ವಿದೇಶಕ್ಕೆ ತೆರಳಿ ಓದಲು ಇದೀಗ ಸರ್ಕಾರವೇ ಹಣ ನೀಡುತ್ತೆ. ಆದರೆ ಹಣ ಪಡೆದುಕೊಂಡವರು ಮತ್ತೆ ದೇಶಕ್ಕೆ ಮರಳುವುದು ಕಡ್ಡಾಯವಾಗಿದೆ.
ನವದೆಹಲಿ [ಜು.1]:ಉನ್ನತ ವ್ಯಾಸಂಗ ಅಥವಾ ಉದ್ಯೋಗಕ್ಕಾಗಿ ದೇಶದ ಪ್ರತಿಭೆಗಳು ವಿದೇಶಕ್ಕೆ ಹೋಗಿ, ಅಲ್ಲೇ ನೆಲೆ ನಿಲ್ಲುವ ‘ಪ್ರತಿಭಾ ಪಲಾಯನ’ ಸಮಸ್ಯೆಯನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ಕಾರ್ಯಕ್ರಮವೊಂದನ್ನು ರೂಪಿಸಲು ಮುಂದಾಗಿದೆ. ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಮಾಡಬಯಸುವವರಿಗೆ ಸ್ಕಾಲರ್‌ಶಿಪ್ ನೀಡಲು ಹೊರಟಿದೆ. ಆದರೆ ಈ ರೀತಿ ಸ್ಕಾಲರ್‌ಶಿಪ್ ಪಡೆದವರು, ವ್ಯಾಸಂಗ ಮುಗಿದ ಬಳಿಕ ತವರಿಗೆ ಬಂದು ಕೆಲಸ ಮಾಡುತ್ತೇವೆ ಎಂಬ ಮುಚ್ಚಳಿಕೆ ಬರೆದುಕೊಡಬೇಕು ಎಂಬ ಷರತ್ತು ಇರುತ್ತದೆ.
ಮಾನವ ಸಂಪನ್ಮೂಲ ಸಚಿವಾಲಯದ ಯೋಜನೆ ಇದಾಗಿದ್ದು, ಶಿಕ್ಷಣ ಮತ್ತು ಆರ್ಥಿಕ ಪ್ರೋತ್ಸಾಹದ ಮೂಲಕ ಪ್ರತಿಭೆಗಳನ್ನು ಭಾರತಕ್ಕೆ ಆಕರ್ಷಿಸುವ ಗುರಿ ಹೊಂದಿದೆ. ಇದಕ್ಕಾಗಿ ಆಡಳಿತಾತ್ಮಕ ತೊಂದರೆಗಳನ್ನು ಹೋಗಲಾಡಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
40 ವರ್ಷದೊಳಗಿನ ಭಾರತೀಯ ಶಿಕ್ಷಣ ತಜ್ಞರು ಹಾಗೂ ವಿದ್ವಾಂಸರನ್ನು ಗುರಿಯಾಗಿಸಿಕೊಂಡು ಈ ಯೋಜನೆ ರೂಪಿಸಲಾಗುತ್ತಿದೆ. ಭಾರತವನ್ನು ನಾವೀನ್ಯತಾ ಹಬ್ ಆಗಿಸಲು ಉನ್ನತ ದರ್ಜೆಯ ಸಂಶೋಧಕರು ಹಾಗೂ ವಿದ್ವಾಂಸರ ಅಗತ್ಯವಿದೆ. ಇದಕ್ಕಾಗಿ ವಿಶ್ವದ 200 ಉನ್ನತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ. ವ್ಯಾಸಂಗ ಮುಗಿಸಿ ಬಂದವರಿಗೆ ಅವರು ಬಯಸಿದ ಭಾರತೀಯ ಶಿಕ್ಷಣ ಸಂಸ್ಥೆಯಲ್ಲಿ ಬೋಧಕರಾಗಲು ಅವಕಾಶ ನೀಡಿ, ‘ಪ್ರಧಾನಿ ಯುವ ವಿದ್ವಾಂಸ’ ಎಂಬ ಬಿರುದು ಕೂಡ ನೀಡಲಾಗುತ್ತದೆ ಎಂದು ಅಧಿಕಾರಿ ವಿವರಿಸಿದ್ದಾರೆ.