ನಾನು ದುಡ್ಡಿನ ಗಿಡ ನೆಟ್ಟಿದ್ದೇನಾ : ಸಿಎಂ ಖಡಕ್ ಪ್ರಶ್ನೆ

By Web DeskFirst Published Aug 10, 2018, 9:14 AM IST
Highlights

ರೈತರ ಸಾಲ ಮನ್ನಾ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ೬್ರಿ ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದು ನಾನೇನು ದುಡ್ಡಿನ ಗಿಡ ನೆಟ್ಟಿದ್ದೇನಾ ಎಂದು ಹೇಳಿದ್ದಾರೆ. 

ಬೆಂಗಳೂರು :  ‘ರಾತ್ರೋರಾತ್ರಿ ರೈತರ ಖಾತೆಗೆ ಸಾಲಮನ್ನಾದ ಹಣ ಕಳುಹಿಸಲು ನಾನೇನು ದುಡ್ಡಿನ ಗಿಡ ಹಾಕಿದ್ದೇನೆಯೇ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.

ಘೋಷಣೆ ಮಾಡಿರುವ ರೈತರ ಸಾಲ ಮನ್ನಾ ಮೊತ್ತ ಇನ್ನೂ ಪಾವತಿಸಿಲ್ಲ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ಸಾಲಮನ್ನಾ ಮಾಡಲು ನಾನು ಪಟ್ಟಿರುವ ಕಷ್ಟನನಗೇ ಗೊತ್ತು. ಅನುಭವಿಸುತ್ತಿರುವ ನೋವನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಎಷ್ಟೆಷ್ಟುತರಲೆ ತಾಪತ್ರಯಗಳಿವೆ ಎಂಬುದು ನನಗೇ ಗೊತ್ತು. ರೈತರ ಸಾಲ ಮನ್ನಾ ವಿಚಾರ ಹುಡುಗಾಟಿಕೆಯಲ್ಲ’ ಎಂದು ಹೇಳಿದ್ದಾರೆ.

ಗುರುವಾರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆದ 24ನೇ ವಿಶ್ವ ಆದಿವಾಸಿ ದಿನಾಚರಣೆ ಮತ್ತು ಅಲೆಮಾರಿ ಆದಿವಾಸಿಗಳ ಕಲಾಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸಾಲಮನ್ನಾದ ಹಣ ಬರಲಿಲ್ಲ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ. ಎಷ್ಟುತರಲೆ ತಾಪತ್ರಯಗಳಿವೆ ಎಂಬುದು ನನಗೆ ಗೊತ್ತು. ಅಧಿಕಾರಿಗಳನ್ನು ಒಪ್ಪಿಸಬೇಕು ಹಾಗೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಯಾರನ್ನೋ ಮೆಚ್ಚಿಸಲು ಅಧಿಕಾರ ವಹಿಸಿಕೊಂಡಿಲ್ಲ. 49 ಸಾವಿರ ಕೋಟಿ ರು. ಸಾಲಮನ್ನಾವು ದೊಡ್ಡ ಮೊತ್ತವಾಗಿರುವುದರಿಂದ ರಾಜ್ಯದ ಆರ್ಥಿಕತೆಯನ್ನು ಸರಿದೂಗಿಸಬೇಕಿದೆ. ಈ ನಿಟ್ಟಿನಲ್ಲಿ ಹಣ ಹೊಂದಿಸಬೇಕಾಗಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ ಬಜೆಟ್‌ನಲ್ಲಿನ ಒಂದು ರುಪಾಯಿಯನ್ನೂ ಕಡಿತ ಮಾಡಿಲ್ಲ. ಆದರೂ ಶಾದಿಭಾಗ್ಯ ಸೇರಿದಂತೆ ಇತರೆ ಯೋಜನೆಗಳ ಅನುದಾನದಲ್ಲಿ ಕಡಿತ ಮಾಡಲಾಗಿದೆ ಎಂಬುದಾಗಿ ಮಾಧ್ಯಮಗಳು ಸತ್ಯಕ್ಕೆ ದೂರವಾದ ವರದಿಗಳನ್ನು ಮಾಡುತ್ತಿವೆ. ಹೊಸ ಯೋಜನೆಗಳ ಜತೆಗೆ ಹಳೆಯ ಯೋಜನೆಗಳನ್ನು ಮುಂದುವರಿಸಲಾಗಿದೆ. ಅಲ್ಲದೇ, ಯಾವುದೇ ಸಮುದಾಯಗಳನ್ನು ಕಡೆಗಣಿಸುವಂತಹ ಕೆಲಸವನ್ನು ಸಹ ಮಾಡಿಲ್ಲ. ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಬಡವರ ಕಷ್ಟಗಳಿಗೆ ಸ್ಪಂದಿಸಿ ಸ್ಥಳದಲ್ಲಿಯೇ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಿದ್ದೇನೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿರುವ ಕಾರಣ ನಾನು ಹೋದ ಕಡೆಗಳಲ್ಲಿ ಜನರು ಸೇರುತ್ತಾರೆ. ಬಡವರ ಸಮಸ್ಯೆಗಳನ್ನು ಮುಖ್ಯಮಂತ್ರಿ ಆಲಿಸಲಿದ್ದಾರೆ ಎಂಬ ಕಾರಣಕ್ಕಾಗಿ ಜನರು ನನ್ನ ಭೇಟಿಗೆ ಆಗಮಿಸುತ್ತಿದ್ದಾರೆ. ಆದರೂ ಮಾಧ್ಯಮಗಳಲ್ಲಿ ಇಲ್ಲಸಲ್ಲದ ವರದಿಯನ್ನು ಯಾವ ಕಾರಣಕ್ಕಾಗಿ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಮುಖ್ಯಮಂತ್ರಿಗಳು ಬೇಸರದಿಂದ ಹೇಳಿದರು.

click me!