ಕೆಎಸ್‌ಒಯುಗೆ ಕೊನೆಗೂ ಸಿಕ್ಕಿತು ಯುಜಿಸಿಯಿಂದ ಮಾನ್ಯತೆ

By Web DeskFirst Published Aug 10, 2018, 9:21 AM IST
Highlights

ತಾಂತ್ರಿಕ ವಿಷಯಗಳನ್ನು ಆರಂಭಿಸಿದ್ದು ಮತ್ತು ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದಕ್ಕಾಗಿ ಯುಜಿಸಿಯು 2015ರಲ್ಲಿ ಮುಕ್ತ ವಿವಿಗೆ ನೀಡಿದ್ದ ಮಾನ್ಯತೆಯನ್ನು ರದ್ದುಪಡಿಸಿತ್ತು. ಆದರೆ ಬಳಿಕ ತಾವು ತಾಂತ್ರಿಕ ವಿಷಯಕ್ಕೆ ಅವಕಾಶ ನೀಡುವುದಿಲ್ಲ ಮತ್ತು ರಾಜ್ಯದೊಳಗೆ ಮಾತ್ರ ವಿದ್ಯಾರ್ಥಿಗಳ ಪ್ರವೇಶಾತಿ ನೀಡುತ್ತೇವೆ ಎಂದು ಕೆಎಸ್‌ಒಯು ಯುಜಿಸಿಗೆ ತಿಳಿಸಿತ್ತು. 

ಬೆಂಗಳೂರು/ನವದೆಹಲಿ(ಆ.10): ನಾಲ್ಕು ವರ್ಷಗಳಿಂದ ಮಾನ್ಯತೆ ಕಳೆದುಕೊಂಡು ಅತಂತ್ರವಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆಎಸ್‌ಒಯು) ಕೊನೆಗೂ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ಮಾನ್ಯತೆ ನೀಡಿದೆ. 2018-19ರಿಂದ 2022-23ರ ಅವಧಿಗೆ ಒಟ್ಟು ಹದಿನೇಳು ಕೋರ್ಸ್‌ಗಳಿಗೆ ಮಾನ್ಯತೆ ನೀಡಿ ಯುಜಿಸಿ ಗುರುವಾರ ಆದೇಶ ಹೊರಡಿಸಿದೆ.

