ಪಟೇಲರು ಇಲ್ಲದಿದ್ರೆ ಕೇರಳಕ್ಕೂ ವೀಸಾ ಬೇಕಿತ್ತು!

By Web DeskFirst Published Oct 31, 2018, 11:48 AM IST
Highlights

ಹರಿದು ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿ ಭಾರತದ ಭೂಪಟದ ಅಡಿಯಲ್ಲಿ ತರಲು ಶ್ರಮಿಸಿದ ಉಕ್ಕಿನ ಮನುಷ್ಯ | ಪಟೇಲರು ಇಲ್ದಿದ್ರೆ ಕೇರಳಕ್ಕೂ ವೀಸಾ ಬೇಕಿತ್ತು! 

ಬೆಂಗಳೂರು (ಅ. 31): ಭಾರತ ಸ್ವಾತಂತ್ರ್ಯಸಂಗ್ರಾಮದ ಇತಿಹಾಸದಲ್ಲಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಅವರವರ ಹೋರಾಟದ ಪಾತ್ರದಂತೆ ನ್ಯಾಯ ಸಿಗಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ 584 ಚಿಕ್ಕ ಪುಟ್ಟ ರಾಜರು, ಪಾಳೇಗಾರರ ಅಡಿಯಲ್ಲಿ ಹಂಚಿ ಹೋಗಿದ್ದ ಭಾರತವನ್ನು ಒಂದುಗೂಡಿಸಿ, ಭಾರತದ ಇಂದಿನ ಭೂಪಟವನ್ನು ರಚಿಸಿಕೊಟ್ಟ ಶ್ರೇಯಸ್ಸು ಈ ದೇಶದ ಪ್ರಪ್ರಥಮ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ.

ಸ್ವಾತಂತ್ರ್ಯ ಹೇಗೆ ಬಂತು?

ಪರಂಪರಾಗತವಾಗಿ ತಮಗೆ ಸಿಕ್ಕ, ತಮ್ಮ ಜೊತೆಗೆ ಬಂದಂತಹ ತಮ್ಮ ಅರಸೊತ್ತಿಗೆಯನ್ನು, ಅಧಿಕಾರವನ್ನು ಈ ದೇಶದ ಏಕೀಕರಣಕ್ಕಾಗಿ ಬಿಟ್ಟುಕೊಡುವುದು ಮತ್ತು ಬಿಟ್ಟುಕೊಡುವಲ್ಲಿ ಮನವೊಲಿಸುವುದು ಸಾಮಾನ್ಯ ಕೆಲಸವಲ್ಲ. ಆ ರೀತಿ ಮನವೊಲಿಸುವ ಕೆಲಸ ಮಾಡಿದ್ದು ಯಾರು ಎನ್ನುವ ವಿಚಾರ ಇಂದಿನ ಪೀಳಿಗೆಯ ಬಹುತೇಕರಿಗೆ ಗೊತ್ತಿಲ್ಲ. ನಾವು ನಮ್ಮ ದೇಶದ ಸ್ವಾತಂತ್ಯ್ರದ ಇತಿಹಾಸ ತಿಳಿದುಕೊಳ್ಳ ಬೇಕಾದರೆ ಅನೇಕ ಪ್ರಮುಖವಾದ ಘಟನೆಗಳನ್ನು ಓದುತ್ತೇವೆ.

ಸ್ವಾತಂತ್ರ್ಯ ಹೇಗೆ ಬಂತು ಅಂತ ಕೇಳಿದರೆ ಅದು ಅಹಿಂಸಾ ಸತ್ಯಾಗ್ರಹದಿಂದ ಬಂತು ಅಂತ ಓದಿರುತ್ತೇವೆ. ಅಹಿಂಸಾ ಸತ್ಯಾಗ್ರಹದಿಂದ ಬಂದಿದ್ದು ಸುಳ್ಳಾ ಅಂದರೆ ಅದು ಖಂಡಿತಾ ಸುಳ್ಳಲ್ಲ. ಆದರೆ ಅದು ಕೇವಲ ಅಹಿಂಸಾ ಸತ್ಯಾಗ್ರಹ ಒಂದರಿಂದಲೇ ಬಂದಿದ್ದು ಅಂದರೆ ಅದು ಕ್ರಾಂತಿಕಾರಿಗಳಿಗೆ, ತಮ್ಮ ಇಡೀ ಜೀವನವನ್ನೇ ಭಾರತಾಂಬೆಯ ಮಡಿಲಿಗೆ ಅರ್ಪಣೆ ಮಾಡಿದ ಹೋರಾಟಗಾರರಿಗೆ, ಈ ದೇಶದಿಂದ ಹೊರಗೆ ಅಜಾದ್ ಹಿಂದ್‌ಫೌಜ್‌ನಂತಹ ಸೇನೆಯನ್ನು ಕಟ್ಟಿ ಬ್ರಿಟಿಷರ ಮೈ, ಮನಸ್ಸಿನಲ್ಲಿ ನಡುಕವನ್ನು ಹುಟ್ಟಿಸಿದ ಸುಭಾಷ್ ಚಂದ್ರ ಬೋಸ್‌ರವರಂತಹ ಅನೇಕ ಹೋರಾಟಗಾರರಿಗೆ ಪ್ರಾಯಶಃ ನಾವು ಮಾಡುವ ಅಪಮಾನವಾಗುತ್ತದೆ.

