
ನವದೆಹಲಿ/ಇಸ್ಲಾಮಾಬಾದ್(ಅ.1): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಸರ್ಜಿಕಲ್ ದಾಳಿ ನಡೆಸಿದ ಬಳಿಕ ಎರಡೂ ದೇಶಗಳ ನಡುವಿನ ವಾತಾವರಣ ಹದಗೆಟ್ಟಿರುವಂತೆಯೇ, ಅಮೆರಿಕವು ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದ ವಿಚಾರ ಬಹಿರಂಗವಾಗಿದೆ. ಭಾರತದ ಮೇಲೆ ದಾಳಿ ನಡೆಸುವ ಸಲುವಾಗಿ ನಾವು ಅಣ್ವಸಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಗೆ ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ವತಿಯಿಂದಲೇ ಈ ಕುರಿತು ಪಾಕ್‌ಗೆ ಸ್ಪಷ್ಟ ಹಾಗೂ ಖಡಕ್ ಸಂದೇಶ ರವಾನಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ವಿದೇಶಾಂಗ ಅಕಾರಿಯೊಬ್ಬರು ತಿಳಿಸಿದ್ದಾರೆ.
‘‘ನಾವೇನೂ ಅಣ್ವಸಗಳನ್ನು ಪ್ರದರ್ಶನಕ್ಕಿಡಲೆಂದು ಸಿದ್ಧಪಡಿಸಿಲ್ಲ. ನಮ್ಮ ಮೇಲೆ ಯುದ್ಧಕ್ಕೆ ಬಂದರೆ ಭಾರತದ ವಿರುದ್ಧ ಅದನ್ನು ಪ್ರಯೋಗಿಸಲು ಹಿಂದೆ ಮುಂದೆ ನೋಡುವುದಿಲ್ಲ,’’ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸ್ಸೆ ಇತ್ತೀಚೆಗಷ್ಟೇ ಹೇಳಿದ್ದರು. ಈ ಹೇಳಿಕೆಗೆ ಸಂಬಂಸಿ ಅಮೆರಿಕವು ಪಾಕ್ ವಿರುದ್ಧ ಕೆಂಡಕಾರಿತ್ತು ಎನ್ನಲಾಗಿದೆ. ಏತನ್ಮಧ್ಯೆ, ಪಿಒಕೆಯಲ್ಲಿ ಭಾರತ ನಡೆಸಿದ ಸರ್ಜಿಕಲ್ ದಾಳಿಗೆ ಅಮೆರಿಕದ ಸಂಸದರು ಬೆಂಬಲ ವ್ಯಕ್ತಪಡಿಸಿದ್ದಾರೆ. ಜತೆಗೆ, ಪಾಕ್ ಅನ್ನು ಭಯೋತ್ಪಾದನಾ ದೇಶ ಎಂದು ಘೋಷಿಸುವಂತೆ ಕೋರಿದ್ದ ಅರ್ಜಿಗೆ 3.90 ಲಕ್ಷ ಸಹಿಗಳು ಸಂಗ್ರಹವಾಗಿದೆ.
ವಿಶ್ವಸಂಸ್ಥೆ ಸಲಹೆ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಶನಿವಾರ ಮಧ್ಯಪ್ರವೇಶಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಜಮ್ಮು-ಕಾಶ್ಮೀರ ವಿಚಾರವನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ‘‘ಎರಡೂ ದೇಶಗಳ ನಡುವೆ ಬಿಕ್ಕಟ್ಟು ಉಂಟಾಗಿರುವುದು ನಮಗೆ ಕಳವಳ ಮೂಡಿಸಿದೆ. ಎರಡೂ ಕಡೆಯವರು ಈಗ ಸಂಯಮ ಕಾಪಾಡಿಕೊಳ್ಳುವುದು ಮುಖ್ಯ. ಕಾಶ್ಮೀರ ಸೇರಿದಂತೆ ಎಲ್ಲ ಸಮಸ್ಯೆಗಳನ್ನೂ ಶಾಂತಿಯುತವಾಗಿ ರಾಜತಾಂತ್ರಿಕ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ,’’ ಎಂದಿದ್ದಾರೆ ಬಾನ್ ಕಿ ಮೂನ್.
