
ಬೆಂಗಳೂರು : ಮಾರುಕಟ್ಟೆಯಲ್ಲಿ ಹಬ್ಬದ ವಸ್ತುಗಳ ಬೆಲೆ ಕಡಿಮೆಯಾಗಿರುವುದರಿಂದ ಈ ಬಾರಿಯ ಯುಗಾದಿ ಹಬ್ಬದ ಖರೀದಿಯ ಭರಾಟೆ ಜೋರಾಗಿದೆ. ಭಾನುವಾರ (ಮಾ.18)ದ ಹಬ್ಬಕ್ಕೆ ಜನರು ಮಾರುಕಟ್ಟೆಗಳಲ್ಲಿ ಅತ್ಯಂತ ಉತ್ಸಾಹದಿಂದ ಹಬ್ಬ ಸಾಮಗ್ರಿಗಳನ್ನು ಖರೀದಿಸುವಲ್ಲಿ ಶುಕ್ರವಾರ ನಿರತರಾಗಿದ್ದರು.
ಹಬ್ಬಕ್ಕೆ ಅಗತ್ಯವಾದ ಹೂವು, ಹಣ್ಣು, ದಿನಸಿ ಮತ್ತಿತರ ವಸ್ತುಗಳು ಬೆಲೆಯನ್ನು ಈ ಹಿಂದಿನ ಹಬ್ಬಗಳಿಗೆ ಹೋಲಿಸಿದರೆ ಯುಗಾದಿ ಹಬ್ಬಕ್ಕೆ ಬೆಲೆಗಳು ಸಾಕಷ್ಟು ಕಡಿಮೆಯಾಗಿರುವುದು ಜನರಲ್ಲಿ ಹಬ್ಬದ ಸಡಗರ ಇನ್ನಷ್ಟು ಜಾಸ್ತಿ ಮಾಡಿದೆ. ಕಳೆದ ಬಾರಿ ಕಡಿಮೆ ಮಳೆಯಿಂದಾಗಿ ಮಾರುಕಟ್ಟೆಗೆ ಹೂವು ಹೆಚ್ಚಾಗಿ ಬಂದಿರಲಿಲ್ಲ. ಹಾಗಾಗಿ ಹೂವುಗಳ ಬೆಲೆ ಸ್ವಲ್ಪ ಹೆಚ್ಚಾಗಿತ್ತು. ಈ ವರ್ಷ ಮಾರುಕಟ್ಟೆಗೆ ಬೆಂಗಳೂರು ಗ್ರಾಮಾಂತರ, ಆನೇಕಲ್, ತುಮಕೂರು, ಚಿಕ್ಕಬಳ್ಳಾಪುರ ಮತ್ತಿ ತರ ಭಾಗಗಳಿಂದ ಸಾಕಷ್ಟು ಪ್ರಮಾಣದಲ್ಲಿ ಹೂವು ಆಗಮಿಸುತ್ತಿದೆ. ಜತೆಗೆ ತಮಿಳುನಾಡಿನಿಂ ದಲೂ ಬರುತ್ತಿದ್ದು, ಹೂವಿನ ಬೆಲೆಯಲ್ಲೂ ಹೆಚ್ಚಿನ ವ್ಯತ್ಯಾಸವಾಗಿಲ್ಲ.
ಇನ್ನು ದ್ರಾಕ್ಷಿ, ಕಿತ್ತಳೆ, ಕಲ್ಲಂಗಡಿ ಸೀಸನ್ ಇರುವುದರಿಂದ ಅವುಗಳ ಬೆಲೆ ಕಡಿಮೆ ಯಾಗಿದ್ದರೆ, ಸೇಬು, ದಾಳಿಂಬೆ ಸ್ವಲ್ಪ ಬೆಲೆ ಗಿಟ್ಟಿಸಿಕೊಂಡಿವೆ. ಯುಗಾದಿಗೆ ಅವಶ್ಯವಾಗಿ ಬೇಕಾಗುವ ಮಾವು, ಬೇವು, ಬೆಲ್ಲ, ಕಬ್ಬು, ಬಣ್ಣ ಬಣ್ಣದ ರಂಗೋಲಿ ಎಲ್ಲವೂ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನಗರದ ಪ್ರಮುಖ ಮಾರುಕಟ್ಟೆಯಾದ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿ ಬಜಾರ್, ಯಶವಂತಪುರ, ಜಯನಗರ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ರಂಗೇರಿದೆ. ರಸ್ತೆ ಬದಿಯಲ್ಲಿಯೇ ಹಬ್ಬಕ್ಕೆ ಬೇಕಾಗುವ ವಸ್ತುಗಳು ಸಿಗುತ್ತಿದ್ದು, ಜನರು ಸಹ ಸಂಭ್ರಮದಿಂದಲೇ ಖರೀದಿಗೆ ಮುಂದಾಗುತ್ತಿದ್ದಾರೆ. ಹಬ್ಬಕ್ಕೆ ಎರಡು ದಿನ ಮುಂಚಿತವಾಗಿಯೇ ಜನಸಾಮಾನ್ಯರು ಹೊಸ ಬಟ್ಟೆ ಖರೀದಿಯಲ್ಲಿ ಬ್ಯುಸಿಯಾಗಿದ್ದು, ಬಟ್ಟೆಗಳ ಅಂಗಡಿಗಳು ಭರ್ತಿಯಾಗಿದ್ದವು. ಕೆಲವರು ಪೂಜಾ ಸಾಮಗ್ರಿಗಳು, ಹೋಳಿಗೆ ಸಾಮಗ್ರಿಗಳು, ಹೂವು- ಹಣ್ಣು, ತರಕಾರಿ ಹೀಗೆ ನಾನಾ ಖರೀದಿಗಳ ಸಂಭ್ರಮ ಎದ್ದು ಕಾಣುತ್ತಿತ್ತು. ಯುಗಾದಿ ಹಬ್ಬಕ್ಕೆ ಅನೇಕ ಕಂಪನಿಗಳು ವಿಶೇಷ ರಿಯಾಯಿತಿ ಘೋಷಿಸಿವೆ.
