ಉಡುಪಿ: ಕಾಮುಕನಿಗೆ ನಾಲ್ಕು ತದುಕಿದ್ದಕ್ಕೆ ಪೊಲೀಸ್ ಪೇದೆಗೆ ಸಸ್ಪೆಂಡ್ ಶಿಕ್ಷೆ

By Suvarna Web DeskFirst Published Apr 9, 2017, 3:41 AM IST
Highlights

ಮಹಿಳೆ ಜೊತೆ ಕುಮಾರ್ ಅಸಭ್ಯವಾಗಿ ವರ್ತಿಸಿದ್ದರೆ, ಠಾಣೆಯಲ್ಲಿ ದೂರು ದಾಖಲಿಸಬಹುದಿತ್ತು. ಅದನ್ನು ಬಿಟ್ಟು ಹಿಗ್ಗಾಮುಗ್ಗಾ ಹೊಡೆದದ್ದು ಸರಿಯಲ್ಲ. ಕುಮಾರ್'ನ ಸ್ಪೈನಲ್ ಕಾರ್ಡ್ ಮುರಿದಿದೆ. ಇದು ಗಂಭೀರ ವಿಷಯ. ಹೀಗಾಗಿ, ಅವರನ್ನು ಸಸ್ಪೆಂಡ್ ಮಾಡಿಸಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸುತ್ತಾರೆ.

ಉಡುಪಿ(ಏ. 09): ತನ್ನ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನಿಗೆ ನಾಲ್ಕು ತದುಕಿದ ಪೊಲೀಸ್ ಪೇದೆಗೆ ಅಮಾನತು ಶಿಕ್ಷೆಯಾಗಿರುವ ಘಟನೆ ವರದಿಯಾಗಿದೆ. ಕುಮಾರ್ ಎಂಬಾತನಿಗೆ ಹೊಡೆದರೆಂಬ ಕಾರಣಕ್ಕೆ ಮಲ್ಪೆ ಠಾಣೆಯ ಪೊಲೀಸ್ ಕಾನ್ಸ್'ಟೆಬಲ್ ಪ್ರಕಾಶ್'ರನ್ನು ಸಚಿವ ಪ್ರಮೋದ್ ಮಧ್ವರಾಜ್ ಸಸ್ಪೆಂಡ್ ಮಾಡಿಸಿದ್ದಾರೆ. ಪೋಲಿಯಾಟ ಆಡಿದವನಿಗೆ ಬುದ್ಧಿಹೇಳಲು ನಾಲ್ಕು ಏಟು ಕೊಟ್ಟಿದ್ದು ತಪ್ಪಾ ಎಂದು ಪೇದೆ ಪತ್ನಿ ಜ್ಯೋತಿ ಪ್ರಶ್ನಿಸಿದ್ದಾರೆ. ಈ ಸಂಬಂಧ ಜ್ಯೋತಿಯವರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.

ನಡೆದದ್ದೇನು?
ಎರಡು ದಿನದ ಹಿಂದೆ ಪೊಲೀಸ್ ಪೇದೆ ಪ್ರಕಾಶ್ ತಮ್ಮ ಪತ್ನಿ ಜ್ಯೋತಿ ಜೊತೆ ಬೈಕ್'ನಲ್ಲಿ ಹೋಗುತ್ತಿರುತ್ತಾರೆ. ಆಗ ಕುಮಾರ್ ಎಂಬಾತ ಜ್ಯೋತಿಯತ್ತ ಕಣ್ಣು ಹೊಡೆದು ಅಸಭ್ಯವಾಗಿ ವರ್ತಿಸುತ್ತಾನೆ. ಅಷ್ಟಕ್ಕೇ ಸುಮ್ಮನಾಗದ ಕುಮಾರ್ ತನ್ನ ಬೈಕ್'ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಜ್ಯೋತಿಯ ಮೈಮುಟ್ಟುತ್ತಾನೆ. ಇದರಿಂದ ಕೋಪಗೊಂಡ ಪೇದೆ ಪ್ರಕಾಶ್ ಸ್ಥಳದಲ್ಲೇ ಕುಮಾರ್'ನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಎರಡೇಟು ಬಿಗಿಯುತ್ತಾರೆ. ಇದು ಪೊಲೀಸ್ ಪೇದೆ ಪ್ರಕಾಶ್ ಅವರ ಪತ್ನಿ ಹೇಳುವ ಮಾತು.