ಭಾರತವನ್ನು ಒಂದುಗೂಡಿಸಿದರು

ನಮಗೆ ಸ್ವಾತಂತ್ರ್ಯ ಬಂದಿದ್ದು ಹಲವು ಮುಖಗಳಿಂದ. ಅಲ್ಲಿ ಅಹಿಂಸಾ ಸತ್ಯಾಗ್ರಹವೂ ಒಂದು. ಅದರ ಜೊತೆಗೆ ಕ್ರಾಂತಿಕಾರರ ಹೋರಾಟದ ಪಾತ್ರ ಇರುವುದು ನಿರ್ವಿವಾದ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಾಗ ಬ್ರಿಟಿಷರು ತಮ್ಮ ಕುತಂತ್ರ ಬುದ್ಧಿಯನ್ನು ಬಿಡಲಿಲ್ಲ. ನಮ್ಮ ದೇಶವನ್ನು ಮತೀಯ ಆಧಾರದ ಮೇಲೆ ಒಡೆದು ಹಿಂದೂಗಳಿಗೆ ಭಾರತ ಮತ್ತು ಮುಸ್ಲಿಮರಿಗೆ ಪಾಕಿಸ್ತಾನ ಎಂದು ಮಾಡಿ ಅದರ ಜೊತೆಗೆ ಭಾರತದಲ್ಲಿ ಇದ್ದ ಸುಮಾರು ಐನೂರಕ್ಕೂ ಹೆಚ್ಚು ಚಿಕ್ಕ-ಚಿಕ್ಕ ರಾಜ ಮನೆತನಗಳಿಗೆ ಸ್ವಾತಂತ್ರ್ಯವನ್ನು ಕೊಟ್ಟು ಅವರವರಿಗೆ ಇಷ್ಟ ಬಂದಂತೆ ಪಾಕಿಸ್ತಾನಕ್ಕಾದರೂ ಸೇರಬಹುದು, ಭಾರತದೊಂದಿಗಾದರೂ ಸೇರಬಹುದು ಅಥವಾ ಸ್ವತಂತ್ರವಾಗಿಯಾದರೂ ಇರಬಹುದು ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ಕೊಟ್ಟು ಭಾರತ ಬಿಟ್ಟು ಹೋದರು. ಹೀಗೆ ಹಲವಾರು ದಿಕ್ಕಿಗೆ ಹರಿದು ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿದ್ದು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್.

ಈಗ ನಾನು ನಿಮಗೆ ಹೇಳಹೊರಟಿರುವುದು ಅವರ ಬಗ್ಗೆಯೇ. ಪಟೇಲರಿಗೆ ಸರ್ದಾರ್ ಅನ್ನುವ ಬಿರುದು ಕೊಟ್ಟಿದ್ದೇ ಜನಸಾಮಾನ್ಯರು. ಹೇಗೆ ಮೋಹನದಾಸ ಕರಮಚಂದ್ ಗಾಂಧಿಗೆ ಮಹಾತ್ಮ ಎನ್ನುವ ಅಭಿದಾನ ಜನರಿಂದ ಸಿಕ್ಕತೋ ಹಾಗೆಯೇ ಪಟೇಲರಿಗೆ ಸರ್ದಾರ್ ಅನ್ನುವ ಬಿರುದು ಸಿಕ್ಕಿದ್ದು ಕೂಡ ಜನರಿಂದ. ಇವರದ್ದು ಬಾಲ್ಯದಲ್ಲೇ ನೇರ ಮತ್ತು ನಿಷ್ಠುರ ಸ್ವಭಾವ.