ತಾಂತ್ರಿಕ ವಿಷಯಗಳನ್ನು ಆರಂಭಿಸಿದ್ದು ಮತ್ತು ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದಕ್ಕಾಗಿ ಯುಜಿಸಿಯು 2015ರಲ್ಲಿ ಮುಕ್ತ ವಿವಿಗೆ ನೀಡಿದ್ದ ಮಾನ್ಯತೆಯನ್ನು ರದ್ದುಪಡಿಸಿತ್ತು. ಆದರೆ ಬಳಿಕ ತಾವು ತಾಂತ್ರಿಕ ವಿಷಯಕ್ಕೆ ಅವಕಾಶ ನೀಡುವುದಿಲ್ಲ ಮತ್ತು ರಾಜ್ಯದೊಳಗೆ ಮಾತ್ರ ವಿದ್ಯಾರ್ಥಿಗಳ ಪ್ರವೇಶಾತಿ ನೀಡುತ್ತೇವೆ ಎಂದು ಕೆಎಸ್‌ಒಯು ಯುಜಿಸಿಗೆ ತಿಳಿಸಿತ್ತು. ಜತೆಗೆ, ಯುಜಿಸಿಯ ನಿಯಮಾವಳಿಗಳನ್ನು ಪಾಲಿಸುವ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಗತ್ಯ ದಾಖಲೆ ಪರಿಶೀಲನೆ, ಸಭೆಗಳನ್ನು ನಡೆಸಿದ ಯುಜಿಸಿ ಕೊನೆಗೂ ಕೆಎಸ್‌ಒಯುಗೆ ಅನುಮತಿ ನೀಡುವ ತೀರ್ಮಾನಕ್ಕೆ ಬರಲಾಗಿದೆ. ಯುಜಿಸಿಗೂ ಮುನ್ನ ಇತ್ತೀಚೆಗಷ್ಟೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಕೆಎಸ್‌ಒಯುಗೆ ಮಾನ್ಯತೆ ನೀಡಲು ಒಪ್ಪಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಯಾವ್ಯಾವ ಕೋರ್ಸ್‌ಗಳು?: ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿ ಒಟ್ಟಾರೆ 17 ಕೋರ್ಸ್‌ಗಳಿಗೆ ಮಾನ್ಯತೆ ಕಲ್ಪಿಸಲಾಗಿದೆ. ಪದವಿ ಕಲಾ, ವಾಣಿಜ್ಯ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಸ್ನಾತಕೋತ್ತರ ಪದವಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲಿಷ್‌, ಹಿಂದಿ, ಇತಿಹಾಸ, ಪತ್ರಿಕೋದ್ಯಮ ಮತ್ತು ಸಂವಹನ, ಕನ್ನಡ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಉರ್ದು, ಸಮಾಜಶಾಸ್ತ್ರ, ಲೈಬ್ರರಿ ಆ್ಯಂಡ್‌ ಇನ್‌ಫಾರ್ಮೇಷನ್‌, ಪರಿಸರ ವಿಜ್ಞಾನ ಸೇರಿ 17 ಕೋರ್ಸ್‌ಗಳಿಗೆ ಈಗ ಮಾನ್ಯತೆ ಸಿಕ್ಕಿದೆ. ಒಟ್ಟು ಕೆಎಸ್‌ಒಯು 32 ಕೋರ್ಸ್‌ಗಳಿಗೆ ಮಾನ್ಯತೆ ನೀಡುವಂತೆ ಯುಜಿಸಿ ಮುಂದೆ ಮನವಿ ಸಲ್ಲಿಸಿತ್ತು. ಸದ್ಯ 17 ಕೋರ್ಸ್‌ಗಳಿಗೆ ಮಾತ್ರ ಸಿಕ್ಕಿದೆ. ಬಾಕಿ ಉಳಿದ ಕೋರ್ಸ್‌ಗಳಿಗೂ ಆದಷ್ಟುಶೀಘ್ರ ಅನುಮತಿ ಪಡೆಯಲು ಪ್ರಯತ್ನಿಸುವುದಾಗಿ ಕೆಎಸ್‌ಒಯು ಕುಲಪತಿ ಪ್ರೊ. ಶಿವಲಿಂಗಯ್ಯ ಮಾಹಿತಿ ನೀಡಿದ್ದಾರೆ.

ಲಕ್ಷಾಂತರ ಮಂದಿಗೆ ಅನುಕೂಲ

ಕರ್ನಾಟಕ ಮುಕ್ತ ವಿವಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪ್ರತಿ ವರ್ಷ ಸುಮಾರು 40,000 ವಿದ್ಯಾರ್ಥಿಗಳು ನೋಂದಣಿ ಆಗುತ್ತಿದ್ದರು. ಇದೀಗ ಕೆಎಸ್‌ಒಯುಗೆ ಮರು ಮಾನ್ಯತೆ ಸಿಕ್ಕರೆ ಮುಕ್ತ ವಿವಿಯಲ್ಲಿ ಓದುವ ಬಯಕೆ ಹೊಂದಿರುವ ರಾಜ್ಯದಲ್ಲಿನ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಈ ತಿಂಗಳಿಂದಲೇ ಕೆಎಸ್‌ಒಯುಗೆ ವಿದ್ಯಾರ್ಥಿಗಳ ನೋಂದಣಿಗೆ ಯುಜಿಸಿ ಅವಕಾಶ ಸಿಕ್ಕಿದೆ. ಆದರೆ, 2013-14, 2014-15ರ ಬ್ಯಾಚ್‌ಗಳ ಶೈಕ್ಷಣಿಕ ಅನರ್ಹತೆ ತೆರವುಗೊಂಡಿಲ್ಲವಾಗಿದ್ದರಿಂದ ಸುಮಾರು 95 ಸಾವಿರ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿಯೇ ಇದೆ.

