್ಥಿ ವಿಸರ್ಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಆ.23ರಂದು ಬೆಳಗ್ಗೆ 9.30ರ ಸುಮಾರಿಗೆ ಪಕ್ಷದ ಕಚೇರಿಯಿಂದ ಅಸ್ಥಿ ಕಲಶ ಹೊರಡಲಿದೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ತಲುಪಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ತಾವೂ ಸೇರಿದಂತೆ ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕ ಅರವಿಂದ ಲಿಂಬಾವಳಿ, ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ. ಆ.25ರಂದು ಏಳು ಕಡೆ ಅಸ್ಥಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ನೇತ್ರಾವತಿ ನದಿ, ಮಲಪ್ರಭಾ ನದಿ, ಕೃಷ್ಣಾ ನದಿ, ಕರಾಂಜಾ ನದಿ, ತುಂಗಭದ್ರಾ ನದಿ, ಶರಾವತಿ, ಮತ್ತು ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ವಿವರಿಸಿದರು.
ಆ.26ರಂದು ಬೆಂಗಳೂರಿನಲ್ಲಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲಿಯೇ ಸ್ಥಳ ನಿಗದಿ ಮಾಡಲಾಗುವುದು. ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಕೇಂದ್ರದ ನಾಯಕರನ್ನು ಆಹ್ವಾನಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ರವಿಕುಮಾರ್, ತೇಜಸ್ವಿನಿ ಗೌಡ, ಬಿಜೆಪಿ ಸಹ ವಕ್ತಾರ ಆನಂದ್ ಉಪಸ್ಥಿತರಿದ್ದರು.