ಜನನವಾದದ್ದು 1875 ಅಕ್ಟೋಬರ್ 31 ರಂದು ಅಂದಿನ ಮುಂಬೈ ಪ್ರೆಸಿಡೆನ್ಸಿಯ ನಾಡಿ ಯಾದ್ ಎಂಬ ಪ್ರದೇಶದಲ್ಲಿ, ಈಗ ಅದು ಗುಜರಾತ್ ರಾಜ್ಯದಲ್ಲಿ ಇದೆ.

ಶಿಕ್ಷಕರ ವಿರುದ್ಧವೇ ತಿರುಗಿ ಬಿದ್ದರು!

ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವ ನಾಣ್ಣುಡಿಯಂತೆ ಅವರ ವಿದ್ಯಾರ್ಥಿ ದೆಸೆಯಲ್ಲೊಮ್ಮೆ ಅಧ್ಯಾಪಕರು ತರಗತಿಯಲ್ಲಿ ಒಂದು ಪ್ರಶ್ನೆ ಕೇಳಿದರು. ಅದಕ್ಕೆ ಓರ್ವ ವಿದ್ಯಾರ್ಥಿ ನೀಡಿದ ಉತ್ತರ ತಪ್ಪಾಗಿತ್ತು. ಉತ್ತರವನ್ನು ಕೊಟ್ಟಿದ್ದು ತಪ್ಪಿದ್ದರೂ ಅದನ್ನ ಸರಿ ಅಂದರು ಅಧ್ಯಾಪಕರು. ಆಗ ಪಟೇಲರು ಉತ್ತರ ಸರಿಯಿಲ್ಲವೆಂದು ಎದ್ದು ನಿಂತು ಹೇಳಿದರು. ಅಂದಿನ ಕಾಲಕ್ಕೆ ವಿದ್ಯಾರ್ಥಿಯಿಂದ ಇಂಥ ಅವಿಧೇಯತೆಯನ್ನು ಸಹಿಸದ ಶಿಕ್ಷಕರು ಪಟೇಲರಿಗೆ, ‘ ನೀನು ನನಗೆ ಬುದ್ಧಿ ಹೇಳುತ್ತಿಯೋ? ಸರಿ ಹಾಗಾದರೆ. ನಿನಗೆ ಸರಿಯಾದ ಉತ್ತರ ಗೊತ್ತಿದ್ದರೆ ಆ ಉತ್ತರವನ್ನು ಬೋರ್ಡಿನಲ್ಲಿ ಬರೆದು ನನ್ನ ಕುರ್ಚಿಯಲ್ಲಿ ಬಂದು ಕೂರು’ ಎಂದು ವ್ಯಂಗ್ಯದಿಂದ ನುಡಿದರು.

ಪಟೇಲರು ಸರಿಯಾದ ಉತ್ತರವನ್ನು ಬೋರ್ಡಿನಲ್ಲಿ ಬರೆದು ಅಧ್ಯಾಪಕರ ಕುರ್ಚಿಯಲ್ಲಿ ಕೂತೇಬಿಟ್ಟರು! ಅಂಥ ವ್ಯಕ್ತಿತ್ವ ಅವರದು. 1917 ನೇ ಇಸವಿ ಇವರ ಜೀವನಕ್ಕೆ ತಿರುವು ಕೊಟ್ಟ ವರ್ಷ. 1917 ಅಕ್ಟೋಬರ್‌ನಲ್ಲಿ ಗುಜರಾತಿನ ಗೋಧ್ರಾದಲ್ಲಿ ನಡೆದ ರಾಜಕೀಯ ಮಹಾಸಭಾದಲ್ಲಿ ಗಾಂಧೀಜಿಯನ್ನು ಮೊಟ್ಟ ಮೊದಲ ಭಾರಿಗೆ ಭೇಟಿಯಾಗುತ್ತಾರೆ. ಅಲ್ಲಿ ಗಾಂಧೀಜಿ ಪಟೇಲರನ್ನು ಮಹಾಸಭಾದ ಕಾರ್ಯದರ್ಶಿಯಾಗಲು ಒಪ್ಪಿಸುತ್ತಾರೆ. ಇಲ್ಲಿಂದ ಇವರ ಸಕ್ರಿಯ ಸ್ವಾತಂತ್ರ್ಯ ಹೋರಾಟದ ಹಾದಿ ಆರಂಭವಾಗುತ್ತದೆ.

