ಈ ಆಯುರ್ವೇದ ವೈದ್ಯರ ಶುಲ್ಕ 5ರು. ಮಾತ್ರ!

By Web DeskFirst Published Jul 1, 2019, 9:50 AM IST
Highlights

ಅಪರೂಪದ ವೈದ್ಯ ಹುಬ್ಬಳ್ಳಿಯ ಡಾ.ಹೊನ್ನಳ್ಳಿ | ಈ ಆಯುರ್ವೇದ ವೈದ್ಯರ ಶುಲ್ಕ 5ರು. ಮಾತ್ರ!  ಭಾನುವಾರವೂ ಸೇರಿ ಬೆಳಗ್ಗೆ 7ರಿಂದ 11ರ ತನಕ ಬಾಗಿಲು ಮುಚ್ಚದ ಕ್ಲಿನಿಕ್‌

ಹುಬ್ಬಳ್ಳಿ (ಜು. 01): ಅನಾರೋಗ್ಯವೆಂದು ತಪಾಸಣೆಗೆ ಹೋದರೆ ಕನ್ಸಲ್ಟೇಶನ್‌ ಶುಲ್ಕದ ಹೆಸರಲ್ಲಿ ನೂರಾರು ರು. ಪಡೆಯುವ ಕ್ಲಿನಿಕ್‌, ಆಸ್ಪತ್ರೆಗಳಿರುವ ಈ ಕಾಲದಲ್ಲಿ ಕೇವಲ .5 ಪಡೆಯುವ ವೈದ್ಯರೊಬ್ಬರು ಇದ್ದಾರೆ!

ಹೌದು, ಅಪರೂಪದ ವೈದ್ಯರು ಇವರು. ಹುಬ್ಬಳ್ಳಿಯ ಭೂಸಪೇಟೆಯಲ್ಲಿ ‘ಬಸವ ಕ್ಲಿನಿಕ್‌’ ಇಟ್ಟುಕೊಂಡಿರುವ ಡಾ.ವೀರಭದ್ರಪ್ಪ ರುದ್ರಪ್ಪ ಹೊನ್ನಳ್ಳಿ ಅಕ್ಷರಶಃ ಬಡವರ ಬಂಧುವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ವೀರಭದ್ರಪ್ಪ ಅವರು ಅಲ್ಲಿನ ಬಸವೇಶ್ವರ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಬಳಿಕ ಎಂಬಿಬಿಎಸ್‌ ಅಥವಾ ಆಯುರ್ವೇದ ಕಲಿಯಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದಕ್ಕೆ ತಂದೆ ರುದ್ರಪ್ಪ ಆಯುರ್ವೇದವನ್ನೇ ಕಲಿಯುವಂತೆ ಸಲಹೆ ನೀಡಿದರು. ಹುಬ್ಬಳ್ಳಿಯ ಗಣೇಶಪೇಟೆಯಲ್ಲಿದ್ದ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ಕೋರ್ಸ್‌ (ಎಬಿ) ಮುಗಿಸಿದರು. ಈ ಕೋರ್ಸ್‌ ಈಗ ಬಿಎಎಂಎಸ್‌ ಎಂದಾಗಿದೆ. ಬಳಿಕ ಇಲ್ಲಿನ ಕೆಎಂಸಿಯಲ್ಲಿ ಹೌಸ್‌ ಸರ್ಜನ್‌ ಕೋರ್ಸ್‌ ಕೂಡ ಮುಗಿಸಿಕೊಂಡಿದ್ದಾರೆ.

5 ಕ್ಲಿನಿಕ್‌ಗಳು:

ವೈದ್ಯಕೀಯ ಪದವಿ ಪಡೆದು ತಂದೆ ಬಳಿ ಹೋಗಿದ್ದಾಗ ವೈದ್ಯವೃತ್ತಿಯಲ್ಲಿ ಜನಸೇವೆಯೇ ಮುಖ್ಯವಾಗಿರಲಿ ಎಂದು ಹೇಳಿದ್ದರಂತೆ. ಅದರಂತೆ ಹುಬ್ಬಳ್ಳಿಗೆ ಬಂದು ಭೂಸಪೇಟೆಯಲ್ಲಿ 1975ರಲ್ಲಿ ಕ್ಲಿನಿಕ್‌ ತೆರೆದು ಬಡವರ ಬಂಧುವಿನಂತೆ ಸೇವೆ ಮಾಡುತ್ತಿದ್ದಾರೆ.

ಆರಂಭದಲ್ಲಿ ಇವರ ಕ್ಲಿನಿಕ್‌ಗೆ ರೋಗಿಗಳ ಸಂಖ್ಯೆ ಅಷ್ಟೊಂದು ಇರಲಿಲ್ಲ. ಹೀಗಾಗಿ, ಯರೇಬೂದಿಹಾಳ, ವರೂರು, ಗಬ್ಬೂರು, ಕೇಶ್ವಾಪುರ ಹೀಗೆ ಬಡವರು ಹೆಚ್ಚಾಗಿ ನೆಲೆಸುವ ಪ್ರದೇಶದಲ್ಲಿ ಐದು ಕ್ಲಿನಿಕ್‌ ತೆರೆದಿದ್ದರು. ಎಲ್ಲೆಡೆಯೂ ದಿನಕ್ಕೆ ಎರಡು ಗಂಟೆಯಂತೆ ಸುಮಾರು 5-10 ವರ್ಷ ಕೆಲಸ ಮಾಡಿದ್ದುಂಟು. ಭೂಸಪೇಟೆ ಕ್ಲಿನಿಕ್‌ಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಹೆಚ್ಚಾದಾಗ ಉಳಿದ ನಾಲ್ಕು ಕ್ಲಿನಿಕ್‌ಗಳನ್ನು ಬಂದ್‌ ಮಾಡಿದರು.