ಈ ಮಧ್ಯೆ, ಪಿಒಕೆಯಲ್ಲಿ ಸರ್ಜಿಕಲ್ ದಾಳಿ ನಡೆಸಿದ್ದೇವೆ ಎಂಬ ಭಾರತದ ವಾದ ಶುದ್ಧ ಸುಳ್ಳು ಎಂದು ಪಾಕಿಸ್ತಾನವು ವಿಶ್ವಸಂಸ್ಥೆಗೆ ತಿಳಿಸಿದೆ. ಶನಿವಾರ ಬಾನ್ ಕಿ ಮೂನ್‌ರನ್ನು ಭೇಟಿಯಾದ ವಿಶ್ವಸಂಸ್ಥೆಯಲ್ಲಿನ ಪಾಕ್‌ನ ಕಾಯಂ ರಾಯಭಾರಿ ಮಲೀಹಾ ಲೋ, ‘‘ಭಾರತ ಸರ್ಜಿಕಲ್ ದಾಳಿ ನಡೆಸಿದ್ದೇವೆ ಎಂದು ಸುಳ್ಳು ಹೇಳುತ್ತಿದೆ. ತೀವ್ರಗೊಳ್ಳುತ್ತಿರುವ ಉದ್ವಿಗ್ನ ವಾತಾವರಣಕ್ಕೆ ಭಾರತವೇ ಸಂಪೂರ್ಣ ಹೊಣೆ ಹೊರಬೇಕು. ನಾವು ಗರಿಷ್ಠ ಸಂಯಮವನ್ನು ಕಾಪಾಡಿಕೊಂಡು ಬಂದಿದ್ದೇವೆ. ಆದರೆ, ನಮ್ಮನ್ನು ಕೆದಕಲು ಬಂದರೆ ನಾವು ಸುಮ್ಮನಿರಲ್ಲ,’’ ಎಂದಿದ್ದಾರೆ.
ಇನ್ನೊಂದೆಡೆ, ಭಾರತ ಮತ್ತು ಪಾಕ್‌ನಲ್ಲಿರುವ ಅಮೆರಿಕದ ಸೇನಾ ಪರಿವೀಕ್ಷಕ ಗುಂಪು(ಯುಎನ್‌ಎಂಒಜಿಐಪಿ) ಇತ್ತೀಚೆಗೆ ಎಲ್‌ಒಸಿಯಲ್ಲಿ ಯಾವುದೇ ಗುಂಡಿನ ಚಕಮಕಿಯನ್ನು ನೇರವಾಗಿ ನೋಡಿಲ್ಲ ಎಂಬ ವಿಶ್ವಸಂಸ್ಥೆ ಮುಖ್ಯಸ್ಥರ ವಕ್ತಾರ ಸ್ಟೀನ್ ಡ್ಯುಜಾರಿಕ್ ಅವರ ಹೇಳಿಕೆಯನ್ನು ವಿಶ್ವಸಂಸ್ಥೆಯಲ್ಲಿರುವ ಭಾರತೀಯ ಕಾಯಂ ರಾಯಭಾರಿ ಸೈಯದ್ ಅಕ್ಬರುದ್ದೀನ್ ತಳ್ಳಿಹಾಕಿದ್ದಾರೆ. ‘‘ಯಾರು ನೋಡಿರಲಿ, ನೋಡಿರದೇ ಇರಲಿ, ಎಲ್‌ಒಸಿಯಲ್ಲಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ,’’ ಎಂದಿದ್ದಾರೆ.