 ಸರ್ದಾರ್ ಬಿರುದು ನೀಡಿದ್ದು ಯಾರು?

ಗುಜರಾತಿನ ಬಾರ್ಡೋಲಿ ಎನ್ನುವ ಜಾಗದಲ್ಲಿ ಸುಮಾರು ಎಂಬತ್ತಸಾವಿರಕ್ಕೂ ಹೆಚ್ಚು ಜನರು ಒಟ್ಟಿಗೆ ಸೇರಿ ಬ್ರಿಟಿಷರ ತೆರಿಗೆ ನೀತಿಯನ್ನು ಸತ್ಯಾಗ್ರಹ, ನಿರಂತರ ಪ್ರತಿಭಟನೆಯ ಮೂಲಕ ವಿರೋಧಿಸಿದರು. ವರ್ಷಕ್ಕೂ ಹೆಚ್ಚು ಕಾಲ ಚಳುವಳಿ ನಡೆಸಿ ಬ್ರಿಟಿಷ್ ಸರ್ಕಾರ ತನ್ನ ತೆರಿಗೆ ಸಂಗ್ರಹಿಸುವ ಕೆಲಸವನ್ನು ನಿಲ್ಲಿಸುವಂತೆ ಮಾಡಿದರು. ಈ ಅದ್ಭುತ ಹೋರಾಟದ ನೇತೃತ್ವ ವಹಿಸಿದ್ದ ಪಟೇಲರಿಗೆ ಜನರೇ ಸರ್ದಾರ್ ಎನ್ನುವ ಬಿರುದನ್ನು ಕೊಟ್ಟರು.

ಮೊದಲ ಪ್ರಧಾನಿ ಆಗಬೇಕಿತ್ತು, ಆದರೆ..

ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಸುಮಾರು 500 ಕ್ಕೂ ಹೆಚ್ಚು ಚಿಕ್ಕ ಚಿಕ್ಕ ರಾಜರುಗಳ ಕೈಯಲ್ಲಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿ ಒಂದು ಭೂಪಟದ ಅಡಿಯಲ್ಲಿ ತರಲು ಸರ್ದಾರ ಪಟೇಲರು ಅಂದು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಸ್ವಾತಂತ್ರ್ಯದ ಬಳಿಕ ಎಲ್ಲವೂ ಪ್ರಜಾಪ್ರಭುತ್ವದ ಆಶಯದಂತೇ ನಡೆದಿದ್ದರೆ ಪಟೇಲರು ಈ ದೇಶದ ಮೊತ್ತ ಮೊದಲ ಪ್ರಧಾನಿ ಆಗಬೇಕಿತ್ತು. ಆದರೆ ಈ ದೇಶದ ಅದೃಷ್ಟವೋ, ದುರಾದೃಷ್ಟವೋ ಇವರು ಪ್ರಧಾನಿಯಾಗುವ ಬದಲು ದೇಶದ ಗೃಹ ಸಚಿವರಾದರು.

ದೇಶದಲ್ಲಿ ಆ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಯಾರಾಗುತ್ತಾರೋ ಅವರು ದೇಶದ ಪ್ರಧಾನಿ ಅನ್ನುವುದು ಸ್ವಾಭಾವಿಕವಾಗಿತ್ತು. ಆ ಸ್ಥಾನಕ್ಕೆ ಪಟೇಲರು ಮತ್ತು ನೆಹರು ಇಬ್ಬರು ಸ್ಪರ್ಧೆ ಮಾಡಿದರು.  ಅಂದಿನ 15 ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ 12 ಪ್ರದೇಶ ಕಾಂಗ್ರೆಸ್ ಸಮಿತಿಯವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷಗಿರಿಗೆ ಪಟೇಲ್ ಹೆಸರನ್ನು ಸೂಚಿಸಿದರು. ಇಬ್ಬರು ನೆಹರು ಅವರ ಪರವಾಗಿಯೂ, ಒಬ್ಬರು ತಟಸ್ಥವಾಗಿಯೂ ಉಳಿದರು. ಆದರೆ ಗಾಂಧೀಜಿಯವರು ವಹಿಸಿದ ಒಂದು ಮಧ್ಯಸ್ಥಿಕೆಯಲ್ಲಿ ಪಟೇಲರು ಆ ಸ್ಥಾನವನ್ನು ನೆಹರು ಅವರಿಗೆ ಬಿಟ್ಟುಕೊಟ್ಟರು.

