
ಬೆಂಗಳೂರು(ಆ.10): ಪ್ರತ್ಯೇಕ ವೀರಶೈವ ಲಿಂಗಾಯಿತ ಧರ್ಮ ಸ್ಥಾಪನೆಗೆ ಅಂದಿನ ಯುಪಿಎ ಸರ್ಕಾರವೇ ತಿರಸ್ಕರಿಸಿತ್ತು. 2013ರಲ್ಲೇ ಪ್ರತ್ಯೇಕ ಧರ್ಮ ಸ್ಥಾನ ಮತ್ತು ಕೋಡ್ ನೀಡುವಂತೆ ವೀರಶೈವ ಮಹಾಸಭಾ ಸಲ್ಲಿಸಿದ್ದ ಮನವಿಯನ್ನು ಅಂದಿನ ಕೇಂದ್ರ ಸರ್ಕಾರವೇ ತಳ್ಳಿ ಹಾಕಿದೆ. ಹೀಗಾಗಿಯೇ ಈಗ ಪ್ರತ್ಯೇಕ ಲಿಂಗಾಯತ ಮಹಾಸಭಾ ಸ್ಥಾಪಿಸುವ ಚಿಂತನೆ ಟಿಸಿಲೊಡೆದಿದ್ದು ರಾಜ್ಯ ಸರ್ಕಾರದ ಮೇಲೆ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ.
ವೀರಶೈವ ಲಿಂಗಾಯಿತ ಧರ್ಮ ಸ್ಥಾಪನೆಯ ಬೇಡಿಕೆ ಮಗ್ಗಲು ಬದಲಾಯಿಸುತ್ತಿರುವುದಕ್ಕೆ ಈಗ ಸ್ಪಷ್ಟ ಕಾರಣ ಸಿಕ್ಕಿದೆ. ಕೆಲವು ಸಮಯದ ಹಿಂದೆ ವೀರಶೈವ-ಲಿಂಗಾಯಿತ ಧರ್ಮದ ಬಗ್ಗೆ ಮಾತನಾಡುತ್ತಿದ್ದ ಲಿಂಗಾಯಿತ ಮುಖಂಡರು ಈಗ ಪ್ರತ್ಯೇಕ ಲಿಂಗಾಯಿತ ಧರ್ಮದ ಬಗ್ಗೆ ಮಾತ್ರ ಹೇಳತೊಡಗಿದ್ದಾರೆ. ಇದಕ್ಕೆ ಕಾರಣ ಕೂಡಾ ಇದೆ. 2013ರಲ್ಲೇ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ಮಾನ ಮತ್ತು ಜನಸಂಖ್ಯೆಯಲ್ಲಿ ಪ್ರತ್ಯೇಕ ಕೋಡ್ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ ಕೆಲವೊಂದು ಕಾರಣಗಳನ್ನು ನೀಡಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಅಂದಿನ ಯುಪಿಎ-2 ಸರ್ಕಾರ ಮನವಿಯನ್ನು ತಿರಸ್ಕರಿಸಿತ್ತು.
ಹೀಗಾಗಿಯೇ ಈಗ ವೀರಶೈವ ಪದವನ್ನೇ ಬಳಕೆ ಮಾಡದೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೇಡಿಕೆ ಇಡುವ ಹೆಜ್ಜೆ ಇಡಲಾಗಿದೆ. ವೀರಶೈವರು ಲಿಂಗಾಯಿತ ಧರ್ಮದ ಒಂದು ಭಾಗ ಅಷ್ಟೇ ಎಂದು ಪ್ರತಿಪಾದಿಸುವ ಮೂಲಕ ಇಂದು ಬೆಂಗಳೂರಿನಲ್ಲಿ ಸಭೆಯನ್ನೂ ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ.
ಲಿಂಗಾಯತ ಧರ್ಮ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಕೆಯಾಗಿದ್ದು ಧರ್ಮಯುದ್ಧ ಈಗ ರಾಜ್ಯ ಸರ್ಕಾರದ ಅಂಗಳ ತಲುಪಿದೆ. ರಾಜ್ಯ ಸರ್ಕಾರ ಈಗ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನ ಮಾನ ನೀಡಲಿ, ಬಳಿಕ ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲಿ ಎಂಬ ರಾಜತಾಂತ್ರಿಕ ಅಂಶವೂ ಸೇರಿಕೊಂಡಿದ್ದು, ರಾಜ್ಯ ಸರ್ಕಾರದ ಮೇಲೆ ಈಗ ಒತ್ತಡದ ಸನ್ನಿವೇಶ ಸೃಷ್ಟಿಯಾಗಿದೆ.
- ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.