
ನವದೆಹಲಿ(ಮೇ 20): ಕುಲಭೂಷಣ್ ಜಾಧವ್ ಮರಣದಂಡನೆ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕೋರ್ಟ್'ನಲ್ಲಿ ಪಾಕಿಸ್ತಾನದ ಪರ ವಾದಿಸುತ್ತಿರುವ ಖವರ್ ಖುರೇಷಿ ಅವರು ಹಿಂದೊಮ್ಮೆ ಭಾರತದ ಪರ ವಕಾಲತು ವಹಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. 2004ರಲ್ಲಿ ದಾಭೋಲ್ ವಿದ್ಯುತ್ ಯೋಜನೆ ವಿವಾದ ಸಂಬಂಧ ಭಾರತದ ಪರ ವಾದಿಸಲು ಯುಪಿಎ ಸರಕಾರವು ಪಾಕ್ ವಕೀಲ ಖುರೇಷಿಯನ್ನು ನೇಮಕ ಮಾಡಿಕೊಂಡಿತ್ತು. ಆದರೆ, ಆ ಪ್ರಕರಣದಲ್ಲಿ ಖುರೇಷಿಗೆ ಭಾರತವನ್ನು ಗೆಲ್ಲಿಸಿಕೊಡಲಾಗಲಿಲ್ಲ.
ಏನಿದು ದಾಭೋಲ್ ಪ್ರಕರಣ?
ಎನ್ರಾನ್ ಸಂಸ್ಥೆಯು ಮಹಾರಾಷ್ಟ್ರದಲ್ಲಿ ದಾಭೋಲ್ ವಿದ್ಯುತ್ ಉತ್ಪಾದನಾ ಘಟನೆ ಸ್ಥಾಪಿಸುವ ಪ್ರಸ್ತಾವನೆ ಮಾಡಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪರಿಸರವಾದಿಗಳ ವಿರೋಧದಿಂದಾಗಿ ಯೋಜನೆಯನ್ನು ಸರಕಾರ ಕೈಬಿಟ್ಟಿತ್ತು. ಆದರೆ, ತಾನು ಘಟಕ ಸ್ಥಾಪಿಸಲು ಸಾಕಷ್ಟು ವೆಚ್ಚ ಮಾಡಿರುವುದಾಗಿ ಹೇಳಿ ಎನ್ರೋ ಸಂಸ್ಥೆಯು 6 ಬಿಲಿಯನ್ ಡಾಲರ್ ನಷ್ಟ ಭರಿಸುವಂತೆ ಆಗ್ರಹಿಸಿ ಅಂತಾರಾಷ್ಟ್ರೀಯ ಕೋರ್ಟ್'ಗೆ ಹೋಯಿತು. ಆರಂಭದಲ್ಲಿ ಭಾರತದ ವಕೀಲರೇ ಪ್ರಕರಣದಲ್ಲಿ ವಕಾಲತು ವಹಿಸಿದ್ದರು. ಯುಪಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ವಕೀಲರನ್ನೂ ಬದಿಗಿಟ್ಟು ಪಾಕ್ ವಕೀಲ ಖವರ್ ಖುರೇಷಿಯವರನ್ನು ಕರೆತಂದಿತು. 2005ರಲ್ಲಿ ಕೋರ್ಟ್'ನಲ್ಲಿ ಭಾರತಕ್ಕೆ ಸೋಲಾಯಿತು. ಕಾಕತಾಳೀಯವೆಂದರೆ, ಕುಲಭೂಷಣ್ ವಿರುದ್ಧ ಪಾಕ್ ಪರ ವಾದ ಮಂಡಿಸಿದ ಖಮರ್ ಖುರೇಷಿಗೆ ಈಗಲೂ ಕೂಡ ಸೋಲುಂಟಾಗಿದೆ.
ದೇಶವನ್ನು ಪ್ರತಿನಿಧಿಸಲು ಪಾಕ್ ವಕೀಲರಿಗೆ ಮಣೆಹಾಕಿದ ಕ್ರಮವನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಖಮರ್ ಖುರೇಷಿ ಅವರು ಪಾಕಿಸ್ತಾನೀಯನೆನ್ನುವುದಕ್ಕಿಂತ ಅವರು ಸ್ವತಂತ್ರ ವಕೀಲರಾಗಿದ್ದಾರೆ. ಅಂತಾರಾಷ್ಟ್ರೀಯ ಪ್ರಕರಣಗಳಲ್ಲಿ ಬೇರೆ ದೇಶಗಳ ವಕೀಲರನ್ನು ನೇಮಿಸುವುದು ಸಾಮಾನ್ಯ. ಪಾಕಿಸ್ತಾನ ಕೂಡ ಭಾರತೀಯ ವಕೀಲರನ್ನು ನೇಮಿಸಿಕೊಳ್ಳುತ್ತದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
(ಮಾಹಿತಿ: ಝೀನ್ಯೂಸ್)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.