ಅಧಿಕಾರದ ಹಿಂದೆ ಬಿದ್ದವರಲ್ಲ

ಪಟೇಲರು ಯಾವತ್ತೂ ಅಧಿಕಾರದ ಹಿಂದೆ ಬಿದ್ದವರಲ್ಲ. ಗಾಂಧಿ ಯವರು ಹೇಳಿದಂತೆ ಪ್ರಧಾನಿ ಹುದ್ದೆಯನ್ನು ಬಿಟ್ಟು ಕೊಟ್ಟರೂ ಭಾರತೀಯರ ಅದೃಷ್ಟಕ್ಕೆ ಅವರು ಈ ದೇಶದ ಗೃಹಮಂತ್ರಿ ಆದರು. ಅವರೇ ಸ್ವತಂತ್ರ ಭಾರತದ ಸೈನ್ಯದ ಮಹಾ ದಂಡನಾಯಕರೂ ಆದರು. ಬ್ರಿಟಿಷರ ಕುಟಿಲ ರಾಜಕಾರಣಕ್ಕೆ ಹರಿದು ಹಂಚಿಹೋಗಿದ್ದ ಭಾರತವನ್ನು ಒಂದಾಗಿಸುವ ಐತಿಹಾಸಿಕ ಕೆಲಸವನ್ನು ಕೈಗೆತ್ತಿಕೊಂಡರು.  ಮಾತಿಗೆ ಬಗ್ಗುವ ರಾಜರನ್ನು ಒಪ್ಪಿಸಿ ಭಾರತದ ಒಳಗೆ ಸೇರಿಸಿಕೊಂಡರೆ,  ಮಾತಿಗೆ ಬಗ್ಗದ ಹೈದರಾಬಾದಿನ ನಿಜಾಮನಂತವರ ಕೋಟೆಯ ಒಳಗೆ ಸೈನ್ಯವನ್ನು ನುಗ್ಗಿಸಿ ಅಂತಹ ಪ್ರಾಂತ್ಯವನ್ನು ಬಲವಂತವಾಗಿ ಭಾರತೀಯ ಒಕ್ಕೂಟದ ಒಳಗೆ ಸೇರಿದರು.

ಇವರು ಈ ದೇಶದ ಗೃಹಸಚಿವರಾದದ್ದು ನಮ್ಮ ಅದೃಷ್ಟ. ಒಂದು ವೇಳೆ ಇವರು ದೇಶದ ಗೃಹ ಸಚಿವರಾಗದೇ ಇದ್ದಿದ್ದರೆ ಈ ದೇಶ ಇಂದು ಛಿದ್ರ ಛಿದ್ರ ಆಗಿಬಿಡುತ್ತಿತ್ತೇನೊ. ನಮಗೆ ಕರ್ನಾಟಕ ದಿಂದ ಕೇರಳಕ್ಕೆ, ಕೇರಳದಿಂದ ತಮಿಳುನಾಡಿಗೆ ಹೋಗಲು ವೀಸಾ ಬೇಕಾಗುತ್ತಿತ್ತೇನೋ. ಅಖಂಡ ರಾಷ್ಟ್ರಪ್ರೇಮ ಮತ್ತು ಸ್ವತಂತ್ರ ಭಾರತ ದ ರಾಜಕೀಯ ಏಕೀಕರಣವನ್ನು ಸಾಧಿಸಿ ತೋರಿಸಿದ ರೀತಿಗೆ ಭಾರತೀ ಯರು ಅವರನ್ನು ಪ್ರೀತಿಯಿಂದ ‘ಉಕ್ಕಿನ ಮನುಷ್ಯ’ ಎಂದು ಕರೆಯುವುದು.

ಇದೇ ಕಾರಣಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ನರ್ಮದಾ ನದಿಗೆ ಕಟ್ಟಿರುವ ಸರ್ದಾರ್ ಸರೋವರ ಅಣೆಕಟ್ಟೆಯ ಸಮೀಪದಲ್ಲಿ ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಪ್ರತಿಮೆಯನ್ನು ಅವರ ಜನ್ಮದಿನವಾದ ಇದೆ ಅಕ್ಟೋಬರ್ 31 ಕ್ಕೆ ಅನಾವರಣ ಮಾಡಲಿದ್ದಾರೆ.

- ಸಿ ಟಿ ರವಿ , ಬಿಜೆಪಿ ಮುಖಂಡ 

click me!