ಕುಮಾರ್'ಗೂ ಸಚಿವರಿಗೂ ಏನು ಸಂಬಂಧ?
ಪೇದೆ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿದರೆನ್ನಲಾದ ಕುಮಾರ್ ಸಚಿವ ಪ್ರಮೋದ್ ಮಧ್ವರಾಜ್ ಅವರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾನೆನ್ನಲಾಗಿದೆ. ಘಟನೆ ನಡೆದಾಗ ಸಚಿವರು ಉಪಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದರು. ಆಗ, ಸಚಿವರ ಪತ್ನಿಯು ಪೊಲೀಸ್ ಕಾನ್ಸ್'ಟೆಬಲ್ ಪ್ರಕಾಶ್'ರನ್ನು ತಮ್ಮ ಮನೆಗೆ ಕರೆಸಿಕೊಂಡು ವಿಚಾರಿಸುತ್ತಾರೆ. ಪೇದೆಯ ಖರ್ಚಿನಲ್ಲೇ ಕುಮಾರ್'ನನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ಆದರೆ, ಪ್ರಮೋದ್ ಮಧ್ವರಾಜ್ ವಾಪಸ್ ಬಂದ ಬಳಿಕ ಪೇದೆ ಪ್ರಕಾಶ್'ರನ್ನು ಅಮಾನತುಗೊಳಿಸಿಸುತ್ತಾರೆ.

ಸಚಿವರು ಹೇಳೋದೇನು?
ಮಹಿಳೆ ಜೊತೆ ಕುಮಾರ್ ಅಸಭ್ಯವಾಗಿ ವರ್ತಿಸಿದ್ದರೆ, ಠಾಣೆಯಲ್ಲಿ ದೂರು ದಾಖಲಿಸಬಹುದಿತ್ತು. ಅದನ್ನು ಬಿಟ್ಟು ಹಿಗ್ಗಾಮುಗ್ಗಾ ಹೊಡೆದದ್ದು ಸರಿಯಲ್ಲ. ಕುಮಾರ್'ನ ಸ್ಪೈನಲ್ ಕಾರ್ಡ್ ಮುರಿದಿದೆ. ಇದು ಗಂಭೀರ ವಿಷಯ. ಹೀಗಾಗಿ, ಅವರನ್ನು ಸಸ್ಪೆಂಡ್ ಮಾಡಿಸಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸುತ್ತಾರೆ.

ಸ್ಪೈನಲ್ ಕಾರ್ಡ್ ಮುರಿದಿದೆಯಾ?
ಸಚಿವ ಪ್ರಮೋದ್ ಮಧ್ವರಾಜ್ ಹೇಳುವಂತೆ ಕುಮಾರ್'ನ ಸ್ಪೈನಲ್ ಕಾರ್ಡ್ ಮುರಿದಿದೆಯಾ? ತಾನು ಪೊಲೀಸ್ ಠಾಣೆಯಲ್ಲಿ ಕುಮಾರ್'ಗೆ ನಾಲ್ಕೇಟು ಭಾರಿಸಿದ್ದು ನಿಜ. ಆದರೆ, ಸ್ಪೈನಲ್ ಕಾರ್ಡ್ ಮುರಿಯುವಂತೆ ಹೊಡೆಯಲಿಲ್ಲ ಎಂದು ಪೇದೆ ಪ್ರಕಾಶ್ ಸ್ಪಷ್ಟಪಡಿಸುತ್ತಾರೆ. ಪೊಲೀಸ್ ಠಾಣೆಯಿಂದ ಹೋದ ಬಳಿಕ ಕುಮಾರ್ ತನ್ನ ಬೈಕ್ ಓಡಿಸಿಕೊಂಡು ಹೋಗಿದ್ದನ್ನ ತಾನು ನೋಡಿದ್ದೇನೆ. ಸ್ಪೈನಲ್ ಕಾರ್ಡ್ ಮುರಿದಿದ್ದರೆ ಬೈಕ್ ಓಡಿಸಲು ಆಗುತ್ತಿತ್ತೆ? ಎಂದು ಕಾನ್ಸ್'ಟೆಬಲ್ ಪ್ರಕಾಶ್ ಪ್ರಶ್ನಿಸುತ್ತಾರೆ.

ಪ್ರಕಾಶ್ ಹೇಳುತ್ತಿರುವುದು ನಿಜವೇ ಆಗಿದ್ದರೆ, ಸಚಿವ ಪ್ರಮೋದ್ ಮಧ್ವರಾಜ್ ತನ್ನ ನೌಕರನನ್ನು ರಕ್ಷಿಸಲು ಪೇದೆಯ ಜೀವನದಲ್ಲಿ ಚೆಲ್ಲಾಟವಾಡುತ್ತಿರುವುದು ಸ್ಪಷ್ಟ.

click me!