
ಲಖನೌ: ಮೇಲ್ಜಾತಿಯಲ್ಲಿರುವ ಬಡವರಿಗೂ ಶೇ.25ರಷ್ಟು ಪ್ರಮಾಣದ ಮೀಸಲು ಕಲ್ಪಿಸುವ ಮಹತ್ವದ ಮಸೂದೆ ಮಂಡನೆಗೆ ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣದ ರಾಜ್ಯ ಸಚಿವ ರಾಮದಾಸ್ ಅಠಾವಳೆ ಮುಂದಾಗಿದ್ದಾರೆ. ಅಲ್ಲದೆ, ಶೇ.50ರಷ್ಟುಸೀಮಿತವಾಗಿರುವ ಮೀಸಲಾತಿಯನ್ನು ಶೇ.75ರಷ್ಟುಹೆಚ್ಚಿಸುವ ಅಂಶವೂ ಇದರಲ್ಲಿ ಸೇರಿದೆ.
ಈ ಬಗ್ಗೆ ಶುಕ್ರವಾರ ಮಾತನಾಡಿದ ಅಠಾವಳೆ, ‘ಮೇಲ್ಜಾತಿಯಲ್ಲಿರುವ ಬಡವರಿಗೂ ಶೇ.25ರಷ್ಟುಮೀಸಲಾತಿ ಕಲ್ಪಿಸುವ ಮಸೂದೆ ಅನುಮೋದನೆಯಾದಲ್ಲಿ, ಅದರಿಂದ ಎಲ್ಲರೂ ಪ್ರಯೋಜನೆ ಪಡೆದುಕೊಳ್ಳಲಿದ್ದಾರೆ. ಈ ಮೂಲಕ ದಲಿತರು ಮಾತ್ರವೇ ಮೀಸಲಾತಿ ಪಡೆದುಕೊಳ್ಳುತ್ತಾರೆ. ನಮಗೆ ಅಂಥ ಸೌಲಭ್ಯವಿಲ್ಲ ಎಂಬ ಮೇಲ್ಜಾತಿ ಬಡವರ ಅಸಮಾಧಾನ ನೀಗಲಿದೆ,’ ಎಂದರು.
ಇನ್ನು ಮೀಸಲು ಪ್ರಮಾಣ ಶೇ.50ರಿಂದ ಶೇ.75ಕ್ಕೆ ಏರಿಕೆಯಾದಲ್ಲಿ, ಎಲ್ಲರಿಗೂ ಅನುಕೂಲವಾಗಲಿದೆ. ಹಾಗಾಗಿ, ಸರ್ಕಾರದ ಈ ಮಹತ್ಕಾರ್ಯಕ್ಕೆ ಎಲ್ಲ ಪಕ್ಷಗಳು ಬೆಂಬಲ ನೀಡಬೇಕು ಎಂದು ಅವರು ಕೋರಿದರು. ಚಳಿಗಾಲ ಸಂಸತ್ ಅಧಿವೇಶನದಲ್ಲಿ ಸರ್ಕಾರ ಈ ಕುರಿತಾದ ಮಸೂದೆ ಮಂಡಿಸಬಹುದು ಎಂದು ಅವರು ಹೇಳಿದರು.
ಎಸ್‌ಸಿ/ಎಸ್‌ಟಿ ಕಾಯ್ದೆ ತಿದ್ದುಪಡಿ ಇಲ್ಲ:
ಇನ್ನು, ದಲಿತರ ಮೇಲಿನ ದೌರ್ಜನ್ಯಕ್ಕೆ ತಕ್ಷಣ ಬಂಧಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಅಮಾನತಿನಲ್ಲಿಡುವ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆ ವಿರುದ್ಧ ಮೇಲ್ವರ್ಗದವರು ಗುರುವಾರ ಕೈಗೊಂಡಿದ್ದ ‘ಭಾರತ್ ಬಂದ್’ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕಾನೂನನ್ನು ಪರಿಷ್ಕರಣೆ ಮಾಡುವ ಪ್ರಶ್ನೆಯೇ ಇಲ್ಲ. ಕಾಯ್ದೆ ತಿದ್ದುಪಡಿಗೆ ಆಗ್ರಹಿಸುವ ಬದಲಿಗೆ, ಮೇಲ್ವರ್ಗದವರು, ದಲಿತರ ಕುರಿತಾದ ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.