ಹಿಂದೂ ಧರ್ಮ ಸಂಸತ್‌ಗೆ ಉಡುಪಿ ಸಕಲ ಸಜ್ಜು

Published : Nov 19, 2017, 08:54 AM ISTUpdated : Apr 11, 2018, 01:12 PM IST
ಹಿಂದೂ ಧರ್ಮ ಸಂಸತ್‌ಗೆ ಉಡುಪಿ ಸಕಲ ಸಜ್ಜು

ಸಾರಾಂಶ

ಇನ್ನೈದು ದಿನಗಳಲ್ಲಿ ದೇವಳಗಳ ನಗರಿ ಉಡುಪಿ ಪ್ರಖರ ಹಿಂದುತ್ವವಾದದ ಅನುಭೂತಿಗೆ ತೆರೆದುಕೊಳ್ಳಲಿದೆ. ದೇಶದ ಮೂಲೆಮೂಲೆಗಳ ಎರಡು ಸಾವಿರಕ್ಕೂ ಅಧಿಕ ಸಾಧುಗಳು, ಸಂತರು, ಮಠಾಧೀಶರು, ಪೀಠಾಧೀಶರು, ಮಂಡಲೇಶ್ವರರು ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸದ್‌ನಲ್ಲಿ ಸೇರಲಿದ್ದಾರೆ.

ಉಡುಪಿ: ಇನ್ನೈದು ದಿನಗಳಲ್ಲಿ ದೇವಳಗಳ ನಗರಿ ಉಡುಪಿ ಪ್ರಖರ ಹಿಂದುತ್ವವಾದದ ಅನುಭೂತಿಗೆ ತೆರೆದುಕೊಳ್ಳಲಿದೆ. ದೇಶದ ಮೂಲೆಮೂಲೆಗಳ ಎರಡು ಸಾವಿರಕ್ಕೂ ಅಧಿಕ ಸಾಧುಗಳು, ಸಂತರು, ಮಠಾಧೀಶರು, ಪೀಠಾಧೀಶರು, ಮಂಡಲೇಶ್ವರರು ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸದ್‌ನಲ್ಲಿ ಸೇರಲಿದ್ದಾರೆ.

ನ.24ರಿಂದ 26ರವರೆಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆಯುವ ಅಖಿಲ ಭಾರತ ಹಿಂದೂ ಧರ್ಮ ಸಂಸದ್‌ನಲ್ಲಿ ಭಾಗವಹಿಸುವುದಕ್ಕೆ ದೇಶದ ಬಹುತೇಕ ಎಲ್ಲಾ ರಾಜ್ಯಗಳಿಂದ ವಿವಿಧ ಪಂಥ, ಮತ, ಪೀಠ, ಅಖಾಡಗಳಿಂದ ಆಗಮಿಸುವ ಸಂತರನ್ನು ಸ್ವಾಗತಿಸುವುದಕ್ಕೆ ಉಡುಪಿ ಸಿದ್ಧವಾಗುತ್ತಿದೆ. ದೇಶದಲ್ಲೇ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಸಾಧು ಸಂತರು, ತಮ್ಮ ಮತ-ಪಂಥ ಭೇದಗಳ ಹೊರತಾಗಿಯೂ ಒಂದೇ ಕಡೆ ಸೇರುತ್ತಿರುವ ಪ್ರಥಮ, ಐತಿಹಾಸಿಕ ಘಟನೆಗೆ ಉಡುಪಿಯೇ ಸಾಕ್ಷಿಯಾಗಲಿದೆ.

ಉಡುಪಿಯ ಮಟ್ಟಿಗೆ ಇದೊಂದು ಮೈಲಿಗಲ್ಲೇ ಆಗಲಿದೆ. ಸಿಖ್, ಜೈನ, ಬೌದ್ಧ, ಲಿಂಗಾಯತ, ಶೈವ, ವೀರಶೈವ, ವೈಷ್ಣವ, ಕಬೀರ್ ಪಂಥ, ಆರ್ಯ ಸಮಾಜ, ಇಸ್ಕಾನ್ ಇತ್ಯಾದಿ ಮತಗಳ ಅರಾಧ್ಯ ದೇವರು, ಆರಾಧನಾ ಪದ್ಧತಿ, ಆರಾಧಕರ ಸಂಪ್ರದಾಯ, ವಾದ-ವಿವಾದಗಳು ಭಿನ್ನವಾಗಿದ್ದರೂ ಅವೆರಲ್ಲರೂ ಈ ಹಿಂದೂ ಧರ್ಮ ಸಂಸದ್‌ನ ಛತ್ರಛಾಯೆಯಡಿ ಸೇರಲಿದ್ದಾರೆ. ಒಟ್ಟಾರೆಯಾಗಿ ಹಿಂದೂ ಸಮಾಜದ ಸಮಸ್ಯೆಗಳ ಮತ್ತು ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಲಿದ್ದಾರೆ ಮತ್ತು ಕೆಲವು ನಿರ್ಣಯಗಳನ್ನು ಮಂಡಿಸಲಿದ್ದಾರೆ.

ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ, ಮಾತಾ ಅಮೃತಾನಂದಮಯಿ, ಸಾಧ್ವಿ ಉಮಾಭಾರತಿ, ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆಯೋಧ್ಯೆಯ ಮಹಾಂತ ಧರ್ಮದಾಸ್, ಮುಂಬೈನ ಸಾಂದೀಪನಿ ಸಾಧನಾಶ್ರಮಯ ಆಚಾರ್ಯರು, ಶೃಂಗೇರಿಯ ಶ್ರೀ ಭಾರತೀ ತೀರ್ಥ ಸ್ವಾಮೀಜಿ, ಕಂಚಿ ಕಾಮಕೋಟಿ ಶ್ರೀಗಳು, ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ ಮತ್ತು ಪಂಜಾಬ್, ಬಿಹಾರ, ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಮುಂತಾದ ರಾಜ್ಯಗಳಿಂದಲೂ ನೂರಾರು ಮಂದಿ ಸ್ವಾಮೀಜಿಗಳು ಸಂಸದ್‌ನಲ್ಲಿ ಭಾಗವಹಿಸಲಿದ್ದಾರೆ.

ಮನೆಮನೆಯಲ್ಲಿ ಆತಿಥ್ಯ: ಉಡುಪಿಗೆ ಆಗಮಿಸುವ ಅಷ್ಟೂ ಮಂದಿ ಸಾಧು-ಸಂತರು ಉಳಿದುಕೊಳ್ಳುವುದಕ್ಕೆ ಒಂದು ವಿಶಿಷ್ಟ ವ್ಯವಸ್ಥೆಯೊಂದನ್ನು ಮಾಡಲಾಗಿದೆ. ಸುಮಾರು 2000 ಸಂತರದಲ್ಲಿ ಸುಮಾರು 1000 ಸಂತರಿಗೆ ಉಡುಪಿಯ ಸುತ್ತಮುತ್ತಲಿನ ವಿವಿಧ ಮಠಗಳು, ದೇವಾಲಯಗಳು, ಛತ್ರಗಳಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆಯಾಗಿದೆ.

ಉಳಿದ 1000 ಮಂದಿ ಸಂತರಿಗೆ ಆಸಕ್ತಿಯಿಂದ ಮುಂದೆ ಬಂದವರ ಮನೆಯಲ್ಲಿ ಉಳಿದುಕೊಳ್ಳುವುದಕ್ಕೆ ಭರದ ಸಿದ್ಧತೆಗಳಾಗುತ್ತಿವೆ. ರಾಜಕಾರಣಿಗಳಿಗೆ ಮೈಕ್ ಹಿಡಿಯವ ಅವಕಾಶ ಇಲ್ಲ: ಈ ಧರ್ಮಸಂಸದ್‌ನ ವೇದಿಕೆಗೆ, ಸಂವಾದ-ನಿರ್ಣಯ ಸಭೆಗೆ ಕಡ್ಡಾಯವಾಗಿ ಯಾವುದೇ ರಾಜಕಾರಣಿಗೆ ಪ್ರವೇಶ ಇಲ್ಲ. ಉದ್ಘಾಟನಾ ಸಭೆ, ಬಹಿರಂಗ ಸಭೆಯಲ್ಲೂ ರಾಜಕಾರಣಿಗಳು ಪ್ರೇಕ್ಷಕರಾಗಿಯೋ, ಸ್ವಯಂಸೇವಕರಾಗಿಯೋ ಭಾಗವಹಿಸಬಹುದು. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಸಚಿವೆ ಸಾಧ್ವಿ ಉಮಾಭಾರತಿ ರಾಜಕಾರಣಿಯಾಗಿ ಅಲ್ಲ, ಸಾಧು, ಸಾಧ್ವಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿಹಿಂಪ ದ ಕ್ಷೇತ್ರ ಸಂಘ ಕಾರ್ಯದರ್ಶಿ ಗೋಪಾಲ್ ತಿಳಿಸಿದ್ದಾರೆ.

ಸಿದ್ದಗಂಗಾ ಶ್ರೀಗಳಿಂದ ಉದ್ಘಾಟನೆ

ರಾಷ್ಟ್ರೀಯ ಸಂತ, ವಿಶ್ವ ಹಿಂದೂ ಪರಿಷತ್‌ನ ಸ್ಥಾಪಕರಲ್ಲೊಬ್ಬರಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರ ಮಾರ್ಗದರ್ಶನದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆಯುವ ಈ ಧರ್ಮ ಸಂಸದ್ ಅನ್ನು ತುಮಕೂರಿನ ಸಿದ್ಧಗಂಗಾ ಮಠದ 110ರ ಹರೆಯದ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಉದ್ಘಾಟನಾ ಸಭೆಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಕೊನೇ ದಿನದ ಹಿಂದೂ ಸಮಾಜೋತ್ಸವದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