5 ಶುಲ್ಕ:

ಇಷ್ಟು ವರ್ಷಗಳಾದರೂ ಇವರು ರೋಗಿಗೆ ಇಷ್ಟೇ ದುಡ್ಡು ಕೊಡಬೇಕು ಎಂದು ನಿಗದಿಪಡಿಸಿಲ್ಲ. ಹಿಂದೆಲ್ಲಾ 20, 50 ಪೈಸೆ ಕೊಡುತ್ತಿದ್ದ ರೋಗಿಗಳು, ಈಗ .5 ಕೊಡುತ್ತಾರೆ. ಕೆಲವೊಬ್ಬರು ಈಗಲೂ .1, .2 ಕೊಡುವುದುಂಟು. ಒಂದು ವೇಳೆ ಯಾರಾದರೂ ಹೆಚ್ಚು ಹಣ ಕೊಡಲು ಬಂದರೆ ನಿರಾಕರಿಸಿ ಬರೀ .5 ಮಾತ್ರ ಕೊಡಿ ಎಂದು ಹೇಳುತ್ತಾರೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಇವರು .5 ಡಾಕ್ಟರು ಎಂದೇ ಪ್ರಖ್ಯಾತರು. ಪ್ರತಿದಿನ 300ರಿಂದ 400 ರೋಗಿಗಳು ಇವರ ಬಳಿ ತಪಾಸಣೆ ಮಾಡಿಸಿಕೊಳ್ಳುತ್ತಾರೆ.

ಮೊಬೈಲ್‌ ಇಲ್ಲ; ಬೈಸಿಕಲ್ಲೇ ವಾಹನ:

ವೈದ್ಯರಾದರೂ ಇವರ ಬಳಿ ಈವರೆಗೂ ಮೊಬೈಲ್‌ ಇಲ್ಲ. ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ. ಮೊಬೈಲ್‌ ತೆಗೆದುಕೊಳ್ಳಿ ಎಂದು ರೋಗಿಗಳು ಹೇಳಿದರೂ ಇಲ್ಲ ನನಗ್ಯಾಕೆ ಅದು. ಏನೇ ಸಮಸ್ಯೆ ಇದ್ದರೂ ಕ್ಲಿನಿಕ್‌ಗೆ ಬಂದು ಬಿಡಿ. ನಾನು ಇಲ್ಲಿ ಬಿಟ್ಟು ಎಲ್ಲಿಗೂ ಹೋಗಲ್ಲ ಎನ್ನುತ್ತಾರೆ. ಹುಬ್ಬಳ್ಳಿಯ ಖ್ಯಾತ ವೈದ್ಯ ಡಾ.ಗಡಗಿ ಅವರೇ ಇವರ ಕ್ಲಿನಿಕ್‌ಗೆ ಒಂದು ಲ್ಯಾಂಡ್‌ಲೈನ್‌ ಫೋನ್‌ ಕೊಡಿಸಿದ್ದಾರೆ. ಇನ್ನು ಒಬ್ಬ ಸಣ್ಣ ವೈದ್ಯರು ಕೂಡ ಬೈಕ್‌, ಕಾರು ಇಟ್ಟುಕೊಳ್ಳುವಾಗ ಇವರ ಬಳಿ ಇರುವುದು ಬರೀ ಬೈಸಿಕಲ್‌. ಈಗಲೂ ಅದೇ ಬೈಸಿಕಲ್‌ ಮೇಲೆಯೇ ಕ್ಲಿನಿಕ್‌ಗೆ ಬರುತ್ತಾರೆ; ಹೋಗುತ್ತಾರೆ.

ನನಗೆ ಎಂಬಿಬಿಎಸ್‌ ಸೇರುವ ಅವಕಾಶವಿತ್ತು. ಆದರೆ ನಮ್ಮ ತಂದೆ ಎಂಬಿಬಿಎಸ್‌ ಬೇಡ. ಆಯುರ್ವೇದ ಕಲಿಯುವಂತೆ ಹೇಳಿದ್ದರು. ಅದರಂತೆ ಕಲಿತೆ. ವೈದ್ಯಕೀಯ ವೃತ್ತಿ ಒಂದು ಸಮಾಜಸೇವೆ. ಅದನ್ನೇ ಮಾಡುತ್ತಿದ್ದೇನೆ. ಹೆಚ್ಚಿನದೇನು ಮಾಡುತ್ತಿಲ್ಲ.

-ಡಾ. ವೀರಭದ್ರಪ್ಪ ರುದ್ರಪ್ಪ ಹೊನ್ನಳ್ಳಿ, ಆಯುರ್ವೇದ ವೈದ್ಯರು

ಭಾನುವಾರವೂ ಆರಂಭ:

ಈ ಕ್ಲಿನಿಕ್‌ ಭಾನುವಾರವೂ ತೆರೆದಿರುತ್ತದೆ. ತುರ್ತು ಕೆಲಸವಿದ್ದಾಗ ಮಾತ್ರ ಆಗೊಮ್ಮೆ ಈಗೊಮ್ಮೆ ಬಂದ್‌ ಮಾಡಿದ್ದನ್ನು ಬಿಟ್ಟರೆ ಉಳಿದಂತೆ ವರ್ಷದ ಎಲ್ಲ ದಿನವೂ ಈ ಕ್ಲಿನಿಕ್‌ ಬೆಳಗ್ಗೆ 7ರಿಂದ ರಾತ್ರಿ 11ರ ವರೆಗೆ ತೆರೆದಿರುತ್ತದೆ.

- ಶಿವಾನಂದ ಗೊಂಬಿ

click me!