‘ಮೈತ್ರಿ ನಾಯಕರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ’

By Web DeskFirst Published Jul 22, 2019, 7:45 AM IST
Highlights

ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮೈತ್ರಿ ಶಾಸಕರು ಅತೃಪ್ತರಾಗಿ ಮುಂಬೈ ಸೇರಿದ್ದು ಈ ಸಾಲಿಗೆ ಇನ್ನಷ್ಟು ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಬೆಂಗಳೂರು [ಜು.22] :  ಸೋಮವಾರ ಮೈತ್ರಿ ಸರ್ಕಾರದ ಸಂಖ್ಯಾಬಲ ಮತ್ತಷ್ಟುಕುಸಿಯುವ ಸಾಧ್ಯತೆಗಳಿವೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸಮತಕ್ಕೆ ಸಂಖ್ಯಾಬಲವಿಲ್ಲದಿದ್ದರೂ ಕಾಂಗ್ರೆಸ್‌- ಜೆಡಿಎಸ್‌ ನಾಯಕರು ಅಧಿಕಾರಕ್ಕಾಗಿ ಸಂವಿಧಾನ ಮತ್ತು ಪ್ರಜಾತಂತ್ರಕ್ಕೆ ಅಗೌರವ ತರುತ್ತಿರುವುದು ನಾಚಿಗೇಡಿನ ಸಂಗತಿಯಾಗಿದೆ. ಆಡಳಿತ ಪಕ್ಷವಾಗಿ ಕಾಂಗ್ರೆಸ್‌ ಸದಸ್ಯರು ಸದನಕ್ಕೆ ಇಳಿಯುವುದು, ಕ್ಲುಲ್ಲಕ ಕಾರಣಕ್ಕೆ ಆರೋಪಗಳನ್ನು ಮಾಡುವುದು ಹಾಗೂ ರಾಜ್ಯಪಾಲರ ಆದೇಶಗಳನ್ನು ಧಿಕ್ಕರಿಸುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡುವುದು ಇವೆಲ್ಲ ಸರಿಯಲ್ಲ ಎಂದು ಟೀಕಿಸಿದರು.

ಮೈತ್ರಿ ಸರ್ಕಾರದ ಸಂಖ್ಯೆ ನೂರಕ್ಕಿಂತ ಕಡಿಮೆ ಸಂಖ್ಯೆಗೆ ಕುಸಿಯುತ್ತಿದೆ. ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲವೆಂಬುದು ಜಾಗತಿಕ ಸತ್ಯವಾಗಿದೆ. ಆದರೂ ಅಧಿಕಾರಕ್ಕಾಗಿ ಕಾಂಗ್ರೆಸ್‌- ಜೆಡಿಎಸ್‌ ನಾಚಿಗೇಡಿನ ನಡೆ ಇರಿಸುತ್ತಿವೆ. ಈ ಮೂಲಕ ಅಧಿಕಾರಕ್ಕಾಗಿ ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವಕ್ಕೆ ಗೌರವ ತರುವ ರೀತಿಯಲ್ಲಿ ಬಿಜೆಪಿ ಸದನದ ಒಳಗೆ ಹಾಗೂ ಹೊರಗೆ ನಡೆದುಕೊಳ್ಳುತ್ತಿದೆ. ಸಂವಿಧಾನಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ನಡೆದುಕೊಳ್ಳುತ್ತಿದೆ. ಹೀಗಾಗಿ, ಸುಪ್ರೀಂಕೋರ್ಟ್‌ ನ್ಯಾಯದ ಪರವಾಗಿ ತೀರ್ಪು ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

click me!