ತರಕಾರಿ-ಹೂವಿನ ದರದಲ್ಲಿ ಸ್ಥಿರತೆ: ಕಳೆದ ಗೌರಿ-ಗಣೇಶ, ವರಮಹಾಲಕ್ಷ್ಮಿ ಹಬ್ಬಗಳಲ್ಲಿ ಗಗನಕ್ಕೇರಿದ್ದ ಪದಾರ್ಥಗಳ ಈ ವರ್ಷದ ಯುಗಾದಿಗೆ ಕೊಂಚ ಇಳಿಕೆಯಾಗಿದೆ. ಅದರಲ್ಲೂ ತರಕಾರಿಗಳ ಬೆಲೆ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಗ್ರಾಹಕರಿಗೂ ಖುಷಿ ನೀಡಿದೆ.
ಕೆ.ಆರ್. ಮಾರುಕಟ್ಟೆಯ ಸಗಟು ದರದಲ್ಲಿ ಕನಕಾಂಬರ ಹೂವು ಕೆ.ಜಿ.ಗೆ 800ಕ್ಕೂ ಹೆಚ್ಚಿನ ಬೆಲೆ ಹೊಂದಿರುತ್ತದೆ. ಮಲ್ಲಿಗೆ ಕೆ.ಜಿ400-500ಗೆ ಖರೀದಿಯಾಗುತ್ತಿತ್ತು. ಆದರೆ ಇದೀಗ ಕ್ರಮವಾಗಿ 240ರಿಂದ 400ಕ್ಕೆ ಮಾರಾಟವಾಗುತ್ತಿದೆ. ರೋಸ್ 80-1000., ಚಿಕ್ಕ ಗಾತ್ರದ ಬಿಳಿ-ಹಳದಿ ಸೇವಂತಿಗೆ ಕೆ.ಜಿ.ಗೆ 120, ಡೇರಾ ಹೂವಿನ ಮಾದರಿಯ ದಪ್ಪನೆಯ ಹಳದಿ ಸೇವಂತಿಗೆ ಕೆ.ಜಿ. 160-200, ಕಣಿಗಲೆ 80, ಸುಗಂಧರಾಜ 100, ಕಾಕಡ 240, ಚೆಂಡು ಹೂವು 40 ದರಕ್ಕೆ ಮಾರಾಟಗೊಳ್ಳುತ್ತಿವೆ.
ಶನಿವಾರ ಬೇಡಿಕೆ ಕೊಂಚ ಜಾಸ್ತಿಯಾಗುವ ಹಿನ್ನೆಲೆಯಲ್ಲಿ ಬೆಲೆಗಳ ದರದಲ್ಲಿ ಸ್ವಲ್ಪ ಏರಿಕೆಯಾಗಬಹುದು ಎನ್ನುತ್ತಾರೆ ಹೂವಿನ ವ್ಯಾಪಾರಿ ಎಸ್.ಜಿ. ವಿಜಯಕುಮಾರ್. ಇನ್ನು ತರಕಾರಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಹುರುಳಿ ಕಾಯಿ, ಟೊಮೇಟೊ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಕ್ಯಾರೆಟ್-ಬೀಟ್‌ರೂಟ್ ಹೀಗೆ ಬಹುತೇಕ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಅದೇ ರೀತಿ ಸೇಬು, ದ್ರಾಕ್ಷಿ, ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಏಲಕ್ಕಿ ಬಾಳೆ ಹಣ್ಣಿನ ಬೆಲೆಯೂ ಕಳೆದ ವಾರ 65 ಇದ್ದದ್ದು, ಇದೀಗ 55 ಇಳಿಕೆಯಾಗಿದೆ. ಕೆಲವು ಕಡೆ ಕೆ.ಜಿ.ಗೆ 70ಕ್ಕೆ ಮಾರಾಟ ಮಾಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.