ಮತ್ತೆ ಗುಂಡಿನ ಚಕಮಕಿ: ಶನಿವಾರವೂ ಜಮ್ಮು-ಕಾಶ್ಮೀರದ ಅಖ್ನೂರ್‌ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಭಾರತೀಯ ಸೇನಾ ಶಿಬಿರಗಳು ಮತ್ತು ನಾಗರಿಕರಿರುವ ಪ್ರದೇಶಗಳ ಮೇಲೆ ಮೋರ್ಟರ್ ಬಾಂಬ್‌ಗಳು ಹಾಗೂ ಹೆವಿ ಮಷೀನ್ ಗನ್‌ಗಳ ಮೂಲಕ ದಾಳಿ ನಡೆಸಿದೆ. ಆದರೆ, ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸೇನೆ ತಿಳಿಸಿದೆ. ಗಡಿಯಲ್ಲಿದ್ದ ಭಾರತೀಯ ಸೇನೆಯೂ ಪಾಕ್ ಪಡೆಗೆ ತಕ್ಕ ಪ್ರತಿಕ್ರಿಯೆ ನೀಡಿದೆ. ಇದೇ ವೇಳೆ, ಸೇನಾ ಮುಖ್ಯಸ್ಥ ಜ. ದಲ್ಬೀರ್ ಸಿಂಗ್ ಸುಹಾಗ್ ಶನಿವಾರ ನಾರ್ದರ್ನ್ ಮತ್ತು ವೆಸ್ಟರ್ನ್ ಕಮಾಂಡ್‌ಗೆ ಭೇಟಿ ನೀಡಿ, ಮುಂಚೂಣಿ ನೆಲೆಗಳ ಸೇನಾ ಸನ್ನದ್ಧತೆ ಕುರಿತು ಪರಿಶೀಲಿಸಿದ್ದಾರೆ.
ಕಮಾಂಡರ್ ವರ್ಗ: 19 ಮಂದಿ ಯೋಧರ ಸಾವಿಗೆ ಕಾರಣವಾದ ಉರಿ ಸೇನಾನೆಲೆ ಮೇಲಿನ ಉಗ್ರರ ದಾಳಿ ಬೆನ್ನಲ್ಲೇ ಈಗ ಉರಿ ಬ್ರಿಗೇಡಿಯರ್ ಕೆ ಸೋಮಶೇಖರ್ ಎಂಬವರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. 28 ವೌಂಟನ್ ವಿಭಾಗದ ಅಕಾರಿಯೊಬ್ಬರು ಇನ್ನು ಉರಿಯ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಬೆಳವಣಿಗೆ ಬಗ್ಗೆ ಹೆಚ್ಚಿನ ವಿವರಣೆ ನೀಡಲು ಸೇನೆ ನಿರಾಕರಿಸಿದೆ.
ಬ್ರಹ್ಮಪುತ್ರ ಉಪನದಿಗೆ ಚೀನಾ ಅಡ್ಡಿ: ತನ್ನ ಬಹುಕೋಟಿ ವೆಚ್ಚದ ಜಲವಿದ್ಯುತ್ ಯೋಜನೆಯ ಕಾಮಗಾರಿಗಾಗಿ ಚೀನಾವು ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಯ ಉಪನದಿಯನ್ನು ಬ್ಲಾಕ್ ಮಾಡಿದೆ. ಇದು ಭಾರತಕ್ಕೆ ಕಳವಳ ಮೂಡಿಸಿದ್ದು, ದೇಶದ ನದೀತೀರದ ಪ್ರದೇಶಗಳಲ್ಲಿ ನೀರಿನ ಹರಿವಿನ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಕ್ಸಿಯಾಬುಕು ನದಿ ಮೇಲಿನ ಲಾಲ್ಹೋ ಯೋಜನೆಗೆ 740 ದಶಲಕ್ಷ ಡಾಲರ್ ವೆಚ್ಚವಾಗಲಿದೆ.
