ಮಾತೃಪೂರ್ಣಕ್ಕೆ ಅಡ್ಡಿಯಾಯ್ತು ಅಸ್ಪೃಶ್ಯತೆ

By Suvarna Web DeskFirst Published Nov 19, 2017, 11:45 AM IST
Highlights

ಕಡತಿ ಕ್ಯಾಂಪ್‌ನಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮೂರು ತಿಂಗಳ ಹಿಂದೆ ಹರಿಜನ ಜನಾಂಗದ ಮಹಿಳೆ ಅಂಜಿನಮ್ಮ ಎಂಬಾಕೆಯನ್ನು ಅಡುಗೆ ಸಹಾಯಕಿಯಾಗಿ ನೇಮಕ ಮಾಡಿದ ದಿನದಿಂದ ಯಾರೊಬ್ಬರೂ ಊಟಕ್ಕೆ ಬರುತ್ತಿಲ್ಲ.18 ಜನ ಗರ್ಭಿಣಿಯರಲ್ಲಿ ಈಗಿರುವ ಅಡುಗೆ ಸಹಾಯಕಿಯ ಜನಾಂಗದ 6 ಜನರು ಮಾತ್ರ ಊಟಕ್ಕೆ ಬರುತ್ತಿದ್ದಾರೆ.​

ಹರಪನಹಳ್ಳಿ(ನ.19) ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಠಿಕಾಂಶದ ಕೊರತೆ ನೀಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆ ಅಸ್ಪಶ್ಯತೆಯಿಂದಾಗಿ ಹಿನ್ನಡೆ ಅನುಭವಿಸುತ್ತಿರುವ ಘಟನೆ ತಾಲೂಕಿನ ಕಡತಿ ಗ್ರಾಮದಲ್ಲಿ ಕಂಡುಬಂದಿದೆ.

ಕಡತಿ ಕ್ಯಾಂಪ್‌ನಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮೂರು ತಿಂಗಳ ಹಿಂದೆ ಹರಿಜನ ಜನಾಂಗದ ಮಹಿಳೆ ಅಂಜಿನಮ್ಮ ಎಂಬಾಕೆಯನ್ನು ಅಡುಗೆ ಸಹಾಯಕಿಯಾಗಿ ನೇಮಕ ಮಾಡಲಾಗಿದೆ. ಮಕ್ಕಳ ಸಂಖ್ಯೆ 30 ಇದ್ದು, ಬಾಣಂತಿಯರು 17, ಗರ್ಭಿಣಿಯರು 18 ಜನ ಕೇಂದ್ರದ ವ್ಯಾಪ್ತಿಗೆ ಬರುತ್ತಾರೆ.

ಮೊಟ್ಟೆ, ಮೊಳಕೆ ಕಾಳು, ಹಾಲು, ಶೇಂಗ ಚಿಕ್ಕಿ, ಅನ್ನ ಸಾಂಬರು ಹೀಗೆ ಗರ್ಭಿಣಿಯರು, ಬಾಣಂತಿಯರಿಗೆ ಮಧ್ಯಾಹ್ನ ಮಾತ್ರ ಪೌಷ್ಠಿಕ ಆಹಾರ ನೀಡಲಾಗುತ್ತಿದೆ, ಮೊದಲಿಗೆ ಎಲ್ಲಾ ಬಾಣಂತಿಯರು, ಗರ್ಭಿಣಿಯರು ಕಡ್ಡಾಯವಾಗಿ ಊಟಕ್ಕೆ ಬರುತ್ತಿದ್ದರು. ಹಿಂದೆ ಇದ್ದ ಅಡುಗೆ ಸಹಾಯಕಿ ಕೆಲಸ ಬಿಟ್ಟ ನಂತರ ಹೊಸದಾಗಿ ಅಂಜಿನಮ್ಮ ಎಂಬ ಮಹಿಳೆಯನ್ನು ನೇಮಕ ಮಾಡಲಾಗಿದೆ. ಅಂದಿನಿಂದ ಯಾರೊಬ್ಬರೂ ಬರುತ್ತಿಲ್ಲ. 18 ಜನ ಗರ್ಭಿಣಿಯರಲ್ಲಿ ಈಗಿರುವ ಅಡುಗೆ ಸಹಾಯಕಿಯ ಜನಾಂಗದ 6 ಜನರು ಮಾತ್ರ ಊಟಕ್ಕೆ ಬರುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಹೊಸ ಅಡುಗೆ ಸಹಾಯಕಿ ಅಂಜಿನಮ್ಮ, ನಾನು ಬಂದ ನಂತರ ಕೆಲವರು ಬರುತ್ತಿಲ್ಲ. ವಿದ್ಯಾರ್ಥಿಗಳು ಸಹ ಕಡಿಮೆಯಾಗಿದ್ದಾರೆ ಎಂದು ಹೇಳಿದ್ದಾರೆ. ಅಂಗನವಾಡಿ ಕೇಂದ್ರದ ಅಡುಗೆ ಸಹಾಯಕಿಯನ್ನು ಬದಲಾವಣೆ ಮಾಡಿ ಇಲ್ಲವೇ ಬಹಳ ದಿನಗಳ ಹಿಂದೆ ಇದ್ದಂತಹ ಪದ್ದತಿ ಮನೆಗೆ ರೇಷನ್ ಕೊಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಗ್ರಾಮದ ಮಹಿಳೆಯರು ಮನವಿ ಮಾಡಿದ್ದಾರೆ.

click me!