
ಹಾಸನ : ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ ಕೈ ತಪ್ಪಲು ಅಲ್ಲಿನ ಜನ ಬಿಜೆಪಿಗೆ ಮತ ಹಾಕಿದ್ದೇ ಕಾರಣ ಎಂದು ಹೇಳಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿವಾದ ಸೃಷ್ಟಿಸಿದ್ದಾರೆ. ಜತೆಗೆ, ಪರೀಕ್ಷಾ ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನಗಳಿಸುವಲ್ಲಿ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶ್ರಮ ಇದೆ ಎಂಬ ಮಾಧ್ಯಮ ವರದಿ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಆ ಯಮ್ಮ ಏನ್ ಕಡಿದು ಕಟ್ಟೆಹಾಕಿದೆ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತ್ಯತೀತ ಪಕ್ಷಗಳಿಗೆ ಓಟು ಹಾಕಿದ್ದರೆ ಉಡುಪಿ ಜಿಲ್ಲೆ ಎಸ್ಸೆಎಸ್ಸೆಲ್ಸಿ ಪರೀಕ್ಷೆಯಲ್ಲಿ ಫಸ್ಟ್ ಬರುತ್ತಿತ್ತು. ಬಿಜೆಪಿಗೆ ಓಟ್ ಹಾಕಿದ ಕಾರಣ ಐದನೇ ಸ್ಥಾನಕ್ಕೆ ಹೋಯಿತು. ಆದರೆ, ಹಾಸನ ಜಿಲ್ಲೆಯಲ್ಲಿ ಜಾತ್ಯತೀತ ಪಕ್ಷಗಳಿಗೆ ಓಟ್ ಹಾಕಿದ್ದರಿಂದ ಈ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯಿತು ಎಂದು ರೇವಣ್ಣ ವ್ಯಾಖ್ಯಾನ ಮಾಡಿದರು.
ರೋಹಿಣಿ ಸಿಂಧೂರಿ ವಿರುದ್ಧ ಕಿಡಿ: ಏತನ್ಮಧ್ಯೆ, ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ‘ಆ ಯಮ್ಮ ಏನ್ ಕಡಿದು ಕಟ್ಟೆಹಾಕಿದೆ? ಆ ಮೇಡಂ ಯಾವುದಾದರೂ ಶಾಲೆಯಲ್ಲಿ ಹೋಗಿ ಪಾಠ ಮಾಡಿದೆಯೇ? ಪರೀಕ್ಷೆಗಾಗಿ ಏನೇನ್ ಮೀಟಿಂಗ್ ಮಾಡಿ ಏನು ನಿರ್ಧಾರ ತೆಗೆದುಕೊಂಡಿದ್ದಾರೆ?’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ, ಮುಖ್ಯ ಶಿಕ್ಷಕ, ಶಿಕ್ಷಕರು ಮತ್ತು ಮಕ್ಕಳ ಶ್ರಮದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆಯೇ ಹೊರತು ಬೇರೆ ಇನ್ಯಾರಿದಲೋ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ತಮ್ಮ ಪತ್ನಿ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಪಾತ್ರ ಕೂಡ ಫಲಿತಾಂಶ ಸುಧಾರಣೆಯಲ್ಲಿದೆ ಎಂದು ರೇವಣ್ಣ ಸ್ಮರಿಸಿದರು. ಕಡಿಮೆ ಅಂಕ ಪಡೆದ 52 ಶಾಲೆಗಳ ಮುಖ್ಯ ಶಿಕ್ಷಕರ ಸಭೆ ಕರೆದು, ಮಕ್ಕಳಿಗೆ ಮಾಸಿಕ ಪರೀಕ್ಷೆ ನಡೆಸಿ, ವಿಶೇಷ ತರಗತಿ ನಡೆಸುವಂತೆ ನೋಡಿಕೊಳ್ಳುವ ಮೂಲಕ ಭವಾನಿ ಕೂಡ ಫಲಿತಾಂಶ ಸುಧಾರಣೆಗೆ ಅವಿರತ ಶ್ರಮ ಹಾಕಿದ್ದರು ಎಂದು ರೇವಣ್ಣ ತಿಳಿಸಿದರು.
ಸಿಎಂ ಕೊಡುಗೆ: ಕೆಲ ಶಾಲೆಗಳಲ್ಲಿ ಭಾನುವಾರವೂ ಶಿಕ್ಷಕರು ತರಗತಿ ಮಾಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಲು .1200 ಕೋಟಿ ನೀಡಿದ್ದು, ನಬಾರ್ಡ್‌ನಿಂದ ಹಣ ನೀಡಲಾಯಿತು. ಶಿಕ್ಷಕರ ಸಮಸ್ಯೆ ನಿವಾರಿಸಿದ್ದಲ್ಲದೆ 2000 ಸಾವಿರಕ್ಕೂ ಹೆಚ್ಚು ಬೆಂಚು, ಕಂಪ್ಯೂಟರ್ ಒದಗಿಸಲಾಯಿತು, ಪ್ರತೀ ತಿಂಗಳು ಡಿಡಿಪಿಐ, ಬಿಇಓಗಳು, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಭೆ ಕರೆದು ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಶ್ರಮಿಸಬೇಕು ಎಂದು ತಾಕೀತು ಮಾಡಲಾಗಿತ್ತು ಎಂದು ವಿವಿಧ ಕಾರಣಗಳನ್ನು ಪಟ್ಟಿಮಾಡಿದರು.
ಅಲ್ಲದೆ, ಮುಖ್ಯ ಕಾರ್ಯದರ್ಶಿ ತಕ್ಕಲಪಾಟಿ ಮಹಾದೇವ ವಿಜಯಭಾಸ್ಕರ್ ಅವರು, ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿದ್ದ ಎಂ.ವಿ.ಜಯಂತಿ, ಕೌಶಿಕ ಮುಖರ್ಜಿ ಅವರು ಜಿಲ್ಲೆಯ ಶಿಕ್ಷಣಕ್ಕೆ ಪ್ರತಿ ಹಂತದಲ್ಲೂ ಸಹಾಯ ಮಾಡಿದರು. ರೋಹಿಣಿ ಸಿಂಧೂರಿ ಬೇಕಿಲ್ಲದ ಮತ್ತು ಅಗತ್ಯವಿಲ್ಲದೆ ಶಿಕ್ಷಕರ ಬೋಧನಾ ಸಾಮರ್ಥ್ಯ ಪರೀಕ್ಷೆ ಮಾಡಲು ಹೋಗಿ ಹಿನ್ನೆಡೆ ಅನುಭವಿಸಿದ್ದರು ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.