ಮೋದಿ ಒಪ್ಪಿದರೆ ನಾವು ಸ್ನೇಹಕ್ಕೆ ಸಿದ್ಧ: ಇಮ್ರಾನ್ ಖಾನ್
‘‘ನಮಗೆ ಶಾಂತಿ ಬೇಕು. ಮೋದಿ ಬಯಸಿದರೆ ನಾವು ಸ್ನೇಹಕ್ಕೂ ಸಿದ್ಧ. ನಾವು ನಿಮಗೆ ಶಾಂತಿಯನ್ನು ಆರ್ ಮಾಡುತ್ತೇವೆ. ಏಕೆಂದರೆ, ಯುದ್ಧ ಯಾವುದಕ್ಕೂ ಪರಿಹಾರವಲ್ಲ,’’ ಎಂದು ಪಾಕಿಸ್ತಾನದ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಹೇಳಿದ್ದಾರೆ. ‘‘ಪಾಕಿಸ್ತಾನದ ಎಲ್ಲರೂ ನವಾಜ್ ಷರೀಪ್'ರಂತೆ ಹೇಡಿಗಳಲ್ಲ.ಷರೀಪ್ ಹಣದಾಸೆ ಜಾಸ್ತಿ. ಅಣ್ವಸ ಹೊಂದಿರುವ ಎರಡು ದೇಶಗಳು ಯುದ್ಧ ಮಾಡಿದರೆ ಪ್ರಯೋಜನವಿಲ್ಲ. ಭಾರತವು ಯುದ್ಧವನ್ನು ಆಯ್ಕೆ ಮಾಡಿಕೊಂಡರೆ, ಪ್ರಧಾನಿ ಮೋದಿ ಅವರ ಭಾರತವನ್ನು ಪ್ರಕಾಶಿಸುವ ಕನಸು ಕನಸಾಗಿಯೇ ಉಳಿಯಲಿದೆ,’’ ಎಂದೂ ಹೇಳಿದ್ದಾರೆ ಇಮ್ರಾನ್.
ಪಾಕ್‌ನ ಆಡಳಿತ ವ್ಯವಸ್ಥೆಯಲ್ಲಿ ಸೇನೆಯು ಮಹತ್ವದ ಪಾತ್ರ ವಹಿಸಿತ್ತು. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದವರ ದುರಾಡಳಿತವನ್ನು ಹತ್ತಿಕ್ಕಲು ಸೇನೆ ಯತ್ನಿಸಿತ್ತು. ಹಾಗಾಗಿ, ಇಲ್ಲಿನ ಜನ ಸೇನೆಯನ್ನು ಪ್ರೀತಿಸುತ್ತಾರೆ. ಈ ಬಗ್ಗೆ ನನಗೆ ಹೆಮ್ಮೆಯಿದೆ.
- ಜ. ಪರ್ವೇಜ್ ಮುಷ್ರ್, ಪಾಕ್ ಮಾಜಿ ಅಧ್ಯಕ್ಷ
ಭಾರತ-ಪಾಕ್ ಉದ್ವಿಗ್ನತೆಯನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಮತ್ತು ರಾಜಕೀಯ ಕ್ರಮಗಳು ಮುಂದುವರಿಯಲಿ. ಎರಡೂ ದೇಶಗಳ ನಡುವೆ ಭವಿಷ್ಯದಲ್ಲಿ ಎಂದೂ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳುವ ಅಗತ್ಯವಿದೆ.
- ಸೀತಾರಾಂ ಯೆಚೂರಿ, ಸಿಪಿಎಂ ನಾಯಕ
ಸರ್ಜಿಕಲ್ ದಾಳಿಯ ಬಳಿಕ ಪಾಕಿಸ್ತಾನದ ಸ್ಥಿತಿ ಶಸಚಿಕಿತ್ಸೆಯ ಬಳಿಕ ಅನಸ್ತೇಷಿಯಾ(ಅರಿವಳಿಕೆ) ಚುಚ್ಚಿದ ರೋಗಿಯಂತಿದೆ. ಹನುಮಾನ್‌ನಂತೆ ಭಾರತೀಯ ಸೇನೆಯು ತನ್ನ ಶಕ್ತಿಯನ್ನು ತೋರಿಸಿದೆ. ದಾಳಿಯಾಗಿ 2 ದಿನ ಕಳೆದರೂ ಏನಾಗಿದೆಯೆಂದು ಪಾಕ್‌ಗೆ ಗೊತ್ತೇ ಆಗಿಲ್ಲ.
- ಮನೋಹರ್ ಪರಿಕರ್, ರಕ್ಷಣಾ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.