
ನವದೆಹಲಿ(ಆ.12): ಸ್ವಾತಂತ್ರ್ಯೋತ್ಸವ ದಿನದಂದು ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಅದರ ವಿಡಿಯೋ- ಫೋಟೋಗಳನ್ನು ಸೆರೆ ಹಿಡಿದು ಸಂಗ್ರಹಿಸುವಂತೆ ಉತ್ತರಪ್ರದೇಶದ ಬಿಜೆಪಿ ಸರ್ಕಾರವು ಮದರಸಾಗಳಿಗೆ ಹೊರಡಿಸಿರುವ ಆದೇಶವೊಂದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಇದು ದೇಶದ ಮುಸಲ್ಮಾನರಿಗೆ ಉತ್ತರಪ್ರದೇಶ ಸರ್ಕಾರ ಒಡ್ಡಿರುವ ‘ದೇಶಭಕ್ತಿ ಪರೀಕ್ಷೆ’ ಎಂಬ ಟೀಕೆಗಳೂ ಕೇಳಿಬಂದಿವೆ. ಆ.15ರ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಎಲ್ಲ ಮದರಸಾಗಳಿಗೂ ಉತ್ತರ ಪ್ರದೇಶ ಮದರಸಾ ಶಿಕ್ಷಣ ಪರಿಷದ್ ನಿರ್ದೇಶನವೊಂದನ್ನು ನೀಡಿದೆ. ಅಂದು ‘ಧ್ವಜಾರೋಹಣ, ರಾಷ್ಟ್ರಗೀತೆ ಜತೆಗೆ ಸಾಂಸ್ಕೃತಿಕ ಕಾರ್ಯ ಕ್ರಮ ಆಯೋಜಿಸಬೇಕು ಎಂದು ಕಟ್ಟಪ್ಪಣೆ ಹೊರಡಿಸಿದೆ.
ಈವರೆಗೆ ಮದರಸಾಗಳು ಧ್ವಜಾರೋಹಣ, ರಾಷ್ಟ್ರಗೀತೆ ಹಾಡಿ ಕಾರ್ಯ ಕ್ರಮವನ್ನು ಅಂತ್ಯಗೊಳಿಸುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಅಂದು ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಆಯೋಜಿಸಬೇಕು. ಜತೆಗೆ ಆ ಕಾರ್ಯಕ್ರಮದ ವಿಡಿಯೋ, ಫೋಟೋಗಳನ್ನು ತೆಗೆದು ಸಂಗ್ರಹಿಸಿಡಬೇಕು ಎಂದು ಮದರಸಾ ಶಿಕ್ಷಣ ಪರಿಷದ್ ಜಿಲ್ಲಾ ಅಲ್ಪಸಂಖ್ಯಾತ ಹಿತರಕ್ಷಣಾ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.
ಪರಿಷದ್ ವ್ಯಾಪ್ತಿಗೆ 8000 ಮದರಸಾಗಳು ಬರುತ್ತವೆ. 560 ಮದರಸಾಗಳಿಗೆ ಸರ್ಕಾರದ ಪೂರ್ಣ ಅನುದಾನವಿದೆ. ಯಾವ ರೀತಿ ಕಾರ್ಯಕ್ರಮ ಆಯೋಜಿಸಬೇಕು ಎಂಬ ಬಗ್ಗೆಯೂ ಸುತ್ತೋಲೆಯಲ್ಲಿ ಮಾಹಿತಿ ಇದೆ. ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಬೇಕು. ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕು. ರಾಷ್ಟ್ರೀಯತೆಯ ಗೀತೆಗಳನ್ನು ಹಾಡಿ, ಆ.15 ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸದ ಬಗ್ಗೆ ಚರ್ಚಿಸಬೇಕು. ರಾಷ್ಟ್ರೀಯ ಐಕ್ಯತೆ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ಹಂಚಬೇಕು ಎಂದು ಹಿಂದಿ ಹಾಗೂ ಉರ್ದು ಎರಡರಲ್ಲೂ ಸುತ್ತೋಲೆ ಹೊರಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.