
ಲಕ್ನೋ(ಏ. 04): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ರಾಜ್ಯದ ಬಡ ರೈತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಇಂದು ಮಂಗಳವಾರ ತಮ್ಮ ಚೊಚ್ಚಲ ಸಂಪುಟ ಸಭೆ ಕರೆದ ಯೋಗಿ ಆದಿತ್ಯನಾಥ್, ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದಾರೆ. ಎಲ್ಲಾ ರೈತರ 1 ಲಕ್ಷದವರೆಗಿನ ಸಾಲಗಳನ್ನು ಮನ್ನಾ ಮಾಡಲು ಉ.ಪ್ರ. ಸಂಪುಟ ನಿರ್ಧರಿಸಿದೆ. ಉತ್ತರಪ್ರದೇಶದಂಥ ಬೃಹತ್ ರಾಜ್ಯದಲ್ಲಿ 1 ಲಕ್ಷ ಸಾಲ ಇರುವ ರೈತರ ಸಂಖ್ಯೆ 2.5 ಕೋಟಿ ಇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯೋಗಿ ನಿರ್ಧಾರ ಬಹುತೇಕ ಮಂದಿಗೆ ಬಂಪರ್ ಗಿಫ್ಟ್ ಎನಿಸಲಿದೆ. ಇದರೊಂದಿಗೆ ಬಿಜೆಪಿಯ ಮತ್ತೊಂದು ಚುನಾವಣಾ ಪ್ರಣಾಳಿಕೆಯ ಅಂಶ ಈಡೇರಿದಂತಾಗಿದೆ. ರೈತರ ಸಾಲ ಮನ್ನಾ ಕ್ರಮದಿಂದ ಉತ್ತರಪ್ರದೇಶ ಸರಕಾರಕ್ಕೆ 36 ಸಾವಿರ ಕೋಟಿ ರೂ ಹೊರೆಯಾಗುವ ನಿರೀಕ್ಷೆ ಇದೆ.
ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ರೈತರ ಸಾಲ ಮನ್ನಾವಷ್ಟೇ ಅಲ್ಲ, ಇತರ ಮಹತ್ವದ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ಆ್ಯಂಟಿ-ರೋಮಿಯೋ ತಂಡಗಳ ರಚನೆಗೆ ಹಾಗೂ ಗೋವಧಾಗೃಹಗಳ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಇದರ ಜೊತೆಗೆ, ಉ.ಪ್ರ.ದ ರೈತರ ಎಲ್ಲಾ ಗೋದಿ ಬೆಳೆಗಳನ್ನೂ ಸರಕಾರವೇ ಖರೀದಿಸಲಿದೆ.
ಯೋಗಿ ಸಂಪುಟದಲ್ಲಿ ಏನೇನು ಕ್ರಮ?
* ರೈತರ ಒಂದು ಲಕ್ಷದವರೆಗಿನ ಸಾಲ ಮನ್ನಾ
* ಆ್ಯಂಟಿ-ರೋಮಿಯೋ ತಂಡ ರಚನೆಗೆ ಸುಗ್ರೀವಾಜ್ಞೆ
* ಗೋವಧಾಗೃಹಗಳ ನಿಷೇಧಕ್ಕೆ ಸುಗ್ರೀವಾಜ್ಞೆ
* ರೈತರ ಗೋದಿ ಬೆಳೆಗಳ ಸಂಪೂರ್ಣ ಖರೀದಿ
* ಘಾಜಿಯಾಪುರದಲ್ಲಿ ಸ್ಪೋರ್ಟ್ಸ್ ಸ್ಟೇಡಿಯಂ ಸ್ಥಾಪನೆ
* ಬುಂಡೇಲ್'ಖಂಡ್ ಪ್ರದೇಶಕ್ಕೆ 47 ಕೋಟಿ ತುರ್ತು ನಿಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.