ಮಂಗಳೂ ವಿವಿ ಅಂಚೆ ತೆರಪಿನ ಶಿಕ್ಷಣಕ್ಕೂ ಮಾನ್ಯತೆ

ಇನ್ನು, ಮಂಗಳೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಬಿಎ, ಬಿಕಾಂ, ಎಂಎ, ಎಂಕಾಂ ಸೇರಿದಂತೆ 10 ಕೋರ್ಟ್‌ಗಳಿಗೆ 2018-19 ಮತ್ತು 2019-20ರ ಎರಡು ಶೈಕ್ಷಣಿಕ ವರ್ಷಗಳಿಗೆ ಯುಜಿಸಿ ಮಾನ್ಯತೆ ಕಲ್ಪಿಸಿದೆ. 2013-14ನೇ ಸಾಲಿನಲ್ಲಿ ಮಂಗಳೂರು ವಿವಿಯ 10 ಅಂಚೆ ಮತ್ತು ತೆರಪಿನ ಕೋರ್ಸ್‌ಗಳಿಗೆ ಯುಜಿಸಿ ಮಾನ್ಯತೆ ರದ್ದುಗೊಳಿಸಿತ್ತು.

ಕರ್ನಾಟಕ ಮುಕ್ತ ವಿವಿಗೆ ಇದು ಪುನರ್ಜನ್ಮ. ಕಳೆದ ಐದು ವರ್ಷದಿಂದ ವಿವಿ ಕೆಲಸ ಕಾರ್ಯ ಸ್ಥಗಿತವಾಗಿತ್ತು. ನಾನು ಕುಲಪತಿಯಾಗಿ ಬಂದು 2.5 ವರ್ಷವಾಯಿತು. ಅಂದಿನಿಂದಲೂ ವಿವಿಗೆ ಮಾನ್ಯತೆ ದೊರಕಿಸಿಕೊಡಲು ಪ್ರಯತ್ನಿಸಿದೆ. ಇದರ ಹಿಂದೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶ್ರಮಿಸಿದ ಶಾಸಕರು, ಸಂಸದರು, ಸಚಿವರು, ಮುಖ್ಯಮಂತ್ರಿಗಳು,ರಾಜ್ಯಪಾಲರು ಹೀಗೆ ಪ್ರತಿಯೊಬ್ಬರಿಗೂ ಅಭಿನಂದನೆ. 32 ವಿಷಯಗಳ ಪೈಕಿ ಈಗ ಯುಜಿಸಿ ಕೇವಲ 17 ಕೋರ್ಸಿಗೆ ಅನುಮತಿ ನೀಡಿದೆ. ಉಳಿದ ವಿಷಯಗಳಿಗೂ ಒಂದು ತಿಂಗಳೊಳಗೆ ಅಗತ್ಯ ದಾಖಲೆ ಸಲ್ಲಿಸಿ ಅನುಮತಿ ಪಡೆಯಲಾಗುವುದು. ಮುಂದಿನ ದಿನಗಳಲ್ಲಿ ಯುಜಿಸಿ ನಿಯಮದ ಅನ್ವಯ ಕೆಲಸ ಮಾಡಿಕೊಂಡು ಹೋಗುತ್ತೇನೆ.

- ಪ್ರೊ.ಶಿವಲಿಂಗಯ್ಯ, ಕುಲಪತಿ, ಕರ್ನಾಟಕ ರಾಜ್ಯ ಮುಕ್ತ ವಿವಿ
 

click me!